ಶ್ರೀನಗರ: “ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹಬಂಧನದಲ್ಲಿರುವ ಕೆಲವು ನಾಯಕರು ಇಲ್ಲಿನ ಜನರಿಗೆ ಗನ್‌ಗಳನ್ನು ಕೈಗೆತ್ತಿಕೊಂಡು ಪ್ರಾಣತ್ಯಾಗ ಮಾಡುವಂತೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನಾನು ಕಣಿವೆ ರಾಜ್ಯದ ನಾಗರಿಕರಿಗೆ ಹೇಳುವುದಿಷ್ಟೆ. ನಿಮ್ಮನ್ನು ಪ್ರಚೋದಿಸುವಂಥ ನಾಯಕರ ಬಳಿ ಹೋಗಿ, “ಮೊದಲು ನೀವು ಪ್ರಾಣತ್ಯಾಗ ಮಾಡಿಕೊಳ್ಳಿ’ ಎಂದು ಹೇಳಿ ಬನ್ನಿ.’
ಇಂತಹ ಆಕ್ರೋಶಭರಿತ ಮಾತುಗಳನ್ನಾಡಿರುವುದು ಬಿಜೆಪಿ ಹಿರಿಯ ನಾಯಕ ರಾಮ್‌ಮಾಧವ್. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಮಾತನಾಡಿರುವ ರಾಮ್‌ಮಾಧವ್, ರಾಜಕೀಯ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಶ್ರೀನಗರದ ಟ್ಯಾಗೋರ್ ಹಾಲ್‌ನಲ್ಲಿ ಭಾನುವಾರ ನಡೆದ ಬಿಜೆಪಿಯ ಯುವ ಘಟಕದ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. “ಇಂಥ ರಾಜಕೀಯಗಳೆಲ್ಲ ನಡೆಯಲ್ಲ. ಹೊಸ ಆಡಳಿತವು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂಬ ಮಂತ್ರದಡಿ ಕಾರ್ಯನಿರ್ವಹಿಸುತ್ತಿದೆ. ಇದು ಮೋದಿ ಸರ್ಕಾರದ ಧ್ಯೇಯ’ ಎಂದೂ ಅವರು ಹೇಳಿದ್ದಾರೆ.
ಜೈಲಿಗಟ್ಟುವುದು ಶತಃಸಿದ್ಧ: ಜಮ್ಮು ಮತ್ತು ಕಾಶ್ಮೀರದ ಶಾಂತಿ ಪ್ರಕ್ರಿಯೆಗೆ ಭಂಗ ತರಲು ಯಾರಾದರೂ ಮುಂದಾದರೆ, ಅಂಥವ ರನ್ನು ಜೈಲಿಗಟ್ಟಿಯೇ ಸಿದ್ಧ ಎಂದೂ ರಾಮ್‌ಮಾಧವ್ ಘೋಷಿಸಿದ್ದಾರೆ. 200ರಿಂದ 300 ಮಂದಿಯನ್ನು ಬಂಧಿಸುವುದರಿಂದ ಶಾಂತಿ ಕಾಪಾಡಬಹುದೆಂದರೆ, ಅವರೆಲ್ಲ ಇನ್ನೂ ಕೆಲ ಕಾಲ ಅಲ್ಲೇ ಇರಲಿ. ಅಭಿವೃದ್ಧಿ ಮತ್ತು ಶಾಂತಿಯ ಪಥದಲ್ಲಿ ನಾವು ಸಾಗಲು, ಅಂಥವರನ್ನು ಬಂಧಿಸಿಡಬೇಕಾದ ಅಗತ್ಯ ವಿದೆ ಎಂದಾದರೆ ಅದನ್ನೇ ನಾವು ಮಾಡು ತ್ತೇವೆ. ಇಂಥವರಿಗಾಗಿ ಭಾರತದಲ್ಲಿ ಸಾಕಷ್ಟು ಜೈಲುಗಳಿವೆ ಎಂದೂ ಅವರು ಹೇಳಿದ್ದಾರೆ.
ಪ್ರತಿಭಟನೆಗೆ ಸಾದಿಕ್ ಖಾನ್ ಖಂಡನೆ: ಇದೇ ವೇಳೆ, ಮುಂದಿನ ಭಾನುವಾರ ಅಂದರೆ ದೀಪಾವಳಿಯಂದು ಲಂಡ® …ನಲ್ಲಿ ಭಾರತ ವಿರೋಧಿ ಪ್ರತಿಭಟನೆ ನಡೆಸಲು ಮುಂದಾಗಿರುವ ಸಂಘಟನೆಗಳ ನಿರ್ಧಾರವನ್ನು ಲಂಡನ್ ಮೇಯರ್ ಸಾದಿಕ್ ಖಾನ್ ಖಂಡಿಸಿದ್ದಾರೆ. ಇಂಥ ಪ್ರತಿಭಟನೆಗಳು ಮನಸ್ಸುಗಳ ನಡುವೆ ಮತ್ತಷ್ಟು ಬಿರುಕು ಸೃಷ್ಟಿಸುತ್ತವೆ. ಹಾಗಾಗಿ, ನೀವು ಮರುಚಿಂತನೆ ನಡೆಸಿ, ಕಾರ್ಯಕ್ರಮ ರದ್ದು ಮಾಡಿ ಎಂದು ಆಯೋಜಕರಿಗೆ ಖಾನ್ ಹೇಳಿದ್ದಾರೆ.
ಮಕ್ಕಳ ಹಾಜರಾತಿ ಎಷ್ಟಿದೆ? 370ನೇ ವಿಧಿ ರದ್ದು ಬಳಿಕ ಕಾಶ್ಮೀರದಲ್ಲಿ ಕೇವಲ ಶೇ.20ರಷ್ಟು ಮಕ್ಕಳು ಮಾತ್ರ ಶಾಲೆಗೆ ಹಾಜರಾಗುತ್ತಿದ್ದರೆ, ಜಮ್ಮುವಿನಲ್ಲಿ ಹಾಜರಾತಿ ಶೇ. 100ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ, ಕಾಶ್ಮೀರದಲ್ಲಿ ಶೇ.86.3ರಷ್ಟು ಶಿಕ್ಷಕರು, ಜಮ್ಮುವಿನಲ್ಲಿ ಶೇ. 100ರಷ್ಟು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದೂ ಹೇಳಿದ್ದಾರೆ. ಇನ್ನು 1,02,069 ಸ್ಥಿರ ದೂರವಾಣಿಗಳ ಪೈಕಿ ಎಲ್ಲವೂ ಕಾರ್ಯ ನಿರ್ವಹಿಸುತ್ತಿವೆ. ಶೇ.84 ರಷ್ಟು ಮೊಬೈಲ್ ಫೋನ್ ಸೇವೆಯೂ ಪುನಾರಂಭಗೊಂಡಿವೆ ಎಂದು ಗೃಹ ಇಲಾಖೆ ತಿಳಿಸಿದೆ.