Advertisement

ದೈನಂದಿನ ಕಾರ್ಯದಲ್ಲಿ ಬದಲಾವಣೆ ಮಾಡಿ

10:22 AM Dec 09, 2021 | Team Udayavani |

ಆಳಂದ: ಧಾವಂತದಲ್ಲಿ ಪ್ರತಿಯೊಬ್ಬರು ಅತಿಯಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಮಾನಸಿಕ ಒತ್ತಡ ನಿಯಂತ್ರಣಕ್ಕಾಗಿ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಬದಲಾವಣೆ ತರುವುದೊಂದೆ ಮದ್ದಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಡಾ| ನಾಗರಾಜ ಹೇಳಿದರು.

Advertisement

ಪಟ್ಟಣದ ಲೋಕನಾಯಕ ಜಯ ಪ್ರಕಾಶ ನಾರಾಯಣ ಪ್ರೌಢಶಾಲೆ (ಎಲ್‌ಎನ್‌ಜೆಪಿ)ಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಮಾನಸಿಕ ಆರೋಗ್ಯ ರಕ್ಷಣೆ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಒತ್ತಡದ ನಡುವೆ ದೈಹಿಕ ಆರೋಗ್ಯದ ಜೊತಗೆ ಮಾನಸಿಕ ಆರೋಗ್ಯದ ಸಂರಕ್ಷಣೆಗೆ ಮುಂದಾಗಬೇಕು. ಮಕ್ಕಳು ತಮ್ಮ ಮಾನಸಿಕ ಆರೋಗ್ಯ ರಕ್ಷಿಸಿಕೊಳ್ಳಬೇಕು. ಮಾನಸಿಕ ಅಸ್ವಸ್ಥತೆಯಿಂದಾಗಿ ಪರೀಕ್ಷೆ ಭಯದಿಂದ ಹಾಗೂ ಕೌಟುಂಬಿಕ ಸಮಸ್ಯೆಗಳಿಂದ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೋಡುತ್ತಿದ್ದೇವೆ. ಮಾನಸಿಕ ನಿಯಂತ್ರಣ ಸರ್ವ ಔಷಧಗಳಿಗಿಂತ ಸಶಕ್ತ. ಆದ್ದರಿಂದ ಮಾನಸಿಕ ನಿಯಂತ್ರಣ ಪ್ರತಿಯೊಬ್ಬರ ಜೀವನದ ಗುಟ್ಟಾಗಬೇಕು ಎಂದು ಹೇಳಿದರು.

ಸ್ಥಾಯಿ ಸಮಿತಿಯ ಇನ್ನೋರ್ವ ಸದಸ್ಯೆ ಡಾ| ಸಂತೋಷಿ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಇದರಿಂದ ಹೊರಬರಲು ದೈನಂದಿನ ಜೀವನ ಪದ್ಧತಿಯನ್ನು ಸರಳೀಕರಣ ಮಾಡಿಕೊಂಡು ಮಾನಸಿಕ ಒತ್ತಡಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು. ಮಾನಸಿಕ ಒತ್ತಡಕ್ಕೆ ಒಳಗಾಗಿ ವಿಚಲಿತ ಬದುಕಾಗಿದ್ದರೆ ತಕ್ಷಣಕ್ಕೆ ತಜ್ಞರನ್ನು ಭೇಟಿಯಾಗಿ ಸರಿಪಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎಲ್‌.ಎಸ್‌. ಬೀದಿ ಮಾತನಾಡಿ, ವಿದ್ಯಾರ್ಥಿಗಳು ಟಿ.ವಿ, ಮೊಬೈಲ್‌ ನಿಂದ ದೂರವಿದ್ದು, ಓದಿನ ಕಡೆ ಗಮನಕೊಟ್ಟು ಪಾಠದೊಂದಿಗೆ ಆಟದ ಕಡೆ ವಲವು ಹೊಂದಿದರೆ ಮನಸ್ಸು ಹಗುರಾಗಿ ಆರೋಗ್ಯವಂತಾಗಿ ಶಿಕ್ಷಣದಲ್ಲಿ ಗುರಿ ಸಾಧಿಸಬಹುದಾಗಿದೆ ಎಂದರು.

Advertisement

ಶಿಕ್ಷಕ ರಾಜಕುಮಾರ ಪವಾರ, ಬಸವರಾಜ ಕಡಗಂಚಿ, ಬಸವರಾಜ ಚೌಧರಿ ಮತ್ತಿತರರು ಇದ್ದರು. ಪ್ರಬಂಧದಲ್ಲಿ 10 ವಿದ್ಯಾರ್ಥಿಗಳಲ್ಲಿ ಪ್ರಥಮ ಸರಿತಾ, ದ್ವಿತೀಯ ಲಕ್ಷ್ಮೀ ಹಾಗೂ ಅಫ್ರಾನ್‌ ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಪ್ರಮೋದ ಜಿಡ್ಡೆ ಸ್ವಾಗತಿಸಿದರು, ಸತೀಶ ಕೊಗನೂ ನಿರೂಪಿಸಿದರು, ಅಕ್ಕಮಹಾದೇವಿ ಶಾಲೆ ಮುಖ್ಯಶಿಕ್ಷಕ ಶಿವಪುತ್ರಪ್ಪ ಅಲ್ದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next