ಮಲಪ್ಪುರಂ: ಮಲಪ್ಪುರಂನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ಮಂದಿಯನ್ನು ಬಲಿ ತೆಗೆದುಕೊಂಡ ಪ್ರವಾಸಿ ದೋಣಿ ದುರಂತದ ನ್ಯಾಯಾಂಗ ತನಿಖೆಗೆ ಕೇರಳ ಸರ್ಕಾರವು ಸೋಮವಾರ ಘೋಷಿಸಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ನಿರ್ಧರಿಸಿದೆ.
ತಿರುರಂಗಂಡಿ ತಾಲೂಕು ಆಸ್ಪತ್ರೆ ಮತ್ತು 12 ಸದಸ್ಯರನ್ನು ಕಳೆದುಕೊಂಡ ಕುನ್ನುಮ್ಮೆಲ್ ಕುಟುಂಬಕ್ಕೆ ಭೇಟಿ ನೀಡಿದ ನಂತರ ಇಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಪಘಾತವನ್ನು ‘ದುರಂತ’ ಎಂದು ಬಣ್ಣಿಸಿದರು. ಚಿಕಿತ್ಸೆಯಲ್ಲಿರುವವರ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ:ಸಾರ್ವಭೌಮತ್ವ ವಿಚಾರ: ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ದೂರು
ತಾನೂರಿನಲ್ಲಿ ನಡೆದ ಸರ್ವಪಕ್ಷಗಳ ಸಭೆಯ ನಂತರ ವಿಜಯನ್ ಅವರು ತನಿಖೆ ಮತ್ತು ಪರಿಹಾರವನ್ನು ಘೋಷಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದರು.
ಪ್ರವಾಸಿ ದೋಣಿಗಳಿಗೆ ಸರ್ಕಾರ ಈ ಹಿಂದೆ ಸುರಕ್ಷತಾ ಪ್ರೋಟೋಕಾಲ್ ಅನ್ನು ಆರಂಭಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಅವುಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಸಿಎಂ ಹೇಳಿದರು.