ಮೈಸೂರು: ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಕಿವಿಮಾತು ಹೇಳಿದರು. ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದಿಂದ ಭಾನುವಾರ ಅಶೋಕಪುರಂ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಹಾಗೂ ಎಸ್ಸೆಸೆಲ್ಸಿಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದಿರುವ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯಶ್ರೀ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಎರಡೂರು ವರ್ಷಗಳಲ್ಲಿ ಅಶೋಕಪುರಂ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯನ್ನು ಕರ್ನಾಟಕದಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡಲಾಗುವುದು. ಇದಕ್ಕಾಗಿ ರತ್ನ ಚಿತ್ರಮಂದಿರದ ಬಳಿ ನಿವೇಶನ ಪಡೆಯಲಾಗಿದ್ದು, ಶಾಲೆಗೆ ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗುವುದು. ಜತೆಗೆ ಈ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯ ಪ್ರಾರಂಭಿಸುತ್ತೇವೆ ಎಂದರು.
ತಾವು ಈ ಶಾಲೆಯನ್ನು ದತ್ತು ಪಡೆದುಕೊಂಡು ಸಂಸದರ ನಿಧಿಯಿಂದ 10 ಕೋಟಿ ರೂ.ಗಳಿಗೆ ಹೆಚ್ಚು ಹಣ ಖರ್ಚುಮಾಡಿ ಉತ್ತಮ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ಪ್ರಯೋಗಾಲಯ, ಗ್ರಂಥಾಲಯ ಹಾಗೂ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೇ ಉನ್ನತ ವ್ಯಾಸಂಗ ಮಾಡಲು ಇಚ್ಚಿಸುವ ಈ ಶಾಲೆಯ ವಿದ್ಯಾರ್ಥಿಗಳಿಗೆ ಪದವಿವರೆಗೆ ಶುಲ್ಕ ಕಟ್ಟಿಕೊಡುತ್ತೇನೆ. ಜತೆಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾತಿಯನ್ನೂ ಮಾಡಿಸಿಕೊಡುತ್ತೇನೆ. ಅಲ್ಲದೆ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಐದು ಸಾವಿರ ರೂ. ನಗದು ಹಾಗೂ ನಿಘಂಟನ್ನು ಪ್ರತಿ ವರ್ಷ ನೀಡುವುದಾಗಿ ಹೇಳಿದರು.
ಪತ್ರಕರ್ತ ಕೆ.ಶಿವಕುಮಾರ್ ಮಾತನಾಡಿ, ದಲಿತ ವಿದ್ಯಾರ್ಥಿಗಳು ಪಿಡಿಒ, ಗ್ರಾಮ ಲೆಕ್ಕಿಗ ಇಂತಹ ಹುದ್ದೆಗಳಿಗೆ ಮಾತ್ರ ಸೀಮಿತವಾಗದೆ ಕೆಎಎಸ್ ನಂತಹ ಪರೀಕ್ಷೆ ಬರೆದು ಅಧಿಕಾರಿಗಳಾಗಬೇಕು. ಆಗ ಮಾತ್ರ ದಲಿತ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ಮರಿಮಲ್ಲಪ್ಪ ಪ್ರೌಢಶಾಲೆಯ 10ನೇ ತರಗತಿಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದಿರುವ ದಿವ್ಯಶ್ರೀಗೆ ಹಾಗೂ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿನಿಯರಿಗೆ ನಿಘಂಟು ಹಾಗೂ ಐದು ಸಾವಿರ ರೂ. ಚೆಕ್ ನೀಡಿ ಸನ್ಮಾನಿಸಲಾಯಿತು.
ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಮ.ವೆಂಕಟರಾಮು, ಮೈಸೂರು ವಿವಿ ಕಾನೂನು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪೊ›.ಸಿ. ಬಸವರಾಜು, ಮುಡಾ ಮಾಜಿ ಅಧ್ಯಕ್ಷರಾದ ಕೆ.ಆರ್.ಮೋಹನಕುಮಾರ್, ಸಿ.ಬಸವೇಗೌಡ, ಬುದ್ಧ ವಿಹಾರದ ವೀರ್ಯ ಶೀಲ ಭಂತೇಜಿ, ಆದಿ ಕರ್ನಾಟಕ ಮಹಾ ಸಂಸ್ಥೆ ಮಾಜಿ ಅಧ್ಯಕ್ಷ ವಿ.ರಾಮಸ್ವಾಮಿ, ನಗರ ಪಾಲಿಕೆ ಸದಸ್ಯರಾದ ಪುರುಷೋತ್ತಮ್, ವಿ.ಶೈಲೇಂದ್ರ, ಮಾಜಿ ಉಪ ಮೇಯರ್ ಜಿ.ಲಿಂಗಯ್ಯ, ಬಳಗದ ಅಧ್ಯಕ್ಷ ಪಿ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟರಾಜು ಇತರರು ಇದ್ದರು.