Advertisement

ಹರ್‌ ಘರ್‌ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ

06:25 PM Jul 28, 2022 | Team Udayavani |

ಹಾವೇರಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಗಸ್ಟ್‌ 13 ರಿಂದ 15ರವರೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪ್ರತಿ ಮನೆಗಳ ಮೇಲೂ ತ್ರಿವರ್ಣ ರಾಷ್ಟ್ರಧ್ವಜ ಹಾರಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಹರ ಘರ್‌ ತಿರಂಗಾ ಅಭಿಯಾನದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಧ್ವಜದ ಕಾರ್ಯಕ್ರಮದಡಿ ಮನೆ ಮನೆಯಲ್ಲೂ 20×30 ಅಳತೆಯ ರಾಷ್ಟ್ರಧ್ವಜ ಹಾರಿಸಬೇಕಾಗಿದೆ. ಕಾಟನ್‌, ಪಾಲಿಸ್ಟರ್‌ನಿಂದ ತಯಾರಿಸಿದ ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡಲಾಗಿದೆ. ಮೂರು ದಿನಗಳ ಕಾಲ ಸರ್ಕಾರಿ ಕಚೇರಿಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ನಿಗಮ-ಮಂಡಳಿ ಕಚೇರಿಗಳು, ಶಾಲಾ-ಕಾಲೇಜು, ಅರೆ ಸರ್ಕಾರಿ ಸಂಸ್ಥೆಗಳಲ್ಲೂ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾರಿಸಬೇಕು. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಾಷ್ಟ್ರಧ್ವಜ ಖರೀದಿಸಿ ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮೂರು ಲಕ್ಷ ಕುಟುಂಬಗಳಿದ್ದು, ಒಂದು ಲಕ್ಷ ಧ್ವಜಗಳು ಜಿಲ್ಲೆಗೆ ಪೂರೈಕೆಯಾಗಲಿವೆ. ನಗರದ ಗುರುಭವನದಲ್ಲಿ ರಾಷ್ಟ್ರಧ್ವಜ ವಿತರಣೆ ಮಾಡಲಾಗುವುದು. ಸಾರ್ವಜನಿಕರು, ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಸರ್ಕಾರ ನಿಗದಿಗೊಳಿಸಿದ 20×30 ಅಳತೆಯ ಖಾದಿ ಅಥವಾ ಪಾಲಿಸ್ಟರ್‌ ಬಟ್ಟೆಯಿಂದ ತಯಾರಿಸಲಾದ ತ್ರಿವರ್ಣ ಧ್ವಜಗಳನ್ನು ಖರೀದಿಸಿ ತಮ್ಮ ತಮ್ಮ ಮನೆಗಳ ಮೇಲೆ ಪ್ರದರ್ಶನ ಮಾಡಬೇಕು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಎನ್‌ಆರ್‌ಎಲ್‌ಎಂ ಸ್ವ ಸಹಾಯ ಸಂಘಗಳಲ್ಲಿ ರಾಷ್ಟ್ರಧ್ವಜಗಳು ದೊರೆಯಲಿವೆ. ಶೀಘ್ರದಲ್ಲೇ ಗುರುಭವನದಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್‌ ಅವರು ಮಾತನಾಡಿ, ಜಿಲ್ಲೆಯ 223 ಗ್ರಾಮ ಪಂಚಾಯತಿಗಳಿಗೆ ತಲಾ 450 ರಾಷ್ಟ್ರಧ್ವಜಗಳನ್ನು ಪೂರೈಸಲಾಗುವುದು. ಪ್ರತಿ ತಾಪಂಗೆ 750 ಹಾಗೂ ನಗರಸಭೆಗಳಿಗೆ ಏಳು ಸಾವಿರ, ಪುರಸಭೆಗಳಿಗೆ ಐದು ಸಾವಿರ, ನಗರಸಭೆಗಳಿಗೆ ಏಳು ಸಾವಿರ, ಪಟ್ಟಣ ಪಂಚಾಯತಿಗಳಿಗೆ ತಲಾ ಎರಡು ಸಾವಿರದಂತೆ ಪೂರೈಸಲಾಗುವುದು.

ಪ್ರತಿ ಧ್ವಜ ಮತ್ತು ಧ್ವಜ ಹಾರಿಸಲು ಬೇಕಾದ ಕೋಲು (ಕಟ್ಟಿಗೆ) ಸೇರಿದಂತೆ 37 ರೂ. ವೆಚ್ಚವಾಗುತ್ತದೆ. ಸಾರ್ವಜನಿಕರು ಸ್ವಯಂ ಪ್ರೇರಣೆ ಯಿಂದ ಧ್ವಜ ಖರೀದಿಸಿ ಮೂರು ದಿನಗಳ ಕಾಲ ತಮ್ಮ ಮನೆಗಳ ಮೇಲೆ ಧ್ವಜ ಹಾರಿಸಲು ಮನವಿ ಮಾಡಿದರು. ಆಗಸ್ಟ್‌ 13 ರಿಂದ 15 ರವರೆಗೆ ಹಮ್ಮಿಕೊಂಡಿರುವ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಜಿಲ್ಲೆಯ ಪ್ರತಿ ಗ್ರಾಮ, ನಗರ, ಪಟ್ಟಣಗಳಲ್ಲಿ ಸ್ಥಳೀಯ ಸಂಸ್ಥೆಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೂಲಕ ಪ್ರಭಾತ್‌ ಪೇರಿ ಆಯೋಜಿಸಿ ರಾಷ್ಟ್ರಧ್ವಜಾರೋಹಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು.

Advertisement

ವಿದ್ಯಾರ್ಥಿಗಳಿಂದ ವಂದೇ ಮಾತರಂ, ರಘುಪತಿ ರಾಘವ ರಾಜಾರಾಂ ಮತ್ತು ಇನ್ನಿತರೆ ದೇಶಭಕ್ತಿ ಗೀತೆಗಳನ್ನು ಹಾಡಿಸಬೇಕು. ಸಾರ್ವಜನಿಕರಿಗೆ ಸ್ವಾತಂತ್ರ್ಯ ಹೋರಾಟದ ತ್ಯಾಗ-ಬಲಿದಾನದ ಕುರಿತು ಅರಿವು ಮೂಡಿಸಬೇಕೆಂದು ಸೂಚನೆ ನೀಡಿದರು. ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ- ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಕ್ರಮ ವಹಿಸಬೇಕು. ಸಾಮಾಜಿಕ ಜಾಲತಾಣಗಳು ಒಳಗೊಂಡಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ರಸ್ತೆ ಸಾರಿಗೆ ಹಾಗೂ ವಾಹನಗಳ ಮೇಲೆ ಅಭಿಯಾನದ ಕುರಿತು ಪ್ರದರ್ಶನ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಡಿಎಫ್‌ಒ ಬಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎನ್‌ .ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next