Advertisement

ಯುವಶಕ್ತಿ ಸದ್ಬಳಕೆ ಮಾಡಿಕೊಳ್ಳಿ: ಸಿಇಒ

10:25 AM Jul 12, 2020 | Suhan S |

ಮಂಡ್ಯ: ವಿಶ್ವದಲ್ಲಿ ಜನಸಂಖ್ಯಾ ಸ್ಫೋಟ ಹೆಚ್ಚುತ್ತಿದ್ದು, 2050ರ ವೇಳೆಗೆ ವಿಶ್ವದಲ್ಲಿ 1 ಸಾವಿರ ಕೋಟಿ ಜನಸಂಖ್ಯೆ ತಲುಪಲಿದೆ. ಭಾರತದಲ್ಲಿ ಶೇ.40ರಷ್ಟು ಯುವ ಜನರಿದ್ದಾರೆ. ಯುವ ಜನರ ಶಕ್ತಿ ಸದ್ಬಳಕೆಯಾಗಬೇಕು ಎಂದು ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಆತಂಕ ವ್ಯಕ್ತಪಡಿಸಿದರು.

Advertisement

ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ವಿಶ್ವದಲ್ಲಿ 700 ಕೋಟಿ ಜನಸಂಖ್ಯೆ ಇದ್ದರೆ, ಭಾರತದಲ್ಲಿ 138 ಕೋಟಿ ಇದೆ. ಅಂದರೆ ಶೇ.17.5ರಷ್ಟು ಜನಸಂಖ್ಯೆ ಇದ್ದು, ವಿಶ್ವದಲ್ಲೇ ಚೀನಾ ಬಿಟ್ಟರೆ ಭಾರತ ಎರಡನೇ ಸ್ಥಾನದಲ್ಲಿದೆ. 2030ರ ವೇಳೆಗೆ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವ- ಉದ್ಯೋಗ ಮಾಡಿ: ಯುವಕರು ವೈಯಕ್ತಿಕವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಎಲ್ಲರಿಗೂ ಸರ್ಕಾರಿ ನೌಕರಿ ಕೊಡಲಾಗದು. ಸ್ವಚ್ಛತೆ ಕಾಪಾಡಿಕೊಂಡು ಸ್ವ- ಉದ್ಯೋಗ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಅದರ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಬಾಲ್ಯ ವಿವಾಹ, ಕಡಿಮೆ ಸಾಕ್ಷರತಾ ಪ್ರಮಾಣಗಳು ಕಾರಣದಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಜನಸಂಖ್ಯೆ ಸ್ಫೋಟದಿಂದ ಆಹಾರ, ನೀರು, ಬಟ್ಟೆ, ನೆಲ, ವಸತಿ ಹಾಗೂ ಖನಿಜಗಳ ಕೊರತೆ, ಅರಣ್ಯ ನಾಶ, ಸಸ್ಯ ಸಂಪತ್ತಿನ ನಾಶ, ಬಡತನ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಇತರೆ ಸಂಪನ್ಮೂಲಗಳ ಕೊರತೆ, ಹೆಚ್ಚಿನ ವಾಯು, ಜಲ ಮತ್ತು ಶಬ್ಧ ಮಾಲಿನ್ಯ, ಸಾಮಾಜಿಕ ಅಸಮಾನತೆ, ನಗರ ವ್ಯಾಪ್ತಿಯ ಕೊಳಚೆ ಪ್ರದೇಶಗಳ ಉಲ್ಬಣ, ವಸತಿ ಮತ್ತು ಸಾಗೆ ವ್ಯವಸ್ಥೆಯ ಮೇಲೆ ಒತ್ತಡ, ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರೇ ಮೊದಲ ಸ್ಥಾನದಲ್ಲಿದ್ದಾರೆ. ಆದರೂ ಮಂಡ್ಯ ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೆಣ್ಣು ಮಕ್ಕಳು ಹುಟ್ಟುವ ಸಂಖ್ಯೆ ಕಡಿಮೆಯಾ ಗುತ್ತಿದೆ. ಸಿಲ್ಕ್, ಮಿಲ್ಕ್, ಗಾರ್ಮೆಂಟ್‌ನಲ್ಲೂ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಸುಮಾರು 45 ವರ್ಷಗಳಿಂದಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಆದರೂ ಲಿಂಗಾನುಪಾತದಲ್ಲಿ ಮಾತ್ರ ಕಡಿಮೆಯಾಗಿ ರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.

ಗಾಂಧೀಜಿಯವರು ಹೇಳಿದಂತೆ ಅವರವರ ಸಂಸಾರದ ಜವಾಬ್ದಾರಿಯನ್ನು ಅವರೇ ವಹಿಸಿಕೊಳ್ಳಬೇಕು. ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಪಿ. ಮಂಚೇ ಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜು, ಡಾ. ಭವಾನಿ ಶಂಕರ್‌,ಡಾ.ಜವರೇಗೌಡ, ಡಾ.ಶಶಿಧರ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next