ನೀರ್ಚಾಲು: ಹಿರಿಯರ ಕಾಲದಲ್ಲಿ ಪೂಜಿಸಲ್ಪಟ್ಟ ದೇವರು ಇಂದು ನಾವೆಲ್ಲಿದ್ದರೂ ನಮ್ಮನ್ನು ತನ್ನತ್ತ ಸೆಳೆದು ಆತನ ಸೇವೆ ಮಾಡಲು ಅವಕಾಶವನ್ನು ನೀಡುತ್ತಾನೆ. ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಜೀವನವನ್ನು ಪಾವನಗೊಳಿಸೋಣ ಎಂದು ಮಂಗಳೂರು ಕರ್ನಾಟಕ ಬ್ಯಾಂಕ್ ಡೆಪ್ಯೂಟಿ ಜನರಲ್ ಮೆನೇಜರ್ ರವೀಂದ್ರನಾಥ ಹಂದೆೆ ಹೇಳಿದರು. ಅವರು ಮಂಗಳವಾರ ಜೀರ್ಣೋದ್ಧಾರಗೊಳ್ಳುತ್ತಿರುವ ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಮ್ಮಿಕೊಂಡ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಊರಿನ ಜನರ ಸಹಕಾರದಿಂದ ಬ್ಯಾಂಕ್ ಉದ್ಧಾರ ವಾಗುತ್ತದೆ. ಇದರಿಂದಾಗಿ ಸಮಾಜ ಮುಖೀ ಕಾರ್ಯಗಳಿಗೆ ಬ್ಯಾಂಕ್‌ಗೆ ಸೂಕ್ತವಾಗಿ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಶ್ರೀ ಕ್ಷೇತ್ರದ ಜೀರ್ಣೋದ್ಧಾರಕ್ಕೆ ನೀಡಿದ ರೂ. 2 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಭೋಜನ ಶಾಲೆಯನ್ನು ಅವರು ಲೋಕಾರ್ಪಣೆಗೊಳಿಸಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಕೆ.ಜಿ. ಗೌರೀಶಂಕರ ರೈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಚೀಫ್ ಮೆನೇಜರ್ (ಪಬ್ಲಿಕ್ ರಿಲೇಶನ್ಸ್)ನ ಶ್ರೀನಿವಾಸ ದೇಶಪಾಂಡೆ ಮಾತನಾಡುತ್ತಾ ಋಷಿಮುನಿಗಳು ತಪಸ್ಸನ್ನಾಚರಿಸಿದ ಪುಣ್ಯ ಭೂಮಿಯಲ್ಲಿ ನಂಬಿದ ದೇವತಾ ಸಾನ್ನಿಧ್ಯಗಳು ಅಪಾರವಾದ ಸಾನ್ನಿಧ್ಯವುಳ್ಳವುಗಳಾಗಿವೆ. ಈ ಕ್ಷೇತ್ರದಲ್ಲಿ ಯಾವುದೋ ಒಂದು ಸೆಳೆತವು ನಮ್ಮನ್ನು ಸೆಳೆಯುತ್ತಿರುವುದು ಇಲ್ಲಿನ ಸಾನ್ನಿಧ್ಯವನ್ನು ತೋರ್ಪಡಿಸುತ್ತದೆ ಎಂದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ವಸಂತ ಪೈ ಬದಿಯಡ್ಕ ಮಾತನಾಡುತ್ತಾ ಭಗವಂತನ ಕೆಲಸಕ್ಕೆ ಉಪಯೋಗಿಸುವ ಸಂಪತ್ತಿನಿಂದ ನಮಗೆ ಪುಣ್ಯ ಲಭಿಸುತ್ತದೆ. ಜೀರ್ಣವಾದ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಲು ನಮಗೆ ಸಿಕ್ಕಿರುವ ಅವಕಾಶಗಳಿಂದ ನಾವು ವಂಚಿತರಾಗಬಾರದು. ನಮ್ಮ ಪೂರ್ವಜರ ಪುಣ್ಯದ ಫಲ ನಮಗೆ ಲಭಿಸಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಬ್ಯಾಂಕ್ ನೀರ್ಚಾಲು ಶಾಖೆಯ ಪ್ರಬಂಧಕ ಶ್ರೀಶ ಕೆ. ಹಿರಿಯರಾದ ಪಡಿಯಡು³ ಶಂಕರ ಭಟ್, ಉದ್ಯಮಿ ಪ್ರಶಾಂತ ಪೈ ನೀರ್ಚಾಲು ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ ಪಡಿಯಡ್ಪು ಸ್ವಾಗತಿಸಿ, ಕಾರ್ಯಾಧ್ಯಕ್ಷ ಟಿ.ಶ್ಯಾಮ ಭಟ್ ಏವುಂಜೆ ವಂದಿಸಿದರು. ಅಚಲಾ ಪ್ರಾರ್ಥನೆಯನ್ನು ಹಾಡಿ, ಸೇವಾ ಸಮಿತಿ ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
– ಚಿತ್ರ: ಅಶ್ವಿನಿ ಸ್ಟುಡಿಯೋ, ಬದಿಯಡ್ಕ