Advertisement

ಮತ್ತೆ ಪ್ರೇಕ್ಷಕರ ಮುಂದೆ ಬಂದ ಮಾಲಾಶ್ರೀ: ನೈಟ್‌ ಕರ್ಫ್ಯೂ ನಲ್ಲಿ ಹೊಸ ಲುಕ್‌

03:24 PM Jun 03, 2022 | Team Udayavani |

ನಟಿ ಮಾಲಾಶ್ರೀ ಅಂದ್ರೆ ಮೊದಲು ನೆನಪಿಗೆ ಬರುವುದು ಅವರ ಆ್ಯಕ್ಷನ್‌ ಸಿನಿಮಾಗಳು, ಖಡಕ್‌ ಲುಕ್‌ನ ಪಾತ್ರಗಳು. ಕನ್ನಡ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್‌ ಆಗಿ ಇಂಥ ಪಾತ್ರಗಳ ಮೂಲಕವೇ ಸಿನಿಪ್ರಿಯರಿಗೆ ಇಷ್ಟವಾದವರು ಮಾಲಾಶ್ರೀ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರದ ಮಾಲಾಶ್ರೀ ಈ ಬಾರಿ ಡಾಕ್ಟರ್‌ ಪಾತ್ರದಲ್ಲಿ ಪ್ರೇಕ್ಷಕರ ಮುಂದೆಬರುವ ತಯಾರಿಯಲ್ಲಿದ್ದಾರೆ.

Advertisement

ಹೌದು, ಇದೇ ಮೊದಲ ಬಾರಿಗೆ ಮಾಲಾಶ್ರೀ “ನೈಟ್‌ ಕರ್ಫ್ಯೂ’ ಸಿನಿಮಾದಲ್ಲಿ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೇ ರಾತ್ರಿ, ಒಂದೇ ಲೊಕೇಶನ್‌ ಮತ್ತು ಒಂದೇ ಕಾಸ್ಟೂಮ್‌ನಲ್ಲಿ ಇಡೀ “ನೈಟ್‌ ಕರ್ಫ್ಯೂ’ ಸಿನಿಮಾ ನಡೆಯುತ್ತದೆಯಂತೆ.

ಇತ್ತೀಚೆಗೆ “ನೈಟ್‌ ಕರ್ಫ್ಯೂ’ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಇದೇ ವೇಳೆ ಮಾತಿಗೆ ಸಿಕ್ಕ ಮಾಲಾಶ್ರೀ ತಮ್ಮ ಹೊಸ ಸಿನಿಮಾ, ಹೊಸ ಪಾತ್ರ ಮತ್ತು ಮುಂದಿನ ಯೋಜನೆಗಳ ಬಗ್ಗೆ ಒಂದಷ್ಟು ಮಾತನಾಡಿದರು.

“ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ತುಂಬಾ ಸಿನಿಮಾ ಆಫ‌ರ್ ಕೈಬಿಟ್ಟಿದ್ದೇನೆ. ಅದಕ್ಕೆ ಕಾರಣ, ಹೀಗೆ ಬಂದ ಆಫ‌ರ್‌ಗಳಲ್ಲಿ ಪೊಲೀಸ್‌, ಸಿಬಿಐ, ಆ್ಯಕ್ಷನ್‌ ಹೆಚ್ಚಾಗಿರುವಂಥ ಕ್ಯಾರೆಕ್ಟರ್‌ ಗಳೇ ಹೆಚ್ಚಾಗಿರುತ್ತಿದ್ದವು. ಆದ್ರೆ “ನೈಟ್‌ ಕರ್ಫ್ಯೂ’ ಸಿನಿಮಾ ಅದೆಲ್ಲದಕ್ಕಿಂತ ಹೊಸ ಥರದಲ್ಲಿತ್ತು. ಸಿನಿಮಾ ನೋಡಿದವರಿಗೆ ಹೀಗೂ ಸಾಧ್ಯವಾ ಎಂದು ಪ್ರಶ್ನೆ ಮೂಡಿಸುವಂತಿದೆ. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ ಮಾಲಾಶ್ರೀ.

“ಈ ಸಿನಿಮಾದಲ್ಲಿ ನಟಿಸುವಾಗ ಖುಷಿ, ಭಯ ಎರಡೂ ಇತ್ತು. ಇಡೀ ಚಿತ್ರತಂಡ ಹೊಸದು ನನಗೆ ಒಂಥರಾ ಚಾಲೆಂಜಿಂಗ್‌ ಆಗಿತ್ತು. ಎಲ್ಲರೂ ನಾವು ನಿಮ್ಮ ಅಭಿಮಾನಿಗಳು ಎಂದಾಗ ಭಯ ಆಗುತ್ತಿತ್ತು. ಇದೊಂಥರಾ ಹೊಸ ಆರಂಭ ನನಗೆ. ಮಕ್ಕಳು ಸಹ ನಿಮ್ಮ ಸಿನಿಮಾ ಇಷ್ಟ ಎನ್ನುತ್ತಾರೆ. ಹೆಂಗಸರು ಸಹ ನೀವೇ ನಮಗೆ ಸ್ಫೂರ್ತಿ ಎನ್ನುತ್ತಾರೆ. ಜನ ತೋರಿಸುವ ಪ್ರೀತಿ ನೋಡಿದರೆ, ನಿಜಕ್ಕೂ ನಾನೇನಾ ದರೂ ಮಾಡಿದ್ದೀನಾ ಎಂದನಿಸುತ್ತದೆ’ ಎನ್ನುವುದು ಮಾಲಾಶ್ರೀ ಮಾತು.

Advertisement

“”ನೈಟ್‌ ಕರ್ಫ್ಯೂ’ ಸಿನಿಮಾದಲ್ಲಿ ನನ್ನದು ಡಾಕ್ಟರ್‌ ಪಾತ್ರ. ಮೊದಲಿಗೆ ಜನ ಕರೊನಾ ಮರೆಯುತ್ತಿರುವ ಸಂದರ್ಭದಲ್ಲಿ ಮತ್ತೆ ನೆನಪಿಸಬೇಕಾ ಎಂದನಿಸಿತು. ಆದರೆ, ಇದರಲ್ಲಿರುವ ಕಂಟೆಂಟ್‌ ನಾನು ಈ ಕ್ಯಾರೆಕ್ಟರ್‌ ಮಾಡುವಂತೆ ಮಾಡಿತು. ಇದು ಒಂದೇ ನೈಟ್‌, ಒಂದೇ ಲೊಕೇಶನ್‌ ಮತ್ತು ಒಂದೇ ಕಾಸ್ಟ್ಯೂಮ್ ನಲ್ಲಿ ಎಲ್ಲೂ ಬೋರ್‌ ಹೊಡೆಸದಂತೆ ಅದ್ಭುತವಾಗಿ ಸಿನಿಮಾ ಬಂದಿದೆ. ಆಡಿಯನ್ಸ್‌ಗೂ ಈ ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್‌ ಎರಡೂ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.

ಅಂದಹಾಗೆ, “ಸ್ವರ್ಣಗಂಗಾ ಫಿಲಂಸ್‌’ ಬ್ಯಾನರ್‌ನಲ್ಲಿ ಬಿ. ಎಸ್‌ ಚಂದ್ರಶೇಖರ್‌ ನಿರ್ಮಿಸುತ್ತಿರುವ “ನೈಟ್‌ ಕರ್ಫ್ಯೂ’ ಸಿನಿಮಾಕ್ಕೆ ರವೀಂದ್ರ ವೆಂಶಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪ್ರಮೋದ್‌ ಭಾರತೀಯ ಛಾಯಾಗ್ರಹಣ, ಸಿ. ರವಿಚಂದ್ರನ್‌ ಸಂಕಲನವಿದೆ.

“ನೈಟ್‌ ಕರ್ಫ್ಯೂ’ ಚಿತ್ರದಲ್ಲಿ ಮಾಲಾಶ್ರೀ ಅವರೊಂದಿಗೆ ರಂಗಾಯಣ ರಘು, ರಂಜನಿ ರಾಘವನ್‌, ಬಲರಾಜವಾಡಿ, ಸಾಧುಕೋಕಿಲ, ಅಶ್ವಿ‌ನ್‌ ಹಾಸನ್‌, ಪ್ರಮೋದ್‌ ಶೆಟ್ಟಿ, ವರ್ಧನ್‌ ತೀರ್ಥಹಳ್ಳಿ, ಮಂಜು ಪಾವಗಡ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next