Advertisement

ಸ್ಟೇಟಸ್‌ ಮೇಂಟೇನ್‌ ಮಾಡುವುದು !

10:31 PM Jul 04, 2019 | mahesh |

ಸ್ಟೇಟಸ್‌ ಎಂಬ ಕನ್ನಡದಲ್ಲಿ ಬಳಸಲ್ಪಡುವ ಇಂಗ್ಲಿಷ್‌ ಪದವನ್ನು ನೀವೆಲ್ಲ ಕೇಳಿರುತ್ತೀರಿ. ಅಂತಸ್ತು, ಸ್ಥಾನಮಾನ ಎಂದು ಅದನ್ನು ಸರಳವಾಗಿ ಕನ್ನಡಕ್ಕೆ ಅನುವಾದ ಮಾಡಬಹುದು. ಹಿಂದೆಲ್ಲ ಮನೆ ಮುಂದೆ ಒಂದು ಕಾರು ಇರುವುದೋ ಅಥವಾ ಮನೆಯೊಳಗಡೆ ಒಂದು ನಾಯಿಯಿರುವುದೋ- ಸ್ಟೇಟಸ್‌ ಸಿಂಬಲ್‌ ಅನ್ನಿಸಿಕೊಳ್ಳುತ್ತಿತ್ತು ಮತ್ತು ಸ್ಟೇಟಸ್‌ ಎಂಬ ಪದ ಹೆಚ್ಚಾಗಿ ಈ ರೀತಿಯಲ್ಲೇ ಬಳಸಲ್ಪಡುತ್ತಿತ್ತು. ಆದರೆ, ಇಲ್ಲಿ ನಾನು ಹೇಳಹೊರಟಿರುವುದು ವಾಟ್ಸ್‌ ಆಪ್‌ನ ಸ್ಟೇಟಸ್‌ ಕುರಿತಾಗಿ. ಆವಾಗವಾಗ ತನ್ನ ದಾಸರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ನ್ನು ಪರಿಚಯಿಸುವ ವಾಟ್ಸ್‌ಆಪ್‌ ಈ ಸ್ಟೇಟಸ್‌ ಎಂಬ ಹೊಸ ಫೀಚರನ್ನು ಪರಿಚಯಿಸಿ ಹಲವಾರು ತಿಂಗಳುಗಳೇ ಕಳೆದಿವೆ. ನಮ್ಮ ಈಗಿನ ಸ್ಥಿತಿಗತಿ ಏನು ಎಂದು ಎಲ್ಲರಿಗೂ ತಿಳಿಸುವುದೇ ಈ ಸ್ಟೇಟಸ್‌ ನ ಮುಖ್ಯ ಉದ್ದೇಶ. ಇವತ್ತು ನಿಮಗೆ ಖುಷಿಯಾಗಿದ್ದರೆ feeling happy ಎಂದೋ ಬೇಸರವಾಗಿದ್ದರೆ feeling down ಎಂದೋ ನಿಮ್ಮ ಸ್ಟೇಟಸ್‌ನ್ನು ಹಾಕಿಕೊಳ್ಳಬಹುದು. ಅದನ್ನು ನೋಡಿದ ನಿಮ್ಮ ಮಿತ್ರರು ಕುತೂಹಲ ತಡೆಯಲಾರದೆ ಏಕೆ, ಏನಾಯಿತು ಎಂದು ಕೇಳುವಲ್ಲಿಗೆ ಸ್ಟೇಟಸ್‌ ಹಾಕಿದ ಉದ್ದೇಶ ಸಫ‌ಲವಾದಂತಾಗುತ್ತದೆ. ತಮ್ಮ ಗೆಳೆಯರ, ಸಂಬಂಧಿಕರ ಹುಟ್ಟಿದ ದಿನ, ಮದುವೆಯ ದಿನದಂದು ತಮ್ಮ ಸ್ಟೇಟಸ್‌ನಲ್ಲಿ ಅವರ ಫೋಟೋ ಹಾಕಿ ಅವರಿಗೆ ವಿಶ್‌ ಮಾಡುವುದು ಈಗ ಸರ್ವೇ ಸಾಮಾನ್ಯವಾಗಿದೆ. ಕಾಲೇಜು ಮಕ್ಕಳಂತೂ ಒಂದು ಗ್ರೂಪ್‌ ಫೋಟೋವನ್ನೇ ಸ್ಟೇಟಸ್‌ ನಲ್ಲಿ ಹಾಕಿ ಅದರಲ್ಲಿ ಬರ್ತಡೇ ಯಾರದ್ದೋ ಅವರ ತಲೆಗೆ ಒಂದು ಕಿರೀಟ ಹಾಕಿಯೋ ಅಥವಾ ಅವರ ಮುಂದೆ ಒಂದು ಕೇಕಿನ ಚಿತ್ರವಿಟ್ಟೋ ಹಾರೈಸುವ ಪರಿ, ಅಬ್ಟಾ ಏನೆಂದು ಬಣ್ಣಿಸಲಿ! ಇದು ಅಲ್ಲಿಗೇ ಮುಗಿಯಲಿಲ್ಲ. ಬರ್ತ್‌ಡೇ ಯಾರದ್ದೋ ಅವರು ಆ ದಿನ ಯಾರೆಲ್ಲ ತಮ್ಮ ಸ್ಟೇಟಸ್‌ಗಳಲ್ಲಿ ಅವರ ಫೋಟೋ ಹಾಕಿದ್ದಾರೋ ಅವರ ಸ್ಟೇಟಸ್‌ಗಳ ಸ್ಕ್ರೀನ್‌ ಶಾಟ್‌ ತೆಗೆಯಬೇಕು. ಮರುದಿನ ಆ ಸ್ಕ್ರೀನ್‌ ಶಾಟ್‌ಗಳನ್ನೆಲ್ಲ ಒಂದರ ಹಿಂದೆ ಒಂದರಂತೆ ತಮ್ಮ ಸ್ಟೇಟಸ್‌ನಲ್ಲಿ ಹಾಕಿ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸಬೇಕು. ಅರ್ಥ ವಾಗಲಿಲ್ಲವೆ? ಬಿಡಿ, ಅರ್ಥ ಮಾಡಿಕೊಂಡು ಸಾಧಿಸಬೇಕಾದದ್ದು ಏನೂ ಇಲ್ಲ. ಆದರೆ, ನೆನಪಿರಲಿ, ನೀವು ಅವರ ಬರ್ತ್‌ಡೇಗೆ ನಿಮ್ಮ ಸ್ಟೇಟಸ್‌ನಲ್ಲಿ ಅವರಿಗೆ ವಿಶ್‌ ಮಾಡಿದ್ದರೆ ಮಾತ್ರ ಅವರು ಅವರ ಸ್ಟೇಟಸ್‌ನಲ್ಲಿ ನಿಮಗೆ ವಿಶ್‌ ಮಾಡುವುದು. ಪಕ್ಕಾ ವ್ಯಾವಹಾರಿಕ ಸಂಬಂಧ.

Advertisement

ಕೆಲವರ ಸ್ಟೇಟಸ್‌ಗಳಲ್ಲಿ ನಾಲ್ಕರಿಂದ ಐದು ಫೋಟೋಗಳಿದ್ದರೆ ಇನ್ನು ಕೆಲವರಲ್ಲಿ ಹತ್ತು ಹದಿನೈದು ಫೋಟೋಗೂ ಹೆಚ್ಚಿರುತ್ತವೆ. ವಿಡಿಯೋ ಗಳನ್ನು ಕೂಡ ಸ್ಟೇಟಸ್‌ನಲ್ಲಿ ಹಾಕಬಹುದು. ಯಾವುದೇ ಒಂದು ಸ್ಟೇಟಸ್‌ ನ ಆಯುಷ್ಯ ಕೇವಲ 24 ಗಂಟೆ. ನಂತರ ಅದು ಕಾಣಿಸಿಕೊಳ್ಳುವುದಿಲ್ಲ.ಹೊಸತಾಗಿ ಅಪ್‌ಲೋಡ್‌ ಮಾಡಬೇಕು. ಕೆಲವರ ಸ್ಟೇಟಸ್‌ಗಳು ಕೇವಲ good morning, good nightಗಳಿಗೆ ಸೀಮಿತವಾಗಿದ್ದರೆ ಇನ್ನು ಕೆಲವರ ಸ್ಟೇಟಸ್‌ಗಳು ಪ್ರಪಂಚಕ್ಕೆಲ್ಲ ಜ್ಞಾನ ಹಂಚುವ ಕೆಲಸ ಮಾಡುತ್ತವೆ. ಒಳ್ಳೆಯ ಗೆಳೆಯ ಹೇಗಿರಬೇಕು, ಮೌನವು ಮಾತಿಗಿಂತ ಹೇಗೆ ಉತ್ತಮ, ತಂದೆ ತಾಯಿಯ ಮಹತ್ವವೇನು, ಜೀವನದ ಗುರಿಯೇನು ಇತ್ಯಾದಿ ಇತ್ಯಾದಿ ಮುಗಿದೇ ಹೋಗದಷ್ಟು ನಲು°ಡಿಗಳನ್ನು ಸ್ಟೇಟಸ್‌ನಲ್ಲಿ ಹಾಕುತ್ತಲೇ ಇರುತ್ತಾರೆ. ನಿಧನ ಹೊಂದಿದವರಿಗೆ ಕಂಬನಿ ಸುರಿಸುವುದು ಈ ಸ್ಟೇಟಸ್‌ ಮೂಲಕವೇ. ಸಿದ್ಧ ಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯವಾದ ನಂತರ ದಾಖಲೆಯಷ್ಟು ಹೆಚ್ಚಿನ ಜನರು ಸ್ಟೇಟಸ್‌ನಲ್ಲಿ ಅವರ ಫೋಟೋ ಹಾಕಿದ್ದರಂತೆ.

ಕೆಲದಿನಗಳ ಹಿಂದೆ ಕಾಲೇಜೊಂದರಲ್ಲಿ ಸ್ಟೇಟಸ್‌ನಲ್ಲಿ ಹಾಕಿದ ಫೋಟೋ ವಿಚಾರವಾಗಿ ಎರಡು ತಂಡಗಳ ನಡುವೆ ಜಗಳವಾಗಿರುವ ಬಗ್ಗೆ ವರದಿಯಾಗಿತ್ತು. ಇತ್ತೀಚೆಗಂತೂ ಜನರು ವಾಟ್ಸ್‌ಆಪ್‌ನಲ್ಲಿ ಸಂಭಾಷಣೆಗಳಿಗಿಂತ ಸ್ಟೇಟಸ್‌ ನೋಡುವುದರಲ್ಲೇ ಹೆಚ್ಚು ಸಮಯ ವ್ಯಯಿಸುತ್ತಾರಂತೆ.

ಇನ್ನು ನೀವು ನಿಮ್ಮ ಊರಿನ ಯಾವುದಾದರೂ ವಾಟ್ಸಾಪ್‌ ಗ್ರೂಪಿನಲ್ಲಿದ್ದು ಅದರಲ್ಲಿನ ಎಲ್ಲರ ನಂಬರನ್ನು ಮೊಬೈಲ್‌ನಲ್ಲಿ save ಮಾಡಿದ್ದರೆ ನಿಮಗೆ ಯಾವುದೇ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವುದಕ್ಕಿಂತ ಹೆಚ್ಚಿನ ಸುದ್ದಿ ತಿಳಿಯುತ್ತದೆ.

ಈ ಸ್ಟೇಟಸ್‌ ಹಾಕುವ ವಿಷಯದಲ್ಲಿ ಸೃಜನಶೀಲತೆಗೆ ಏನೂ ಕೊರತೆಯಿಲ್ಲ.ಮೊನ್ನೆ ಗೆಳತಿಯೊಬ್ಬಳು ತನ್ನ ಮಗುವಿನ ಮೊದಲ ವರುಷದ ಜನ್ಮ ದಿನದಂದು ಹನ್ನೆರಡು ಫೋಟೋಗಳನ್ನು ಸ್ಟೇಟಸ್‌ನಲ್ಲಿ ಹಾಕಿದ್ದಳು. ಹನ್ನೆರಡು ಫೋಟೋ ಯಾವುದೆನ್ನುವಿರಾ? ಆ ಮಗುವಿನ ಪ್ರತೀ ತಿಂಗಳಿಗೆ ಒಂದರಂತೆ ಹನ್ನೆರಡು ತಿಂಗಳಲ್ಲಿ ತೆಗೆದ ಒಟ್ಟು ಹನ್ನೆರಡು ಫೋಟೋಗಳು. ಅಂತಾರಾಷ್ಟ್ರೀಯ ಮಹಿಳಾ ದಿನದಂದು ತಮ್ಮ ಯಶಸ್ಸಿನ ಹಿಂದಿರುವ ಮಹಿಳೆಯ ಫೋಟೋವನ್ನು ಹೆಚ್ಚಿನವರು ಸ್ಟೇಟಸ್‌ ನಲ್ಲಿ ಹಾಕಿದ್ದು ವಿಶೇಷವಾಗಿತ್ತು. ಚುನಾವಣೆಯ ಸಮಯದಲ್ಲಿ ಸ್ಟೇಟಸ್‌ಗಳಲ್ಲಿ ತಾವು ಬೆಂಬಲಿಸುವ ಪಕ್ಷದ ಪರ ಚಿತ್ರ, ಬರಹಗಳೂ ಮೂಡಿ ಬಂದಿದ್ದವು.

Advertisement

ಮೊನ್ನೆ ಸ್ನೇಹಿತೆಯೊಬ್ಬಳು ತನ್ನ ಮಗನ ಸಾಧನೆ ಮತ್ತು ಆತನ ಪದವಿ ಪ್ರದಾನದ ಫೋಟೋಗಳನ್ನು ತನ್ನ ಸ್ಟೇಟಸ್‌ನಲ್ಲಿ ಹಾಕಿದ್ದಳು. ಏನು?? ಆತನು Ph.D.  ಮಾಡಿರುವನೆ ? ಖಂಡಿತ ಅಲ್ಲ, ಎಲ್ಲಾ ಸಬ್ಜೆಕ್ಟ್ ಗಳಲ್ಲಿ A+ ಪಡೆದು U.K.G ಯನ್ನು ಮುಗಿಸಿ, ಶಾಲೆಯಲ್ಲಿ ಆಯೋಜಿಸಿದ ಗ್ರಾಜ್ಯುವೇಶನ್‌ ಸಮಾರಂಭದಲ್ಲಿ ಗೌನ್‌ ಮತ್ತು ಟೊಪ್ಪಿ ಧರಿಸಿದ ಫೋಟೋವನ್ನು ಆಕೆ ಸ್ಟೇಟಸ್‌ನಲ್ಲಿ ಹಾಕಿದ್ದು.

ಇನ್ನು ತಮ್ಮ ಮನೆಯ ಹಬ್ಬದೂಟದ ಅಡುಗೆಯನ್ನು ಬಾಳೆ ಎಲೆಯ ಮೇಲೆ ಬಡಿಸಿ ಗೋಗ್ರಾಸಕ್ಕೆ ಇಡುವ ಮೊದಲೇ ಅದರ ಫೋಟೋ ತೆಗೆದು ಸ್ಟೇಟಸ್‌ನಲ್ಲಿ ಹಾಕಿದರೆ ಮಾತ್ರ ಹಬ್ಬದ ಆಚರಣೆ ಪೂರ್ಣಗೊಳ್ಳುವುದೋ ಎಂಬಂತಿರುತ್ತದೆ ಕೆಲವರ ಸ್ಟೇಟಸ್‌ ಹುಚ್ಚು. ಇನ್ನು ನೀವು ಚಲನಚಿತ್ರ ನೋಡಲು ಹೋದಿರೋ ಟಿಕೆಟ್‌ ತೆಗೆದುಕೊಂಡು ಥಿಯೇಟರ್‌ ಒಳಗೆ ಹೋಗಿ ಮೊದಲು ಮಾಡಬೇಕಾದ ಕೆಲಸವೇ ನೀವು ಯಾವ ಮೂವಿಯನ್ನು ನೋಡುತ್ತಿದ್ದೀರೆಂದು ಥಿಯೇಟರ್‌ನಲ್ಲಿ ನೀವು ಕುಳಿತಿರುವ ಫೋಟೋ ಸಮೇತ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುವುದು. ಇಲ್ಲದಿದ್ದರೆ ಸಮಾಜ ನಿಮ್ಮನ್ನು ಸ್ವೀಕರಿಸುವುದಿಲ್ಲ ಸ್ವಾಮಿ !

ಇನ್ನು ಸ್ಟೇಟಸ್‌ ನಲ್ಲಿ puzzle ಕೇಳುವುದೂ ಇರುತ್ತದೆ. ನೀವು ಆ puzzle ನ್ನು ನಿಮ್ಮ ಸ್ಟೇಟಸ್‌ನಲ್ಲಿ ಹಾಕ ಬೇಕಿದ್ದರೆ ನೀವು ಯಾರಿಗೆ ಸೋತಿರಿ ಎಂದು ತಿಳಿಸಿ ಅದರೊಟ್ಟಿಗೆ ಆ puzzle ನ್ನ ಹಾಕಬಹುದು. ನನ್ನ ಪರಿಚಯದ ಒಬ್ಟಾಕೆಯಂತೂ ಆಕೆಯ ಗಂಡನ ಮೇಲೆ ಸಿಟ್ಟು ಬಂದರೆ ವಾಟ್ಸಪ್‌ ಸ್ಟೇಟಸ್‌ ಮೂಲಕವೇ ಹೊರಹಾಕುತ್ತಾಳೆ. ಈ ವಿಧಾನ ಅಷ್ಟೇನೂ ಹಾನಿಕಾರಕವಲ್ಲ ಎಂದು ಭಾವಿಸಬೇಡಿ. ಇದರ ಪರಿಣಾಮ ಎಷ್ಟಿರುತ್ತದೆಂದರೆ ಅವಳ ಗಂಡ ಕೆಲದಿನ ತಲೆಯೆತ್ತಿ ತಿರುಗಲು ಸಾಧ್ಯವಿಲ್ಲದಷ್ಟು. ಹೇಗೆನ್ನುವಿರ? ಆಕೆಯ ಸ್ಟೇಟಸ್‌ನ ಕೆಲ ಸ್ಯಾಂಪಲ್‌ ನೋಡಿ, “ಹೆಣ್ಣನ್ನು ಬಾಳಿಸಲಾಗದವನಿಗೆ ಮದುವೆ ಏಕೆ? ಅಥವಾ ಹೆಂಡತಿ ಎಂದರೆ ನಿಮ್ಮ ಗುಲಾಮಳಲ್ಲ, ಆಕೆಗೂ ಭಾವನೆಗಳಿವೆ’ ಹೀಗೆ ಚಿತ್ರವಿಚಿತ್ರ ಸ್ಟೇಟಸ್‌ ಬರಹಗಳನ್ನು ಹಾಕಿ ಆಕೆಯ ನಂಬರ್‌ ಹೊಂದಿರುವ ಪರಿಚಿತರೆಲ್ಲರೂ ಆಕೆ ಗಂಡನೊಡನೆ ಜಗಳವಾಡಿದ್ದಾಳೆ ಎಂದು ತಿಳಿಯುವಂತಾಗುತ್ತದೆ. ಕದನವಿರಾಮದ ಘೋಷಣೆಯೂ ವಾಟ್ಸಾಪ್‌ ಸ್ಟೇಟಸ್‌ನಲ್ಲೇ ಆಗುತ್ತದೆ. ಗಂಡ-ಹೆಂಡತಿ ಜೊತೆಯಾಗಿ ನಿಂತಿರುವ ಫೋಟೋ ಹಾಕಿ ಲವ್‌ ಯೂ ಹಾಕಿದರೆ ರಾಜಿಯಾಗಿದ್ದಾಳೆ ಎಂದರ್ಥ. ಸರಳವಾಗಿ ಹೇಳುವುದಾದರೆ ಗಂಡ-ಹೆಂಡತಿ ಜಗಳ ಸ್ಟೇಟಸ್‌ ಬದಲಾಗೋ ತನಕ.

ಇನ್ನು ಈಗ ಟಿಕ್‌ ಟಾಕ್‌ ಎಂಬ ಸರಳ ವಿಡಿಯೋ ಚಿತ್ರೀಕರಿಸುವ app ಬಂದ ಮೇಲಂತೂ ಹೆಚ್ಚಿನವರ ಸ್ಟೇಟಸ್‌ನಲ್ಲಿ ಈ ವಿಡಿಯೋ ಗಳನ್ನೇ ಕಾಣಬಹುದು. ಇನ್ನು ಇತ್ತೀಚಿನ ಹೊಸ ಸಿದ್ಧಾಂತವೆಂದರೆ ನಿಮಗಾಗದಿದ್ದವರ ನಂಬರನ್ನು blockಮಾಡಬೇಡಿ ಅಥವಾ ನಿಮ್ಮ ಸ್ಟೇಟಸ್‌ನ್ನು ಅವರು ನೋಡದಂತೆ ಡಿಸೇಬಲ್‌ ಮಾಡಬೇಡಿ, ಬದಲಿಗೆ ಅವರ ಹೊಟ್ಟೆ ಉರಿಸುವಂತ ಸ್ಟೇಟಸ್‌ ಹಾಕಿ ಆನಂದಿಸಿ ಎಂದು. ಈ ಸ್ಟೇಟಸ್‌ ಹಾಕುವುದರಲ್ಲಿ ತುಂಬಾ ಸೋಮಾರಿಯಾಗಿರುವ ನಾನು ಒಮ್ಮೆ ಏನೋ ನಮ್ಮ ಮದುವೆಯ ವಾರ್ಷಿಕೋತ್ಸವದಂದು ಅನುರಾಗದ ಅನುಬಂಧ ಎಂದು ಸ್ಟೇಟಸ್‌ upload ಮಾಡಿದ್ದೆ. ಇದನ್ನು ನೋಡಿದ ಒಂದಷ್ಟು ಜನರಲ್ಲಿ ಒಬ್ಬ ನರಮನುಷ್ಯನಾದರೂ ಏನು ವಿಶೇಷ ಎಂದು ಕೇಳಿದ್ದರೆ ಹೇಳಿ. ಸ್ವತಃ ನನ್ನ ಪತಿದೇವರೇ ಇದನ್ನು ಗಮನಿಸಲಿಲ್ಲ. ಸ್ಟೇಟಸ್‌ ಹಾಕುವುದು ಬಿಡಿ, ನೋಡುವುದರಲ್ಲೂ ಮಹಾನುಭಾವ ನನಗಿಂತ ಆಲಸಿ. ಏನೇ ಹೇಳಿ ಸ್ವಾಮಿ, ಇದಕ್ಕೆಲ್ಲ ಪಡೆದುಕೊಂಡು ಬಂದಿರಬೇಕು. ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಸ್ಟೇಟಸ್‌ಗೆ ಪ್ರತಿಕ್ರಿಯಿಸುವವರದ್ದು ಇದೇ ಪಾಡು. ಇರಲಿ, ಈಗ ನಮ್ಮ ಮುಂದಿನ ವಿವಾಹ ವಾರ್ಷಿಕೋತ್ಸವಕ್ಕೆ ಸ್ಟೇಟಸ್‌ಗೆ ಹಾಕಲು ಚಂದದ ಸಾಲೊಂದನ್ನು ಗುರುತಿಸಿಟ್ಟಿದ್ದೇನೆ. ಹಾಕುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದೇನೆ! ನೀವೇನು ಹೇಳುವಿರಿ?

ಶಾಂತಲಾ ಎನ್‌. ಹೆಗ್ಡೆ

Advertisement

Udayavani is now on Telegram. Click here to join our channel and stay updated with the latest news.

Next