ಹೊಸದಿಲ್ಲಿ: ಮಲಯಾಳಂ ನಟಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹೊಸ ಬೆಳವಣಿಗೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ 3 ಸಾಕ್ಷಿಗಳನ್ನು ಮರು ವಿಚಾರಣೆಗೆ ಮತ್ತು 5 ಹೊಸ ಸಾಕ್ಷಿಗಳಿಗೆ ಸಮನ್ಸ್ಗೆ ಕೋರಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಸೋಮವಾರ ಪುರಸ್ಕರಿಸಿದೆ.
ಈ ಹಿಂದೆ ಸಾಕ್ಷಿಗಳನ್ನು ಮರು ವಿಚಾರಣೆಗೆ ಒಳಪಡಿಸುವ ಮನವಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.
2017 ರಲ್ಲಿ ಮಲಯಾಳಂ ನಟಿಯೊಬ್ಬರ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಸರಾಂತ ನಟ ದಿಲೀಪ್ ಅವರನ್ನು ಜುಲೈ 2017 ರಲ್ಲಿ ಬಂಧಿಸಲಾಗಿತ್ತು. ಅವರು ಹಲವಾರು ವಾರಗಳ ಕಾಲ ಜೈಲಿನಲ್ಲಿದ್ದು, ಜಾಮೀನು ಪಡೆದು ಹೊರಬಂದಿದ್ದರು.
ಈ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಸಂಚುಕೋರ ಎಂದು ಹೆಸರಿಸಲಾಗಿದ್ದು, “ಸೇಡಿನ ಅಪರಾಧ” ಆರೋಪ ಹೊರಿಸಲಾಗಿದೆ.
Related Articles
ದಿಲೀಪ್ ಜಾಮೀನಿನ ಮೇಲೆ ಹೊರಬಂದ ಕೂಡಲೇ ಕಾರಿನಲ್ಲಿ ನಟಿಯ ಮೇಲೆ ನಡೆದ ಹಲ್ಲೆಯ ದೃಶ್ಯಾವಳಿಗಳನ್ನು ನೋಡಿದ್ದೇನೆ ಎಂದು ನಿರ್ದೇಶಕ ಬಾಲಚಂದ್ರ ಕುಮಾರ್ ಬಹಿರಂಗಪಡಿಸಿದ ನಂತರ ಈ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ವಿಐಪಿಯೊಬ್ಬರು ನಟನಿಗೆ ದೃಶ್ಯಗಳನ್ನು ಹಸ್ತಾಂತರಿಸಿದ್ದು, ಈ ಬಗ್ಗೆ ಅವರು ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
ನಿರ್ದೇಶಕ ಬಾಲಚಂದ್ರ ಕುಮಾರ್ ಅವರ ಹೇಳಿಕೆಯ ಪ್ರಕಾರ ಕೇರಳದ ಡಿಜಿಪಿ, ಬಿ. ಸಂಧ್ಯಾ, ಎಡಿಜಿಪಿ ಶ್ರೀಜಿತ್, ಎಸ್ಪಿಗಳಾದ ಎ.ವಿ. ಜಾರ್ಜ್ ಮತ್ತು ಎಸ್. ಸುದರ್ಶನ್, ಮತ್ತು ಡಿಎಸ್ಪಿ ಬೈಜು ಪೌಲೋಸ್ ಅವರ ಮೇಲೆ ಮೇಲೆ ದಾಳಿಗೆ ಸಿದ್ದತೆ ನಡೆಸಲಾಗಿತ್ತು.
ತನಿಖಾ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಇತ್ತೀಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರ ಅಪರಾಧ ವಿಭಾಗದ ತಂಡವು ಇತ್ತೀಚೆಗೆ ದಿಲೀಪ್, ಅವರ ಸಹೋದರನ ಮನೆಗಳು ಮತ್ತು ಅವರ ಗ್ರ್ಯಾಂಡ್ ಪ್ರೊಡಕ್ಷನ್ ಕಂಪನಿಯ ಕಚೇರಿಯ ಮೇಲೆ ದಾಳಿ ನಡೆಸಿದ್ದರು.
ಪೊಲೀಸರು ದಿಲೀಪ್ ಮತ್ತು ಅವರ ಸಂಬಂಧಿಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ.