Advertisement

ಮಕ್ಕಳನ್ನು ಸಾಹಿತ್ಯ ರಾಯಭಾರಿಗಳಾಗಿಸಿ

02:13 PM May 30, 2022 | Team Udayavani |

ದಾವಣಗೆರೆ: ಮಕ್ಕಳನ್ನು ಸಾಹಿತ್ಯ, ಸಾಹಿತ್ಯದ ರಾಯಭಾರಿಗಳನ್ನಾಗಿ ಬೆಳೆಸಬೇಕು ಎಂದು ಬೆಂಗಳೂರಿನ ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷೆ ಸಿ.ಸಿ. ಹೇಮಲತಾ ಹೇಳಿದರು.

Advertisement

ಜಿಲ್ಲಾ ಕನ್ನಡ, ಚುಟುಕು ಸಾಹಿತ್ಯ ಪರಿಷತ್‌, ಜನಮಿಡಿತ ದಿನಪತ್ರಿಕೆ, ಭಾವ ಸಿರಿ ಪ್ರಕಾಶನ, ಗಾನಶ್ರೀ ಸ್ವರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೆ.ಪಿ. ಅಣಬೇರು ತಾರೇಶ್‌ ಅವರ ನಾಲ್ಕನೇ ಕವನ ಸಂಕಲನ ‘ನೀರ ಮೇಲಿನ ರಂಗೋಲಿ’ ಮತ್ತು ‘ಹಳ್ಳಿಹೈದನ ನೊಂದ ಹಾಡು’ ಎಂಬ ಮಕ್ಕಳ ಗೀತೆಗಳ ಧ್ವನಿಸುರುಳಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮೊಬೈಲ್‌ ದಾಸ್ಯತನಕ್ಕೆ ಒಳಗಾಗುತ್ತಿರುವ ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ, ಮಾನವೀಯತೆ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ ಎಂದರು.

ಇಂದಿನ ಸ್ಪರ್ಧಾತ್ಮಕ, ತಂತ್ರಜ್ಞಾನ ಯುಗದಲ್ಲಿ ಪೋಷಕರು ಮಕ್ಕಳ ಪ್ರತಿಭೆ ಗುರುತಿಸದೆ ಓದುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬರೀ ಓದಿನಿಂದ ಏನೂ ಸಾಧ್ಯವಿಲ್ಲ. ಪೋಷಕರು ಮಕ್ಕಳಿಗೆ ಓದಿನ ಜೊತೆಗೆ ಅವರು ಇಷ್ಟಪಡುವ ಕ್ಷೇತ್ರದ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಮೂಲಕ ಸೂಕ್ತ ವಾತಾವರಣ, ವೇದಿಕೆ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.

ನಮ್ಮ ಕಾಲಘಟ್ಟದಲ್ಲಿ ಸಾಂಸ್ಕೃತಿಕ, ಕವನ ಕಮ್ಮಟಗಳು ನಡೆಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಚಿಂತನೆ ಬೆಳಸಲಾಗುತ್ತಿತ್ತು. ಆದರೆ ಈಗ ಸಾಹಿತ್ಯದ ಕಮ್ಮಟ, ವಿಚಾರಸಂಕಿರಣಗಳು ವಿರಳವಾಗಿವೆ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಚಿಂತನೆ, ಆಸಕ್ತಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.

ಈಗ ಹೆಚ್ಚಿನ ಸಾಹಿತಿಗಳಲ್ಲಿ ನಾವು ಬೆಳೆದರೆ ಸಾಕು ಎಂಬ ಭಾವನೆ ಇದೆ. ಮುಂದಿನ ತಲೆಮಾರನ್ನು ಬೆಳೆಸುವಂತಹ ನಿಟ್ಟಿನಲ್ಲಿ ಕೊಡುಗೆ ಏನು ಎಂಬುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಹಿರಿಯ ಸಾಹಿತಿಗಳು ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಸಾಹಿತ್ಯದ ಚಟುವಟಿಕೆಯನ್ನು ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಜಾನಪದ ಸಾಹಿತ್ಯ ಯಾವುದೇ ವಿದ್ವಾಂಸರಿಂದ ಹುಟ್ಟಿಲ್ಲ. ಅದು ಹಳ್ಳಿಗಾಡಿನಿಂದ ಬಂದ ಸಾಹಿತ್ಯ. ಈಗ ಶಿಷ್ಟ ಸಾಹಿತ್ಯ ರೂಪಕ್ಕೆ ತಲುಪಿದೆ. ಅದರಲ್ಲೂ ಕನ್ನಡ ಭಾಷೆ ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ಸಾಹಿತ್ಯದಲ್ಲಿ ಅನೇಕ ವಿಧಾನಗಳಲ್ಲಿ ಕವನ ಶ್ರೇಷ್ಠವಾದ ವಿಧಾನವಾಗಿದೆ. ಅಂತಹದ್ದೇ ಮಾದರಿಯಲ್ಲಿ ತಾರೇಶ್‌ ಅಣಬೇರು ಅವರ “ನೀರಿನ ಮೇಲಿನ ರಂಗೋಲಿ’ ಕವನ ಸಂಕಲನವಾಗಿದೆ ಎಂದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಿ.ಎಚ್. ರಾಜಶೇಖರ್‌ ಗುಂಡಗಟ್ಟಿ, ಅಣಬೇರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಣಬೇರು ಶಿವಮೂರ್ತಿ, ಡಾ| ಶಶಿಕಲಾ ಕೃಷ್ಣಮೂರ್ತಿ, ಡಾ| ಪ್ರೀತಿ, ಗಂಗಮ್ಮ ಪರಮೇಶ್ವರಪ್ಪ, ಕವಿ ಕೆ.ಪಿ. ಅಣಬೇರು ತಾರೇಶ್‌, ಉಮಾದೇವಿ ಇತರರು ಇದ್ದರು.

ಎಲ್ಲರಂತೆ ಸಾಹಿತಿಗಳಿಗೂ ಸಾವಿದೆ. ಆದರೆ ಅವರ ಸಾಹಿತ್ಯಕ್ಕೆ ಎಂದೆಂದಿಗೂ ಸಾವಿಲ್ಲ. ಸಾಹಿತ್ಯದ ಚಿಂತನೆಗಳು ಪ್ರಪಂಚದಲ್ಲಿ ಸೂರ್ಯ-ಚಂದ್ರ ಇರುವವರೆಗೂ ಪುಸ್ತಕಗಳಲ್ಲಿ ಇರುತ್ತವೆ. ಸಿ.ಸಿ. ಹೇಮಲತಾ, ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next