ಮಂಗಳೂರು ನಗರ ಸಹಿತ ಗ್ರಾಮೀಣ ಭಾಗಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಶಬ್ಧಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಗಟ್ಟಲು ಸಾರಿಗೆ ಇಲಾಖೆಯಿಂದ ಕ್ರಮಕೈಗೊಂಡಿದ್ದರೂ ಇದು ಸಂಪೂರ್ಣವಾಗಿ ಯಶಸ್ವಿಯಾಗುತ್ತಿಲ್ಲ. ಮಂಗಳೂರು ನಗರದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ನಗರದಲ್ಲಿ ಸಂಚರಿಸುವ ಸಿಟಿ ಖಾಸಗಿ ಬಸ್‌ಗಳ ಕರ್ಕಶ ಹಾರ್ನ್ ನಿಂದ ಸಾರ್ವಜನಿಕರಿಗೆ ದಿನಂಪ್ರತಿ ಕಿರಿಕಿರಿ ಅನುಭವಿಸಬೇಕಾಗುತ್ತದೆ.
ಈ ಬಗ್ಗೆ ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಅನೇಕ ಪ್ರದೇಶಗಳಲ್ಲಿ ಕಾವಲು ನಿಂತು ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ. ಆದರೂ ಈ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ನಗರ ಪ್ರದೇಶದಲ್ಲಿ ಅದರಲ್ಲಿಯೂ ಶಾಲಾ ಕಾಲೇಜು ವಠಾರದ ಪಕ್ಕ ಸಂಚರಿಸುವ ರಸ್ತೆಗಳಲ್ಲಿ ಹಾರ್ನ್ ಹಾಕುವುದು ನಿಷೇಧಿಸಲಾಗಿದೆ. ಆದರೂ ಈ ನಿಯಮವನ್ನು ವಾಹನ ಮಾಲಕರು ಪಾಲನೆ ಮಾಡುತ್ತಿಲ್ಲ. ಆರ್‌ಟಿಒ ಅಧಿಕಾರಿಗಳು, ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಎಷ್ಟೇ ಮುನ್ನೆಚ್ಚರಿಕೆ ನೀಡಿದರೂ ಇದಕ್ಕೆ ಕಡಿವಾಣ ಬಿದ್ದಿಲ್ಲ.
ಮಂಗಳೂರಿನಲ್ಲಿ ಸಿಟಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ವರ್ಷಂಪ್ರತಿ ಕಾರ್ಯಾಗಾರ ನಡೆಯುತ್ತದೆ. ಈ ಕಾರ್ಯಾಗಾರದಲ್ಲಿ ಆರ್‌ಟಿಒ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಣೆಯನ್ನು ನೀಡುತ್ತಾರೆ. ಅಲ್ಲದೆ, ವಾಹನ ಮಾಲಕರು ಕೂಡ ನಿಯಮ ಪಾಲನೆಯ ಬಗ್ಗೆ ಚಾಲಕರಿಗೆ ತಿಳುವಳಿಕೆ ನೀಡುತ್ತಾರೆ. ಆದರೂ, ಅನೇಕ ನಿಯಮಗಳು ಗಾಳಿಗೆ ತೂರಲಾಗುತ್ತಿರುವುದು ವಿಪರ್ಯಾಸ. ನಗರದಲ್ಲಿ ಸಂಚರಿಸುವ ಅನೇಕ ವಾಹನಗಳು ಇಂದು ಹೊಗೆ ಉಗುಳುವ ಯಂತ್ರಗಳಾಗಿವೆ. ಎಂಜಿನ್ ಸುಸ್ಥಿತಿಯಲ್ಲಿರದೆ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಉಗುಳುತ್ತಿರುವ ವಾಹನಗಳನ್ನು ಸಾರಿಗೆ ಇಲಾಖೆ ತಪಾಸಣೆ ನಡೆಸಬೇಕಿದೆ. ಇವಿಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ವಾಹನಗಳ ಆಯಿಲ್ ರಸ್ತೆಗೆ ಸೋರುತ್ತಿದ್ದು, ಇದು ಪರಿಸರವನ್ನು ಹಾಳು ಮಾಡುವುದು ಮಾತ್ರವಲ್ಲದೇ ಅಪಘಾತಕ್ಕೂ ಕಾರಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಹಾಗೂ ಶಬ್ಧ ಮಾಲಿನ್ಯ ರಹಿತ ಸುಂದರ
ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಠಿನ ಕ್ರಮಕೈಗೊಳ್ಳಬೇಕಿದೆ.
ನವೀನ್ ಭಟ್ ಇಳಂತಿಲ