Advertisement

ಮಲೇಶ್ಯ ಮಾಸ್ಟರ್ ಬಾಡ್ಮಿಂಟನ್‌: ಸನ್‌ ವಾನ್‌, ರಚನೋಕ್‌ ಚಾಂಪಿಯನ್ಸ್‌

12:30 AM Jan 21, 2019 | Team Udayavani |

ಕೌಲಾಲಂಪುರ: ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ ಹಾಗೂ ಥಾಯ್ಲೆಂಡ್‌ನ‌  ರಚನೋಕ್‌ ಇಂತಾನನ್‌ “ಮಲೇಶ್ಯ ಮಾಸ್ಟರ್’ ಬ್ಯಾಡ್ಮಿಂಟನ್‌ ಕೂಟದ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ.

Advertisement

ರವಿವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಸನ್‌ ವಾನ್‌ ಹೊ ವಿಶ್ವದ 4ನೇ ಶ್ರೇಯಾಂಕಿತ, ಚೀನದ ಚೆನ್‌ ಲಾಂಗ್‌ ಅವರನ್ನು 21-17, 21-19 ನೇರ ಗೇಮ್‌ಗಳಿಂದ ಸೋಲಿಸಿದರು.

ವನಿತಾ ವಿಭಾಗದ ಪ್ರಶಸ್ತಿ ಕಾದಾಟದಲ್ಲಿ ರಚನೋಕ್‌ ಇಂತಾನನ್‌ ಹಾಲಿ ವಿಶ್ವ ಚಾಂಪಿಯನ್‌, ಸ್ಪೇನಿನ ಕ್ಯಾರೋಲಿನ್‌ ಮರಿನ್‌ ವಿರುದ್ಧ 21-9, 22-20 ನೇರ ಗೇಮ್‌ಗಳ ಗೆಲುವು ದಾಖಲಿಸಿ ಪ್ರಶಸ್ತಿ ಉಳಿಸಿಕೊಂಡರು.

ಹೊ-ಲಾಂಗ್‌ ತೀವ್ರ ಪೈಪೋಟಿ
ಪಂದ್ಯದ ಆರಂಭದಿಂದಲೇ ಹೊ-ಲಾಂಗ್‌ ನಡುವೆ ತೀವ್ರ ಪೈಪೋಟಿ ನಡೆಯಿತು. ಮೊದಲ ಗೇಮ್‌ ಆರಂಭದಲ್ಲೇ ಮುನ್ನಡೆ ಸಾಧಿಸಿದ ಸನ್‌ ವಾನ್‌ ಅತ್ಯುತ್ತಮ ಹೊಡೆತಗಳಿಂದ ಚೆನ್‌ ಲಾಂಗ್‌ ಅವರನ್ನು ಕಟ್ಟಿಹಾಕಿದರು. ದ್ವಿತೀಯ ಗೇಮ್‌ನಲ್ಲಿ ಇಬ್ಬರೂ ಸತತ ಅಂಕ ಗಳಿಸತ್ತ ಆಟದ ತೀವ್ರತೆಯನ್ನು ಹೆಚ್ಚಿಸುತ್ತ ಹೋದರು. ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ಚೆನ್‌ ದ್ವಿತೀಯ ಗೇಮ್‌ನಲ್ಲಿ ಅತ್ಯುತ್ತಮವಾಗಿ ಆಡಿ ಸನ್‌ ವಾನ್‌ಗೆ ಪ್ರತಿರೋಧ ಒಡ್ಡಿದರು. ಆದರೆ ಪಂದ್ಯದ ಕೊನೆಯಲ್ಲಿ ಸನ್‌ ವಾನ್‌ 2 ಅಂಕಗಳ ಮುನ್ನಡೆ ಕಾಯ್ದುಕೊಂಡು ಜಯಿಸಿ ಪ್ರಶಸ್ತಿ ಗೆದ್ದರು.”ಚೆನ್‌ ಲಾಂಗ್‌ ವಿರುದ್ಧದ ಎಲ್ಲ ಪಂದ್ಯಗಳೂ ಕಷ್ಟಕರವಾಗಿರುತ್ತವೆ. ಇಂದು ನಾನು ಅವರ ವಿರುದ್ಧ ಜಯಿಸಿರುವುದು ಖುಷಿ ನೀಡಿದೆ. ನನ್ನ ಸಹಜ ಆಟವನ್ನು ಇಲ್ಲಿ ಆಡಿದ್ದೇನೆ, ಮುಂದಿನ ಟೂರ್ನಿಗಳನ್ನು ಎದುರು ನೋಡುತ್ತಿದ್ದೇನೆ’ ಎಂದು ಸನ್‌ ವಾನ್‌ ಪ್ರತಿಕ್ರಿಯಿಸಿದರು.

ವಿಶ್ವ ಚಾಂಪಿಯನ್‌ಗೆ ಶಾಕ್‌
ವನಿತಾ ಸಿಂಗಲ್ಸ್‌ನಲ್ಲಿ ರಚನೋಕ್‌ ಅವರದು ವಿಶ್ವ ಚಾಂಪಿಯನ್‌ಗೆ ಆಘಾತವಿಕ್ಕಿದ ಸಾಧನೆ. ಮೊದಲ ಗೇಮ್‌ನಲ್ಲಿ 11 ಅಂಕಗಳ ಅಂತರದಿಂದ ಹೀನಾಯವಾಗಿ ಸೋಲನುಭವಿಸಿದ ಮರಿನ್‌ ದ್ವಿತೀಯ ಗೇಮ್‌ನಲ್ಲಿ ರಚನೋಕ್‌ ಅವರಿಗೆ ತಕ್ಕ ಪೈಪೋಟಿ ನೀಡಿದರು. ಆದರೂ ಮರಿನ್‌ ಅವರ ಆಟಕ್ಕೆ ತಕ್ಕ ಉತ್ತರ ನೀಡಿದ ರಚನೋಕ್‌ 22-20 ಅಂಕಗಳಿಂದ ಜಯ ಸಾಧಿಸಿದರು.

Advertisement

“ಇಂದು ಕೂಡ ನಾನು ಎಂದಿನಂತೆಯೇ ಆಡಿದೆ. ಈ ಪ್ರಶಸ್ತಿ ನನ್ನನ್ನು ಇನ್ನಷ್ಟು ಉತ್ತಮ ಹಾಗೂ ಬಲಿಷ್ಠ ಆಟಗಾರ್ತಿಯನ್ನಾಗಿ ಬದಲಾಯಿಸಿದೆ. ಮುಂದಿನ ಎಲ್ಲ ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನ ನೀಡಬೇಕೆಂಬ ಗುರಿ ಹೊಂದಿದ್ದೇನೆ’ ಎಂದು ರಚನೋಕ್‌ ಹೇಳಿದರು.

ಡಬಲ್ಸ್‌ ವಿಜೇತರು
ವನಿತಾ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ವಿಶ್ವದ ನಂ. 1 ಮಲೇಶ್ಯದ ಯುಕಿ ಫ‌ುಕುಶಿಮಾ-ಸಯಾಕಾ ಹಿರೋಟಾ ಜೋಡಿ ಇಂಡೋನೇಶ್ಯದ ಗ್ರಾಸಿಯಾ ಪೊಲೀ-ಅಪ್ರಿಯಾನಿ ರಹಾಯೂ ಜೋಡಿಯ ವಿರುದ್ಧ 18-21, 21-16, 21-16 ಗೇಮ್‌ಗಳಿಂದ ಜಯಿಸಿತು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಇಂಡೋನೇಶ್ಯದ ಮಾರ್ಕೊಸ್‌ ಫೆರ್ನಾಡ್ಲಿ ಗಿಡಿಯೊನ್‌-ಕೆವಿನ್‌ ಸಂಜಯ ಶುಕಮುಲೊj ಜೋಡಿ ಮಲೇಶ್ಯದ ಒಂಗ್‌ ಯೆವ್‌ ಸಿನ್‌-ತೆಯಿ ಎನ್‌ ಯಿ ಜೋಡಿಯನ್ನು 21-15, 21-16 ನೇರ ಗೇಮ್‌ನಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿತು. ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಜಪಾನ್‌ ಯುಟಾ ವಟನಾಬೆ- ಏರಿಸಾ ಹಿಂಗಶಿನೊ ಜೋಡಿ 21-15, 21-16 ಗೇಮ್‌ಗಳಿಂದ ಥಾಯ್ಲೆಂಡ್‌ನ‌ ಡೆಚಾಪೊಲ್‌ ಪುವಾರಾನುಕ್ರೂಹ್‌-ಸಪ್ಸಿರೀ ಟೀರಾಟ್ಟಾನ್‌ಚಾಯಿ ಜೋಡಿಯನ್ನು ಸೋಲಿಸಿದರು.

ಇತ್ತೀಚೆಗಷ್ಟೇ ಮೂಗಿನ ಕ್ಯಾನ್ಸರ್‌ಗೆ ಚಿಕಿತ್ಸೆಗೆ ಒಳಗಾದ ತವರಿನ ಆಟಗಾರ ಲಿ ಚಾಂಗ್‌ ವೀ ಮಲೇಶ್ಯಾ ಮಾಸ್ಟರ್ ಚಾಂಪಿಯನ್‌ಗಳಿಗೆ ಪ್ರಶಸ್ತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next