Advertisement

ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಿ

06:22 PM Mar 19, 2021 | Team Udayavani |

ಕಲಬುರಗಿ : ಸಮಾಜ ಅಗೌರವದಿಂದ ಕಾಣುವ ತೃತೀಯ ಲಿಂಗಿಗಳಿಗೆ ಹೆಚ್ಚಿನ ಅವಕಾಶ ದೊರೆಯಲು ಸರ್ಕಾರ ಮೀಸಲಾತಿ ಕಲ್ಪಿಸಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ|ಎಚ್‌.ಟಿ. ಪೋತೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದ ಕಟ್ಟಕಡೆಯ ಮತ್ತು ಅವಕಾಶ ವಂಚಿತರು, ನೊಂದವರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಮೇಲೆತ್ತುವ ಕೆಲಸ ಆಗಬೇಕಿದೆ. ಆದರೆ, ಶಕ್ತರು ಸಹ ಮೀಸಲಾತಿ ಪಡೆಯಲು ಹಾಗೂ ಅವರಿಗೆ ಮೀಸಲಾತಿ ಕಲ್ಪಿಸಲು ಹೊರಟಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ವಿಶ್ವವಿದ್ಯಾಲಯಗಳು ಸಮಾಜದ ಕಟ್ಟಕಡೆಯ ಮನುಷ್ಯನ ಬಳಿ ಹೋಗುವ ಕಾರ್ಯವಾಗಬೇಕು. ಇಂತಹ ಸದಾಶಯದಿಂದಲೇ ಗುಲಬರ್ಗಾ ವಿಶ್ವವಿದ್ಯಾಲಯ ಸಾಲುಮರದ ತಿಮ್ಮಕ್ಕನ ಕುರಿತ ಪಠ್ಯ ಅಳವಡಿಸಿತ್ತು. ಈಗ ಮಂಜಮ್ಮ ಜೋಗತಿ ಆತ್ಮಕಥೆ ಅಳವಡಿಸಲು ನಿರ್ಧರಿಸಲಾಗಿದೆ. ಸಾಹಿತ್ಯ ಓದಿ ವ್ಯಕ್ತಿಯನ್ನು ಗುಣದಿಂದ ಅಳೆಯಬೇಕು, ಜಾತಿಯಿಂದಲ್ಲ. ಜಾತಿ, ಧರ್ಮ ಬದಿಗಿಟ್ಟು ಸಾಹಿತ್ಯ ಓದಬೇಕೆಂದು ಪ್ರತಿಪಾದಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ| ದಯಾನಂದ ಅಗಸರ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಆತ್ಮಕಥೆಯನ್ನು ಬಿಎಸ್ಸಿ 4ನೇ ಸೆಮಿಸ್ಟರ್‌ಗೆ ಪಠ್ಯವಾಗಿ ಅಳವಡಿಸಲಾಗುತ್ತಿದೆ. ಇದಕ್ಕೆ ವಿವಿಯ ಎಲ್ಲರೂ ಒಮ್ಮತದ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಮಂಜಮ್ಮ ಜೋಗತಿ ಅವರಂತವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ತನ್ನ ಗೌರವ ಹೆಚ್ಚಿಸಿಕೊಂಡರೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ| ಅರುಣ ಜೋಳದ ಕೂಡ್ಲಿಗಿ ಮಾತನಾಡಿ, ಮಂಜಮ್ಮ ಜೋಗತಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯುವ ಮೂಲಕ ಜೋಗತಿ ಸಮುದಾಯಕ್ಕೆ ನ್ಯಾಯ ದೊರೆತಂತಾಗಿದೆ ಎಂದರು. ಮಂಜಮ್ಮನಲ್ಲಿನ ಜಾತ್ಯತೀತ ಮನೋಭಾವ ಆಕೆಯನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಯಿತು. ತನ್ನೊಂದಿಗೆ ಇಡೀ ತಂಡವನ್ನೇ ಕೊಂಡೊಯ್ಯುತ್ತಾರೆ. ಜಾನಪದ ಅಕಾಡೆಮಿಗೆ ಸದಸ್ಯರಾದವರು, ಈಗ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಅಕಾಡೆಮಿ ತನ್ನನ್ನು ತಾನು ಗೌರವಿಸಿಕೊಂಡಿದೆ ಎಂದು ಹೇಳಿದರು.

ಗಂಡು ಮಗುವಿನಲ್ಲಿನ ಹೆಣ್ಣಿನ ಲಕ್ಷಣ ಗೋಚರಿಸಿತ್ತು. ಮನೆ, ಶಾಲೆ, ಸಮಾಜದಲ್ಲಿ ಅನೇಕ ಹಂತದಲ್ಲಿ ಮಂಜಮ್ಮ ನೋವು ಅನುಭವಿಸಿ, ಶಿಕ್ಷಣ ಕೈಬಿಡಬೇಕಾದ ಅನಿವಾರ್ಯತೆ ಎದುರಾಯಿತು. ಒಂದು ಹಂತದಲ್ಲಿ ಮಂಜಮ್ಮ ಆತ್ಮಹತ್ಯೆಗೂ ಯತ್ನಿಸಿದ ಪ್ರಸಂಗ ನಡೆದಿತ್ತು. ನಂತರ ಜೋಗತಿ ಪರಂಪರೆಗೆ ಅಂಟಿಕೊಂಡು, ಹಾದಿ, ಬೀದಿಗೆ ಸೀಮಿತವಾಗಿದ್ದ ಕಲೆಯನ್ನು ವೇದಿಕೆಗೆ ತಂದರು ಎಂದು ಆತ್ಮಕಥನವನ್ನು ಬಿಡಿಸಿಟ್ಟರು. ಸನ್ಮಾನ ಸ್ವೀಕರಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ| ಸೋನಾರ ನಂದಪ್ಪ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next