Advertisement

ವರುಷಗಳು ಸರಿದವೆಷ್ಟು ಮಂಗಲಮೂರ್ತಿಯ ರೂಪಿಸಿ!

12:50 AM Jan 28, 2019 | Team Udayavani |

ತಮಿಳುನಾಡಿನಿಂದ ಬಂದು ಕಾರ್ಕಳದಲ್ಲಿ ನೆಲೆ ನಿಂತ ಶಿಲ್ಪಿಗಳ ಕುಟುಂಬದ ಕಣ್ಣನ್‌ 20ನೇ ಶತಮಾನದ ಮಹಾಮೂರ್ತಿಯ ಕೆತ್ತನೆ ಕೆಲಸದಲ್ಲಿ ಭಾಗಿಯಾದುದೂ ಒಂದು ವಿಶೇಷ.

Advertisement

ಬೆಳ್ತಂಗಡಿ: ಅದೊಂದು ಅದ್ಭುತ ಅನುಭವ. ಭಗವಾನ್‌ ಶ್ರೀ ಬಾಹುಬಲಿ ಮೂರ್ತಿಯ ಕೆತ್ತನೆ ಜೀವಮಾನದ ಒಂದು ಅನುಭವ ವಿಶೇಷವೇ ಸರಿ. ಆ ಮಹಾನ್‌ಮೂರ್ತಿಯನ್ನು ಕೆತ್ತಿ ನಿಲ್ಲಿಸಿ ವರುಷಗಳು ಕಳೆದು ಹೋದವೆಷ್ಟು…! 
ಇದು ರೆಂಜಾಳ ಗೋಪಾಲ ಶೆಣೈ ಅವರ ನಿರ್ದೇಶನದಡಿ ಧರ್ಮಸ್ಥಳ ಬಾಹುಬಲಿ ಮೂರ್ತಿಯ ಕೆತ್ತನೆ ಕೆಲಸದಲ್ಲಿ ಭಾಗಿಯಾಗಿದ್ದ ಶಿಲ್ಪಿ ವಿ.ಆರ್‌. ಕಣ್ಣನ್‌ ಅವರ ಮನದಾಳದ ಮಾತುಗಳು.

ಧರ್ಮಸ್ಥಳ ಶ್ರೀ ಬಾಹುಬಲಿಯ ಕೆತ್ತನೆ ಆರಂಭವಾದಾಗ ಕಣ್ಣನ್‌ ಸುಮಾರು 22-23 ವರ್ಷ ವಯಸ್ಸಿನ ನವಯುವಕ. ಕಲ್ಲನ್ನೂ ಕರಗಿಸುವಂತಹ ಉತ್ಸಾಹಿ. ಅವರು ಮತ್ತು ಇನ್ನಿತರ ಶಿಲ್ಪಿಗಳು ಶೆಣೈ ಅವರ ಮಾರ್ಗದರ್ಶನದಲ್ಲಿ ಮಂಗಲಪಾದೆಯಲ್ಲಿ ಮಲಗಿದ್ದ ಕರಿಕಲ್ಲನ್ನು ಆರು ವರ್ಷಗಳ ಅವಧಿಯಲ್ಲಿ ಪ್ರತಿಮನ್ಮಥ ಮೂರ್ತಿಯಾಗಿ ಕಟೆದಿದ್ದರು. ಶಿಲ್ಪಗಳ ಕೆತ್ತನೆ ಕಾಯಕದಲ್ಲಿ ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಅವರ ಜತೆಗೆ ತನ್ನ ಒಡನಾಟ ಸುದೀರ್ಘ‌ 20 ವರ್ಷಗಳ ಅವಧಿಯದ್ದು ಎಂದು ಕಣ್ಣನ್‌ ನೆನಪಿಸಿಕೊಳ್ಳುತ್ತಾರೆ.

ಬಾಹುಬಲಿ ಕೆತ್ತನೆ ಕೆಲಸ ಬೆಳಗ್ಗೆ 8ಕ್ಕೆ ಆರಂಭಗೊಂಡರೆ ಸಂಜೆ 6ರ ವರೆಗೆ ಮುಂದುವರಿಯುತ್ತಿತ್ತು. ಮಧ್ಯಾಹ್ನ 12ರಿಂದ 1ರ ವರೆಗೆ ಊಟದ ವಿರಾಮ. ಪೂಜ್ಯ ಹೆಗ್ಗಡೆಯವರು ಶಿಲ್ಪಿಗಳ ಜತೆಗೆ ಸದಾ ಇರುತ್ತಿದ್ದರು. ಆಗ ಕೆಲಸ ಮಾಡುವ ಸ್ಥಳದಲ್ಲೇ ಹೆಗ್ಗಡೆಯವರಿಗೆ ಉಳಿದುಕೊಳ್ಳುವುದಕ್ಕೆ ತಾತ್ಕಾಲಿಕ ಮನೆ(ಬುಡಾರ)ಯ  ವ್ಯವಸ್ಥೆಯನ್ನೂ ಮಾಡಿದ್ದರು ಎಂದು ಕಣ್ಣನ್‌ ಸ್ಮರಿಸಿಕೊಳ್ಳುತ್ತಾರೆ.

ದೇವಕಾಯಕ ನಿರಂತರ
ಧರ್ಮಸ್ಥಳದ ವಿಗ್ರಹವನ್ನು ಕೆತ್ತಿದ ಬಳಿಕ ಕಣ್ಣನ್‌ ಅದಕ್ಕಿಂತ ಗಾತ್ರದಲ್ಲಿ ಕೊಂಚ ಕಿರಿದಾದ ಮತ್ತೂಂದು ಬಾಹುಬಲಿ ಮೂರ್ತಿ ಯನ್ನೂ ಕೆತ್ತಿದ್ದರಂತೆ. ಅದನ್ನು ಉತ್ತರ ಭಾರತದ ಆಗ್ರಾದತ್ತ ಸಾಗಿಸಲಾಗಿತ್ತು ಎಂದು ಕಣ್ಣನ್‌ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ 73ರ ಮಾಗಿದ ವಯಸ್ಸಿನಲ್ಲಿದ್ದರೂ ಕಣ್ಣನ್‌ ಕೇರಳದ ತಳಿಪರಂಬದ ದೇವಸ್ಥಾನವೊಂದರ ಶಿಲ್ಪ ಕೆತ್ತನೆಯ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.

Advertisement

ಶಿಲೆಯ ಆಯ್ಕೆಯ ಸವಾಲು ಮಹಾನ್‌ ಮೂರ್ತಿ 
ಕೆತ್ತನೆಯ ಹೊಣೆಯನ್ನು ವಹಿಸಿಕೊಂಡ ಶೆಣೈ ಅವರ ಎದುರಿದ್ದುದು ಶಿಲೆಯ ಆಯ್ಕೆಯ ಸವಾಲು. ರೂಪುಗೊಳ್ಳಬೇಕಾದ ಮೂರ್ತಿ ಅಂತಿಂಥದ್ದಲ್ಲ; ಅನಾದಿ ಕಾಲಕ್ಕೆ ಮಳೆ-ಬಿಸಿಲು-ಚಳಿಯನ್ನು ಎದುರಿಸಿ ತಲೆಯೆತ್ತಿ ನಿಂತಿರಬೇಕಾದ ವೈರಾಗ್ಯಮೂರ್ತಿಯದು. ಆಗ ಶೆಣೈ ಅವರಿಗೆ ಸೂಕ್ತವೆನಿಸಿದ್ದು ಕಾರ್ಕಳದ ಸಮೀಪ ಮಂಗಲಪಾದೆಯಲ್ಲಿದ್ದ ನೂರು ಅಡಿ ಎತ್ತರ ಹಾಗೂ ಐವತ್ತೆಂಟು ಅಡಿಗಳ ಬೃಹತ್‌ ಶಿಲೆ.
ಶಿಲ್ಪಶಾಸ್ತ್ರ ದಂತೆ 39 ಅಡಿಯ ಬೃಹತ್‌ ಮೂರ್ತಿಯಕೆತ್ತನೆಯ ಅಭೂತಪೂರ್ವ ಕಾರ್ಯಕ್ಕೆ 1967ರ ವಿಜಯ ದಶಮಿಯ ಶುಭದಿನದಂದು ಮೂಹೂರ್ತ ನಿಗದಿಯಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next