ಒಂದೆಡೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ನಕಲು ತಪ್ಪಿಸಲು ಡ್ರೋನ್ ಕೆಮರಾ, ಸಿಸಿಟಿವಿ ಅಳವಡಿಕೆ ಮತ್ತಿತರ ಹೈಟೆಕ್ ಕ್ರಮಗಳ ಮೊರೆ ಹೋಗಿ ರುವ ಸರಕಾರ, ಇನ್ನೊಂದೆಡೆ ಮಕ್ಕಳಿಗೆ ಪರೀಕ್ಷೆ ಬರೆಯುವ ಪರೀಕ್ಷಾ ಕೇಂದ್ರ ಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಪರದಾಡುತ್ತಿರುವುದು ವೇದ್ಯವಾ ಗುತ್ತಿದೆ. ಮಕ್ಕಳಿಗೆ ಸಮೀಪವಾಗುವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು ಎಂಬ ಮೂಲಭೂತ ಚಿಂತನೆಯನ್ನು ತಳ್ಳಿ ಹಾಕಿ ಪರೀಕ್ಷಾ ಮೇಲ್ವಿಚಾರಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪೇಟೆ, ಪಟ್ಟಣಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚು ಹೆಚ್ಚು ತೆರೆಯಲು ಮುಂದಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಅಲ್ಲ.
ಎಸೆಸೆಲ್ಸಿ ಪರೀಕ್ಷೆ ಬರೆಯುವವರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಇದಕ್ಕೆ ಪೂರಕವಾಗಿ 2022-23ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 3,305 ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿದ್ದರೆ ಈ ಪೈಕಿ 1,900ಕ್ಕಿಂತ ಹೆಚ್ಚು ಕೇಂದ್ರಗಳು ಗ್ರಾಮೀಣ ಪ್ರದೇಶ ಮತ್ತು ಹೋಬಳಿ ಕೇಂದ್ರದಲ್ಲಿದ್ದವು. ಅಂದರೆ ಅರ್ಧಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರಗಳು ಗ್ರಾಮೀಣ ಭಾಗದಲ್ಲೇ ಇದ್ದವು. ಆದರೆ ಇದೀಗ ಸರಕಾರ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಲೆಕ್ಕಾಚಾರ ಇಟ್ಟುಕೊಂಡು, ಪರೀಕ್ಷೆಯ ನಕಲು ತಡೆಯುವ ನೆಪದಿಂದ ಗ್ರಾಮೀಣ ಕೇಂದ್ರಗಳಿಗೆ ಸಂಚಕಾರ ತರುವ ಯತ್ನ ನಡೆಸಿರುವುದು ಖಂಡನೀಯ.
ಹತ್ತು ಕಿ.ಮೀ. ವ್ಯಾಪ್ತಿಗೆ ಒಂದು ಪರೀಕ್ಷಾ ಕೇಂದ್ರ ಎಂಬ ಸರಕಾರದ ಯೋಚನೆಯಲ್ಲೇ ಲೋಪವಿದೆ. ಗ್ರಾಮೀಣ ಭಾಗದಲ್ಲಿ ಈ ಹತ್ತು ಕಿ.ಮೀ.ಗಳನ್ನು ತಲುಪಲು ವಿದ್ಯಾರ್ಥಿಗಳು ಎಷ್ಟು ಕಷ್ಟ ಪಡಬೇಕಾಗಬಹುದು ಎಂಬುದರ ಬಗ್ಗೆ ಒಂದಿನಿತು ಯೋಚಿಸದೇ ಅಧಿಕಾರಿಗಳು ತೆಗೆದುಕೊಂಡ ಕ್ರಮವಿದು ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಅಲ್ಲದೇ ಗ್ರಾಮೀಣ ಭಾಗದ ಸಾರಿಗೆ ಸ್ಥಿತಿ ಬಗ್ಗೆಯೂ ಅವ ಲೋ ಕಿ ಸ ಬ ಹು ದಿತ್ತು. ಸರಕಾರದ ಬಿಗಿ ಕ್ರಮ, ಬಹು ಆಯ್ಕೆಯ ಪ್ರಶ್ನೆ ಮಾದರಿ ಮುಂತಾದ ಕ್ರಮಗಳಿಂದ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸುತ್ತಿರುವ ಪರೀಕ್ಷೆಯಲ್ಲಿ ನಕಲು ಪ್ರಮಾಣ ಕಡಿಮೆ ಆಗುತ್ತಿದೆ. ಆದರೆ ಇದೀಗ ಪರೀಕ್ಷಾ ಅವ್ಯವಹಾರ, ನಕಲು ತಡೆಯುವ ಕಾರಣಗಳನ್ನು ನೀಡಿ ಪರೀಕ್ಷಾ ಕೇಂದ್ರ ಗಳನ್ನು ಕಡಿಮೆ ಮಾಡಲು ಮುಂದಾಗುತ್ತಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಸಂಕಷ್ಟ ತಂದೊಡ್ಡುವುದು ಖಚಿತ.
ಪರೀಕ್ಷೆಯಲ್ಲಿ ನಕಲು ತಪ್ಪಿಸುತ್ತೇವೆ ಎಂಬ ಕಾರಣ ನೀಡಿ ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಗುರುತಿಸಿದರೆ ಅದರಿಂದ ಒಟ್ಟಾರೆ ಪರೀಕ್ಷಾ ವ್ಯವಸ್ಥೆಯ ಮೇಲೆ ದುಷ್ಪರಿಣಾಮವೇ ಆಗಬಹುದು. ನಕಲು ತಪ್ಪಿಸಲು ವೈಜ್ಞಾನಿಕ ಕ್ರಮಗಳ ಬಳಕೆಯ ಜತೆಗೆ ಕಟ್ಟುನಿಟ್ಟಿನ ಶಿಸ್ತು ಕ್ರಮಗಳನ್ನು ಜಾರಿ ಗೊಳಿಸಿದರೆ ನಕಲಿಗೆ ಇನ್ನಷ್ಟು ಕಡಿವಾಣ ಬಿದ್ದೇ ಬೀಳುತ್ತದೆ. ಇದರ ಹೊರತಾಗಿ ಸರಕಾರಿ ಶಾಲೆಗಳನ್ನೇ ನಂಬಿರುವ ಗ್ರಾಮೀಣ ಭಾಗದಲ್ಲಿ ಪರೀಕ್ಷಾ ಕೇಂದ್ರಗಳನ್ನು ಕಡಿತ ಮಾಡಿ ಅದನ್ನು ಪೇಟೆ ಪಟ್ಟಣಗಳಿಗೆ ವರ್ಗಾ ಯಿಸಿ ನಕಲು ತಡೆಯುತ್ತೇವೆ ಎಂಬ ಸರಕಾರದ ಚಿಂತನೆಯೇ ಹಾಸ್ಯಾಸ್ಪದ.
ವಾಸ್ತವದಲ್ಲಿ ಆಧುನಿಕ ತಂತ್ರಜ್ಞಾನಗಳಾದ ಡ್ರೋನ್, ಸಿಸಿ ಟಿವಿಯನ್ನು ಬಳಸುವ ಮೂಲಕ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಸರಕಾರ ನಡೆಸಬಹುದಿತ್ತು. ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಿತ್ತು. ಆದರೆ ಸರಕಾರ ವಿದ್ಯಾರ್ಥಿಗಳ ಆಯಾಮದಲ್ಲಿ ಕ್ರಮ ಕೈಗೊಳ್ಳದೆ ಅಧಿಕಾರಿ ಕೇಂದ್ರಿತವಾಗಿ ಚಿಂತಿಸುತ್ತಿರುವುದು ವಿಪರ್ಯಾಸ.