ಮುಂಬಯಿ: ಮಲಾಡ್ ಪೂರ್ವದ ಇರಾನಿ ಕಾಲನಿಯ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ 62ನೇ ವಾರ್ಷಿಕ ಮಹಾಪೂಜೆಯು ಮಾ. 25ರಂದು ಬೆಳಗ್ಗೆ 8ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8ರಿಂದ ಗಣಹೋಮ, ಅಶ್ವತ್ಥ ಪೂಜೆ, ಮಹಾಪ್ರಸಾದ ಪೂಜೆ,ಪಲ್ಲಪೂಜೆ, ಮಹಾಆರತಿ, ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ತುಳು-ಕನ್ನಡಿಗರು ಸೇರಿದಂತೆ ವಿವಿಧೆಡೆ ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು.
ಅಪರಾಹ್ನ 2.30 ರಿಂದ ಶನಿದೇವರ ಕಲಶ ಪ್ರತಿಷ್ಠಾಪನೆ, ಬಲಿಮೂರ್ತಿಯ ಮೆರವಣಿಗೆ, ಶನಿಗ್ರಂಥ ಪಾರಾಯಣ, ಸಮಿತಿಯ ಸದಸ್ಯರುಗಳಿಂದ ಭಜನ ಕಾರ್ಯಕ್ರಮ, ಸಂಜೆ 6 ರಿಂದ ಮಹಾಮಂಗಳಾರತಿ, ಸಂಜೆ 6.30 ರಿಂದ ತೀರ್ಥ ಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾತ್ರಿ 7 ರಿಂದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರುಗಳಿಂದ ಬ್ರಹ್ಮ ಬಲಾಂಡಿ ಯಕ್ಷಗಾನ ಪ್ರದರ್ಶನಗೊಂಡಿತು.
ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಪರವಾಗಿ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಎಚ್. ಎಸ್. ಕರ್ಕೇರ, ಎಂ. ಎನ್. ಸುವರ್ಣ, ಜತೆ ಕೋಶಾಧಿಕಾರಿಗಳಾದ ಮೋಹನ್ ಜಿ. ಬಂಗೇರ, ಕರುಣಾಕರ ಎನ್. ಸಾಲ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್. ಪಿ. ದೇವಾಡಿಗ, ಸತೀಶ್ ಎ. ಸಾಲ್ಯಾನ್, ಅತುಲ್ ಓಜಾ, ಎಸ್. ಯು. ಬಂಗೇರ, ಎಂ. ಎನ್. ಕೋಟ್ಯಾನ್, ಎಸ್. ಎನ್. ಹೆಜಮಾಡಿ, ಕೆ. ಎನ್. ಪಿ. ಸಾಲ್ಯಾನ್, ಪಿ. ಆರ್. ಅಮೀನ್, ಜಯ ಎಂ. ಬಂಗೇರ, ಪೂಜಾ ಅರ್ಚಕ ಸುಧಾಕರ ಎಂ. ಶೆಟ್ಟಿ, ಭುವಾಜಿ ಎಸ್. ಯು. ಬಂಗೇರ ಹಾಗೂ ಸದಸ್ಯ ಬಾಂಧವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರಗಿದವು.
ಸ್ಥಳೀಯ ನಗರ ಸೇವಕರು, ಹೊಟೇಲ್ ಉದ್ಯಮಿ, ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಜಗನ್ನಾಥ ಕೋಟ್ಯಾನ್ ದಂಪತಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ದಾನಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸಮಿತಿಯ ಪದಾಧಿಕಾರಿಗಳು ದೇವರ ಪ್ರಸಾದ ನೀಡಿ ಗೌರವಿಸಿದರು.