ಪಣಜಿ: ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆರೋಗ್ಯವಾಗಿರಲು ಸಂಕಲ್ಪ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸ್ವಚ್ಛ ಭಾರತ ಮಂತ್ರದ ಮೇಲೆ ಎಲ್ಲರೂ ಕೆಲಸ ಮಾಡಬೇಕು ಮತ್ತು ಈಗ ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಬೇಕೆಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಕರೆ ನೀಡಿದರು.
ಗೋವಾದ ಸಾಖಳಿಯಲ್ಲಿ ಆಯೋಜಿಸಿದ್ದ ಯುಗಾದಿ ಹಬ್ಬದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿದರು. ಪ್ರತಿಯೊಬ್ಬರು ಯೋಗ ಮತ್ತು ಪ್ರಾಣಾಯಾಮವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿ, ಸದೃಢರಾಗಿರಬೇಕೆಂದು ಹೇಳಿದರು. ಜನರು ಎಲ್ಲದಕ್ಕೂ ಸರ್ಕಾರವನ್ನು ದೂಷಿಸುವುದಿಲ್ಲ. ಪ್ರತಿಯೊಬ್ಬರೂ ಯಾವುದೇ ರಚನಾತ್ಮಕ ಕೆಲಸವನ್ನು ತಮ್ಮಿಂದ ಮತ್ತು ತಮ್ಮ ಮನೆಗಳಿಂದಲೇ ಪ್ರಾರಂಭಿಸಬೇಕು. ಇಂದಿನ ಜಂಜಾಟದ ಬದುಕಿನಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ದೈನಂದಿನ ಜೀವನದಲ್ಲಿ ಯೋಗ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಿ ಆರೋಗ್ಯಕರವಾಗಿ ಮತ್ತು ಸದೃಢವಾಗಿರಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಸಾಖಳಿ ಹೊಸ ವರ್ಷದ ಸ್ವಾಗತ ಸಮಿತಿಯು ಹೊಸ ವರ್ಷದ ಮೆರವಣಿಗೆ ಮತ್ತು ಧ್ವಜ ಪೂಜೆ ಸಮಾರಂಭವನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಿತು. ಮಾರ್ಕೆಟ್ ನಲ್ಲಿ ವಿಧ್ಯುಕ್ತವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಕೆ.ಬಿ. ಹೆಡಗೇವಾರ್ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಪ್ರದರ್ಶನದ ಮೂಲಕ ಮೆರವಣಿಗೆಯಲ್ಲಿ ಉತ್ಸಾಹ ಮೂಡಿಸಿದರು. ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಮೇಯರ್ ರಾಜೇಶ್ ಸವಾಲ್, ಪಾಲಿಕೆ ಸದಸ್ಯರಾದ ಆನಂದ ಕನೇಕರ್, ದಯಾನಂದ ಬೋರ್ಯೇಕರ್, ಶುಭದಾ ಸಾವೈಕರ್, ಸಮಿತಿ ಅಧ್ಯಕ್ಷೆ ರಾಧಿಕಾ ಕಾಮತ್ ಸಾತೋಸ್ಕರ್ ಭಾಗವಹಿಸಿದ್ದರು.