ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಸಂಸ್ಥೆ ಅಸ್ತಿತ್ವಕ್ಕೆ ಬಂದು ಇಪ್ಪತ್ತರ ಎತ್ತರಕ್ಕೆ ಬೆಳೆದಿದೆ. ವರ್ಷಂಪ್ರತಿ ಕಲಾಸಕ್ತರ ಚಿತ್ತವನ್ನು ಮುಟ್ಟಿ, ಗಟ್ಟಿಯಾಗಿ ಸಾಗಿದ ಸಂಘಟನೆಯ ಕಾರ್ಯಕರ್ತರಿಗೆ ಇದೀಗ “ವಿಂಶತಿ ಕಲೋತ್ಸವ’ ಹರ್ಷ. ಯಕ್ಷಗಾನದ ಅಭಿರುಚಿಯುಳ್ಳವರ ಊರಲ್ಲಿ ವರ್ಷಪೂರ್ತಿ ಸಂಚಾರ. ಸೊಗಸಾದ ಇಪ್ಪತ್ತು ಪ್ರದರ್ಶನ ನೀಡಿ ದಿಗ್ವಿಜಯ ಸಾಧಿಸುವುದು ಕಾರ್ಯಾಧ್ಯಕ್ಷ ದೇವಾನಂದ ಭಟ್ಟರ ಧ್ಯೇಯ. ಸರಣಿಯ 10ನೇ ಕಾರ್ಯಕ್ರಮಕ್ಕೆ ಕರ ಜೋಡಿಸಿ ಆಸರೆ ಯಾದವರು ಕಾರ್ಕಳ ತಾಲೂಕು ಮಾಳ ಗ್ರಾಮದ ಕಾಲಕಾಮ ಪರಶು ರಾಮ ದೇವಸ್ಥಾನದ ಆಡಳಿತ ವರ್ಗ.
ನಗರದಿಂದ ಬಲುದೂರ ಘಟ್ಟ ಪ್ರದೇಶದ ದಟ್ಟ ಅಡವಿಯ ತಪ್ಪಲಿನಲ್ಲಿ ಆ ಪರಶುರಾಮನ ಸಾನ್ನಿಧ್ಯ. ಕಳೆದ ರಾಮ ನವಮಿಯಂದು ಅಲ್ಲೇ ಒಪ್ಪ ಓರಣದ ಕಲಾಪ್ರಕ್ರಿಯೆ. ಪ್ರಕೃತಿ ಸೌಂದರ್ಯದ ಮರದ ನೆರಳಲ್ಲೇ ನಿರ್ಮಿತ ಸರಳ ವೇದಿಕೆ. ಹಿಮ್ಮೇಳ- ಮುಮ್ಮೇಳ ಸಾಂಗತ್ಯ, ಅಭಿನಯ ವೈವಿಧ್ಯ, ಅರ್ಥಗಾರಿಕೆ ಸಂವಹನ, ಬಣ್ಣಗಾರಿಕೆಯ ಬಗೆ, ಆಟ-ಕೂಟ, ಮುಂಜಾವಿನಿಂದ ಮುಸ್ಸಂಜೆಯವರೆಗೆ ಕಲಾಸಕ್ತ ಚಿಣ್ಣರಿಗಾಗಿ ಬಾಲಪಾಠ.
ದೇವೇಂದ್ರ ಒಡ್ಡೊಲಗ, ಸುಭದ್ರ- ಅಭಿಮನ್ಯು, ಕರ್ಣಾರ್ಜುನ… ವಿವಿಧ ಸನ್ನಿವೇಶಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ಪಾತ್ರಧಾರಿಗಳ ರಂಗಚಲನೆ, ರಸಾಭಿವ್ಯಕ್ತಿ, ರಂಗ ನಿಯಮ, ಆಯುಧ ಗ್ರಹಣ, ಯುದ್ಧ ಕೌಶಲ… ಕುರಿತು ವ್ಯಾಖ್ಯಾನಿಸಿದ ಕಲಾವಿದ ಉಜಿರೆ ಅಶೋಕ ಭಟ್ಟರು ಶಿಬಿರವನ್ನು ಮುನ್ನಡೆಸಿದರು. ಬಲಿಪ ಪ್ರಸಾದ ಭಾಗವತರ ಹಿರಿತನದಲ್ಲಿ ಆನಂದ ಗುಡಿಗಾರ ಮತ್ತು ರವಿರಾಜ್ ಜೈನ್ ಹಿಮ್ಮೇಳ ನುಡಿಸಿದರು. ವಿದ್ಯಾರ್ಥಿಗಳಾದ ಪ್ರದ್ಯುಮ್ನ ಮೂರ್ತಿ, ಪ್ರಹ್ಲಾದ ಮೂರ್ತಿ, ಅಮೃತ್, ಅಜಯ್ ಸುಬ್ರಹ್ಮಣ್ಯ, ದಿವಿಜೇಶ್… ಶಿಬಿರದ ಗುರುಗಳ ನಿರೂಪದಂತೆ ರಂಗ ನಡೆಯನ್ನು ಬಲು ಹುರುಪಿನಿಂದ ಅಭಿವ್ಯಕ್ತಿಗೊಳಿಸಿದರು.
ಆಂಗಿಕ, ಆಹಾರ್ಯ, ಸಾತ್ವಿಕ, ವಾಚಿಕಗಳೆಂಬ ಚತುರ್ವಿಧ ಅಭಿನಯದ ಸಮಪಾಕದಿಂದ ಯಕ್ಷಗಾನ ಕಲೆ ಕರಾವಳಿ ಯಲ್ಲಿ ಬೆಳೆದು ಬಂದಿದೆ. ವೇಷ ಭೂಷಣ ತೊಡದೆ ಕುಳಿತಲ್ಲೇ ಪುರಾಣ ಕಥೆಯನ್ನು ವಾದ ಸಂವಾದದ ಮೂಲಕ ಕೇಳುಗರ ಮುಂದಿರಿಸುವುದೇ ತಾಳಮದ್ದಲೆ. ಭಾವನೆ ಮತ್ತು ಶ್ರುತಿಯನ್ನು ಕಾಪಾಡಿಕೊಂಡು ಔಚಿತ್ಯ ಮೀರದ ಮಾತು ಅನಾವರಣಗೊಳಿಸಬೇಕು. “ಅರ್ಥಗಾರಿಕೆ ಸಂವಹನ’ ವಿಚಾರ ಗೋಷ್ಠಿಯಲ್ಲಿ ಡಾ| ಕೋಳ್ಯೂರು ರಾಮಚಂದ್ರ ರಾವ್ ಮತ್ತು ಪ್ರೊ| ಎಂ. ಎಲ್. ಸಾಮಗರು ತಮ್ಮ ಅನುಭವ ತೆರೆದಿಟ್ಟರು.
ಕೈಕೇಯಿ- ಮಂಥರೆ, ಬಲರಾಮ- ವನಪಾಲಕ ಕಥಾಭಾಗದ ಸಂವಾದ ಪ್ರಸ್ತುತಪಡಿಸಲಾಯಿತು. ಮಹಾವೀರ ಪಾಂಡಿ ಮತ್ತು ಸುಬ್ರಹ್ಮಣ್ಯ ಬೈಪಾಡಿತ್ತಾಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಯಕ್ಷದೇವರ ಮಕ್ಕಳ ಮೇಳದ “ಶಶಿಪ್ರಭಾ ಪರಿಣಯ’ ಬಯಲಾಟ ಪ್ರದರ್ಶಿತವಾಯಿತು.
ಸಮಾರೋಪದಲ್ಲಿ ಕಲಾವಿದ ರಾದ ಮಲ್ಲಾರು ದಿ| ಬಾಬು ರಾವ್ ಮತ್ತು ಇತ್ತೀಚೆಗೆ ಅಗಲಿದ ಮಾಳ ಹರಿಹರ ಜೋಶಿ ಅವರ ಸಂಸ್ಮರಣೆ ಗೈಯಲಾಯಿತು. ಸ್ಥಳೀಯ ಭಾಗವತ ವಾಸುದೇವ ಮರಾಠೆ ಅವರನ್ನು ಸಮ್ಮಾನಿಸಲಾಯಿತು.
ಡಾ| ಎಂ. ಪ್ರಭಾಕರ ಜೋಶಿ ಮತ್ತು ಪರಶುರಾಮ ದೇವಳದ ಆಡಳಿತ ಮೊಕ್ತೇಸರ ಸುಬ್ರಾಯ ಲೋಂಡೆ ಇವರ ಸ್ಫೂರ್ತಿಯ ಸೆಲೆ ಈ ಯಶಸ್ವಿ ಕಾರ್ಯಕ್ರಮಕ್ಕೆ ಬಲವಾಗಿ ಪರಿಣಮಿಸಿತು.
ಸುಬ್ರಹ್ಮಣ್ಯ ಬೈಪಾಡಿತ್ತಾಯ