ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಹಸಿವಿನಿಂದ ಸಾವಿಗೀಡಾದವರ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಈ ಸಮಸ್ಯೆಯನ್ನು ನಿವಾರಿಸಲು ರಾಷ್ಟ್ರಮಟ್ಟದ ಸಿದ್ಧ ಮಾದರಿಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ದೇಶದಲ್ಲಿ ಹಸಿವಿನಿಂದಾದ ಸಾವುಗಳ ಬಗ್ಗೆ 2015-16ರಲ್ಲಿ ಬಿಡುಗಡೆ ಮಾಡಲಾಗಿದ್ದ ಅಂಕಿ-ಅಂಶಗಳ ಬಗ್ಗೆ ಮಂಗಳವಾರ ನಡೆದ ಕಲಾಪದ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, “ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರಗಳು ತಮ್ಮಲ್ಲಿ ಹಸಿವಿನಿಂದ ಆಗುತ್ತಿರುವ ಸಾವುಗಳ ಬಗ್ಗೆ ಪ್ರಕಟಣೆ ನೀಡುತ್ತಿಲ್ಲ.
ಹಾಗಾಗಿ, ಹಸಿವಿನಿಂದ ಯಾವುದೇ ಸಾವು ಸಂಭವಿಸುತ್ತಿಲ್ಲ ಎಂದು ನಾವು ತಿಳಿಯಬಹುದೇ?” ಎಂದು ಪ್ರಶ್ನಿಸಿದರು. ಜೊತೆಗೆ, “ನ್ಯಾಯಾಲಯಕ್ಕೆ ಈ ಕುರಿತಂತೆ ವರದಿಯೊಂದು ಬೇಕಿದೆ. ಹಸಿವಿನಿಂದ ಸತ್ತವರ ಬಗ್ಗೆ ವರದಿಯನ್ನು ಸಲ್ಲಿಸುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ” ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸೂಚಿಸಿದರು.