Advertisement
ನೀವು ಎಂದಾದರೂ ಕುಟುಂಬ ಪ್ರವಾಸ ಹೋಗಿದ್ದೀರಾ? ಹೋಗದೆ ಇದ್ದರೆ ಈ ಬಾರಿ ಮಕ್ಕಳ ಶಾಲೆ ಮುಗಿದ ಕೂಡಲೇ ಒಂದು ಊರನ್ನು ಗೊತ್ತು ಮಾಡಿಕೊಳ್ಳಿ.
Related Articles
Advertisement
ನಿಮಗಲ್ಲ, ನಿಮ್ಮ ಮಕ್ಕಳಿಗಿರಲಿಹಿಂದೆಲ್ಲಾ ಅಪ್ಪ-ಅಮ್ಮಂದಿರನ್ನು ಪ್ರವಾಸಕ್ಕೆ ಕರೆದಾಗ (ಹಿರಿಯ ತಲೆಮಾರಿನಲ್ಲಿ ಕೆಲವರು), “ನಮಗೆ ವಯಸ್ಸಾಗಿದೆ. ಅದೆಲ್ಲಾ ಬೇಡಪ್ಪಾ, ನೀವೇ ಹೋಗಿ ಬನ್ನಿ’ ಎನ್ನುತ್ತಿದ್ದರು. ಅದೂ ಇಳಿ ವಯಸ್ಸಿನಲ್ಲಿ. ಆದರೆ ಮಧ್ಯ ವಯಸ್ಕನಲ್ಲಿರುವ ನಾವು “ಬ್ಯುಸಿ’ಯ ಕಾರಣವೊಡ್ಡಿ ದೂರ ಯಾಕೆ, ಮನೆಯಲ್ಲೇ ಸುಮ್ಮನೆ ಇದ್ದು ಬಿಡೋಣ ಎಂದುಕೊಳ್ಳುತ್ತಿದ್ದೇವೆ. ಪ್ರತಿ ವಾರಾಂತ್ಯ ಬಂದಾಗಲೂ ಮಾಡುವುದು ಅದನ್ನೇ. ಹತ್ತಿರದ ಸಂಬಂಧದ ಮನೆಗೆ ಹೋಗಲೂ ಟ್ರಾಫಿಕ್ ಬಿಡೋಲ್ಲ, ಪಕ್ಕದ ಬೀದಿಯಲ್ಲಿರುವ ಮನೆಗೆ ಹೋಗಲಿಕ್ಕೆ, ಅವರಿದ್ದಾರೋ ಇಲ್ಲವೋ ಗೊತ್ತಿಲ್ಲ, ಸುಮ್ಮನೆ ತೊಂದರೆ ಯಾಕೆ ಎಂದುಕೊಂಡು ಟಿವಿ ಹಾಕಿಕೊಂಡು ಇದ್ದು ಬಿಡುತ್ತೇವೆ. ವರ್ಷಕ್ಕೊಮ್ಮೆಯಾದರೂ ಪ್ರವಾಸಕ್ಕೆ ಹೊರಡಿ. ಅದರಲ್ಲೂ ಚಿಕ್ಕ ಮಕ್ಕಳು ಇರುವ ಕುಟುಂಬವಂತೂ ಈ ಅವಕಾಶವನ್ನು ತಪ್ಪಿಸಲೇಬೇಡಿ. ಸಮಾಜದೊಂದಿಗಿನ ಅವಕಾಶ
ಈಗಿನ ಜೀವನ ಕ್ರಮ ನಮಗೆ ಗೊತ್ತೇ ಇದೆ. ಶಾಲೆ ಮತ್ತು ಮನೆ, ಹೆಚ್ಚೆಂದರೆ ನಮ್ಮ ಅಕ್ಕಪಕ್ಕದ ಎರಡು ಮನೆಗಳು. ಈ ಸೀಮಿತ ಪ್ರಪಂಚದಲ್ಲಿ ಮಕ್ಕಳಿಗೆ ಸಮಾಜದೊಂದಿಗೆ ಪ್ರತಿಸ್ಪಂದಿಸಲು, ಸಂವಾದಿಸಲು ಸಿಗುವ ಅವಕಾಶವೇ ತೀರಾ ಕಡಿಮೆ. ಆದರೆ ಪ್ರವಾಸದಲ್ಲಿ ಹಾಗಲ್ಲ, ಹಲವಾರು ಬಗೆಯ ಜನರು ಎದುರು ಸಿಗುತ್ತಾರೆ ಮತ್ತು ಅವರೊಂದಿಗೆ ಸಂಭಾಷಿಸುವ ಅವಕಾಶ ಸಿಗುತ್ತದೆ. ಹೊಸ ಸ್ಥಳದಲ್ಲಿನ ವಾತಾವರಣ ಅರಿವಿಗೆ ಬರುತ್ತದೆ, ಮಾಹಿತಿ ಮತ್ತು ಜ್ಞಾನ ಸಂಪಾದನೆಯೂ ಆಗುತ್ತದೆ. ಸಮಾಜವನ್ನು ದೊಡ್ಡ ಅರ್ಥದಲ್ಲಿ ನೋಡಲು ಸಿಗುವುದು ಈಗಲೇ. ಅದನ್ನು ತಪ್ಪಿಸಬೇಡಿ. ಸಮಾಜವೇ ಕಲಿಕಾ ಮನೆ
ನಾವು ತರಗತಿ ಕೋಣೆಯಲ್ಲಿ ಕಲಿಯುವುದು ಇದ್ದದ್ದೇ. ಹೊರಗೆ ಕಲಿಯಲು ಬಹಳಷ್ಟಿದೆ. ಮಕ್ಕಳಿಗೆ ಈ ಲೋಕದಲ್ಲಿ ಕಲಿಯಲು ಸಿಗುವ ಅವಕಾಶವೇ ಪ್ರವಾಸ. ಲೋಕಜ್ಞಾನವಿಲ್ಲದಿದ್ದರೆ ಲೋಕವನ್ನು ಗೆಲ್ಲುವುದು ಹೇಗೆ? ಅದಕ್ಕಾಗಿಯೇ ಈ ಪ್ರವಾಸ ಅವಶ್ಯ. ಮಕ್ಕಳ ಚುರುಕುತನ ಹೆಚ್ಚಿಸಬಲ್ಲದು
ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಹೋಗುವ ಪ್ರವಾಸ ಮಕ್ಕಳಲ್ಲಿನ ಬುದ್ಧಿಯನ್ನು ಇನ್ನಷ್ಟು ಚುರುಕುಗೊಳಿಸುತ್ತದೆ. ಮಕ್ಕಳ ಸ್ವಭಾವವೇ ಕುತೂಹಲ, ಪ್ರಶ್ನಿಸುವುದು, ಅನ್ವೇಷಣೆ. ಆ ಸ್ವಭಾವದ ನಿರಂತರತೆಗೆ ಪ್ರವಾಸ ಸಹಾಯ ಮಾಡಬಲ್ಲದು. ಪ್ರವಾಸ ಹೋಗುವ ಕುಟುಂಬದಲ್ಲಿನ ಮಕ್ಕಳಲ್ಲಿ ಕುತೂಹಲ ಹೆಚ್ಚಿರುತ್ತದೆ. ಅದೇ ಸ್ವಭಾವ ತಾರುಣ್ಯಕ್ಕೆ ಬಂದಾಗ ಸಾಹಸ ಪ್ರವೃತ್ತಿಯಾಗಿ ಪರಿವರ್ತನೆಯಾಗುತ್ತದೆ. ಪರಿಸರ ಪ್ರೀತಿ
ಪರಿಸರ ಪ್ರೀತಿ ಮಕ್ಕಳಿಗೆ ಎಲ್ಲಿಂದ ಬರುತ್ತದೆ? ಈ ಪ್ರಶ್ನೆಗೆ ಪ್ರವಾಸವೂ ಒಂದು ಉತ್ತರ. ಯಾಕೆಂದರೆ, ಪ್ರವಾಸದಲ್ಲಿ ಹೆಚ್ಚು ಬೆರೆಯುವುದು ಪರಿಸರದ ಜತೆಗೆ. ಅದು ಕಲಿಸುವ ಪಾಠ ಮತ್ತು ಅರಿವು ವಿಶೇಷವಾದದ್ದು. ಪೋಷಕರಾದ ನಾವೂ ಪರಿಸರದ ಬಗೆಗಿನ ಕಾಳಜಿ ಬೆಳೆಸಲು ಪ್ರವಾಸವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬಹುದು. ಇವು ಕೆಲವೇ ಕಾರಣಗಳು. ಆದರೆ ಕುಟುಂಬ ಪ್ರವಾಸ ಸೂಕ್ತ ಎಂಬುದಕ್ಕೆ ಹಲವು ಕಾರಣಗಳಿವೆ. ದೈನಂದಿಕ ಬದುಕಿನ ಕಾರ್ಯ ಒತ್ತಡದಿಂದ ಮುಕ್ತಿಗೊಳಿಸುವುದಲ್ಲದೇ, ಬದುಕಿನ ಪಾಠವನ್ನು ಕಲಿಸುತ್ತದೆ. ಅದಕ್ಕೇ ಈ ಮೇ ತಿಂಗಳ ರಜೆಗೆ ಈಗಲೇ ಸಿದ್ಧತೆ ಆರಂಭಿಸಿ. ವರ್ಷಕ್ಕೊಂದು ಇರಲಿ
ಈ ಮಾತು ಹೇಳುತ್ತಿರುವುದು ಇಷ್ಟೇ. ಇಂದಿನ ಒತ್ತಡದ ಯುಗದಲ್ಲಿ ವರ್ಷಕ್ಕೊಮ್ಮೆ ಒಂದು ವಾರ ಇಡೀ ಕುಟುಂಬ ಯಾವುದೋ ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗಿ ಒಟ್ಟಿಗೆ ಕಳೆದರೆ ಸಿಗುವ ಸುಖ ಎಷ್ಟು ಹಣ ಒಟ್ಟುಗೂಡಿಸಿದರೂ ಬಾರದು. ಒಟ್ಟಿಗಿದ್ದು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಿಗುವ ಅವಕಾಶವೂ ಹೌದು. ನಮ್ಮ ಸಂಬಂಧಗಳೇ ನಮಗೆ ಹೊಸ ಹೊಳಪಿನಲ್ಲಿ ಕಾಣುತ್ತವೆ. ಮಕ್ಕಳ ಕುತೂಹಲ, ಬೆರಗು, ಉತ್ಸಾಹವನ್ನು ಕಂಡು ನಮ್ಮ ಮಕ್ಕಳು ಎಷ್ಟು ದೊಡ್ಡವರಾಗಿದ್ದಾರೆ ಎಂದೆನಿಸುವುದೂ ಇಂಥದೊಂದು ಪ್ರವಾಸದಲ್ಲಿಯೇ. ಅದಕ್ಕೇ ವರ್ಷಕ್ಕೆ ಒಂದು ಬಾರಿ ಪ್ರವಾಸವನ್ನು ತಪ್ಪಿಸಲೇಬೇಡಿ.