Advertisement

ಕಸದ ಬೆಟ್ಟದ ಮೇಲೊಂದು ಮನೆಯ ಮಾಡಿ..

12:48 AM Mar 05, 2023 | Team Udayavani |

ಕಸ ನಿರ್ವಹಣೆ ನಗರೀಕರಣದ ಸಮಸ್ಯೆ ಎಂದುಕೊಂಡಿದ್ದೆವು. ಆದರೀಗ ಬರೀ ನಗರದ ಬಾಬತ್ತಾಗಿ ಉಳಿದಿಲ್ಲ. ಸಣ್ಣ ಹಳ್ಳಿಯ ಸಂಕಟವೂ ಇದೇ. ಮಂಗಳೂರಿನಂಥ ನಗರದಲ್ಲಿ ಕಸ ನಿರ್ವಹಣೆ ಯಾವ ತೆರನಾದ ಸಮಸ್ಯೆಯಾಗಿದೆ ಎಂಬುದು ತಿಳಿದದ್ದೇ. ಬೆಂಗಳೂರಿನ ಕಥೆಯೂ ಇದೇ. ದಿಲ್ಲಿಯ ಕಥೆಯಂತೂ ಮೊನ್ನೆ ನೋಡಿರ ಬೇಕು. ದಿಲ್ಲಿಯ ಕಸದ ಬೆಟ್ಟಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭೇಟಿ ಕೊಟ್ಟಾಗಿನ ಅವರ ಆಲೋಚನೆ, “ಇಷ್ಟು ಕರಗಿಸಿದ್ದೇವೆ, ಇನ್ನೂ ಇದೆ?’ ಎಂಬಂತಿತ್ತು. ಓಖ್ಲಾ, ಗಾಜಿಪುರ್‌ ಹಾಗೂ ಬಲ್ಸಾ ಪ್ರದೇಶಗಳಲ್ಲಿ ಸುರಿಯಲಾದ ಕಸಗಳ ವಿಲೇವಾರಿ ದಿಲ್ಲಿ ಪಾಲಿಕೆ ಚುನಾವಣೆಯ ವಿಷಯವೂ ಆಗಿತ್ತು. ಮೊನ್ನೆಯ ಲೆಕ್ಕಾಚಾರದ ಪ್ರಕಾರ ಓಖಾÉ ತ್ಯಾಜ್ಯ ಪ್ರದೇಶದ 25 ಲಕ್ಷ ಮೆಟ್ರಿಕ್‌ ಟನ್‌ ವಿಲೇವಾರಿ ಆಗಿದೆ, ಇನ್ನೂ 45 ಲಕ್ಷ ಮೆಟ್ರಿಕ್‌ ಟನ್‌ ಬಾಕಿ ಇದೆ. ಹಾಗೆಂದು ಕಸದ ಉತ್ಪತ್ತಿ ಕಡಿಮೆಯಾಗಿಲ್ಲ. ಅದರ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಕಸದ ವೃತ್ತ ಭೇದಿಸುವುದು ಹೇಗೆ?
ಈ ಸಂದರ್ಭದಲ್ಲಿ ನೆನಪಾಗುವುದು ಜಪಾನಿನ ಒಂದು ಪುಟ್ಟ ಹಳ್ಳಿಯ ಕಥೆ. ನಮ್ಮ ಮನೆಯಲ್ಲಿನ, ಊರಿನ ಶೂನ್ಯ ತ್ಯಾಜ್ಯ ಸಾಧನೆಗೆ ಇಲ್ಲಿಂದ ಸ್ಫೂರ್ತಿ ಸಿಕ್ಕಬಹುದು. ಕಸ ವಿಲೇವಾರಿ ಅಥವಾ ನಿರ್ವಹಣೆ ಎಂಬುದೂ ಒಂದು ಬಗೆಯಲ್ಲಿ ಡಬಲ್‌ ಎಂಜಿನ್‌ ಸರಕಾರ ನಡೆಸಿದಂತೆಯೇ. ನಾಗರಿಕರು ಮತ್ತು ಸ್ಥಳೀಯ ಸಂಸ್ಥೆ ಇಬ್ಬರೂ ಒಂದೇ ಧಾಟಿಯಲ್ಲಿ ಆಲೋಚಿಸ ಬೇಕು, ನಡೆಯಬೇಕು. ಆಗ ಕಸ ಒಂದು ಸಂಪನ್ಮೂಲ, ಇಲ್ಲವೇ ಸಮಸ್ಯೆ.

Advertisement

ಕಮಿಕತ್ಸು ಆ ಹಳ್ಳಿ ಹೆಸರು. ಹೆಚ್ಚೆಂದರೆ 1,500 ಮಂದಿ ಜನಸಂಖ್ಯೆ. ಊರೆಲ್ಲ ಮಲಗಿರುವಾಗ ಎದ್ದು ಕುಳಿತಿದ್ದ ಬುದ್ಧನಂತೆಯೇ, ದೇಶ-ಜಗತ್ತು ಕಸ ಉತ್ಪತ್ತಿಯ ಅಭ್ಯಾಸ (ಯೂಸ್‌ ಆ್ಯಂಡ್‌ ತ್ರೋ)ದಲ್ಲಿ ಮುಳುಗಿದ್ದಾಗ ಈ ಹಳ್ಳಿ ಶೂನ್ಯ ತ್ಯಾಜ್ಯದ ಸಂಕಲ್ಪ ಮಾಡಿತು. ಕಸದ ಉತ್ಪತ್ತಿಯನ್ನು ಕುಗ್ಗಿಸುವ ಹಾಗೂ ಮರು ಬಳಕೆ ಸಂಸ್ಕೃತಿಯನ್ನು ಬೆಳೆಸುವ ಹಾದಿಯನ್ನು ಆಯ್ದುಕೊಂಡಿತು.

ಈ ಸುದೀರ್ಘ‌ ಪಯಣ ಆರಂಭವಾಗಿದ್ದು 20 ವರ್ಷಗಳ ಹಿಂದೆ. ಶೂನ್ಯ ತ್ಯಾಜ್ಯ ಸಾಧನೆಗೆ ಸಂಕಲ್ಪಿಸಿದ್ದ ಆ ದೇಶದ ಮೊದಲ ಹಳ್ಳಿಯದು. ಪರಿಸರ ಮಾಲಿನ್ಯ ತಡೆದು ಸುಸ್ಥಿರ ಭೂಮಿಗೆ ತಮ್ಮ ಕೊಡುಗೆ ನೀಡಬೇಕೆಂಬ ಹಂಬಲ ಸುದೀರ್ಘ‌ ಪಯಣವನ್ನೂ ಚಿಕ್ಕದಾಗಿಸಿದೆ. ಈಗ ಶೇ. 80ರಷ್ಟು ಗುರಿಯನ್ನು ಸಾಧಿಸಿದೆ. 2030ರೊಳಗೆ ಶೂನ್ಯ ತ್ಯಾಜ್ಯದ ಸಂಪಾದನೆ ಖಚಿತ.

ಸ್ಥಳೀಯ ಆಡಳಿತ ಕೈಗೊಂಡ ಮೊದಲ ಕ್ರಮವೆಂದರೆ, ಕಸಗಳನ್ನು ಎಲ್ಲೆಂದರಲ್ಲಿ ಸುಡುವ ಜಾಯಮಾನಕ್ಕೆ ಅಂತ್ಯ ಹಾಡಿದ್ದು. “ನೀವು ಕಸವನ್ನು ಸುಡಬೇಡಿ, ನಮಗೆ ಕೊಡಿ’ ಎಂದಿತು. ಹಿಂಜರಿಕೆಯ ಜನರ ಮನವೊಲಿಸುವಲ್ಲಿ ಸೋಲಲಿಲ್ಲ. ಅಲ್ಲಿಂದ ಆರಂಭವಾದದ್ದು ಈ ಕಸ ಯಜ್ಞ. ಹೀಗೆ ಸಂಗ್ರಹಿಸಿದ ಕಸಗಳನ್ನು 45 ರೀತಿಯಲ್ಲಿ ವಿಂಗಡಿಸಿ ಮರು ಬಳಕೆಗೆ ಪ್ರಯತ್ನಿಸಿತು. ಹೀಗೆ ವಿಂಗಡಿಸುವುದನ್ನೂ ನಾಗರಿಕರಿಗೆ ಕಲಿಸಿತು. ಪುನರ್‌ ಬಳಕೆ ಕೇಂದ್ರ ತೆರೆದು ಉದಾಹರಣೆಯಾಯಿತು. ಕಸದ ವೃತ್ತವನ್ನು ಭೇದಿಸುವಲ್ಲಿ ಮೊದಲ ಜಯ ಸಾಧಿಸಿತು. ಈ ವೃತ್ತವೆಂದರೆ, ಬಳಸಿ ಬಿಸಾಡುವ ಆಲೋಚನೆಗೆ ತಡೆ ಹಾಕುವುದು. ನಾವು ಮಾರುಕಟ್ಟೆಯಿಂದ ಒಂದಿಷ್ಟು ವಸ್ತುಗಳನ್ನು ತರುತ್ತೇವೆ, ಅದರಿಂದ ಸೃಷ್ಟಿಯಾದ ತ್ಯಾಜ್ಯವನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಮರು ದಿನ ಮತ್ತೆ ಮಾರುಕಟ್ಟೆಯಿಂದ ಅಷ್ಟೇ ಸರಕನ್ನು ತಂದು ಅಷ್ಟೇ ಕಸವನ್ನು ಮತ್ತೆ ಬುಟ್ಟಿಗೆ ಎಸೆಯು ತ್ತೇವೆ. ಈ ವೃತ್ತವನ್ನು ಭೇದಿಸುವಲ್ಲಿ ಒಂದು ಸಣ್ಣ ಉಪಾಯವೆಂದರೆ, ಮಾರುಕಟ್ಟೆಗೆ ಹೋಗುವಾಗ ಕೈ ಚೀಲ ಕೊಂಡೊಯ್ಯುವುದು. ಇದರಿಂದ ಪ್ರತಿ ಬಾರಿ ನಾಲ್ಕರಿಂದ ಐದು ಪ್ಲಾಸ್ಟಿಕ್‌ ತೊಟ್ಟೆಗಳ ಕಸವನ್ನು ಉತ್ಪತ್ತಿ ಮಾಡುವುದು ತಪ್ಪುತ್ತದೆ. ಇಂಥ ಅನು ಷ್ಠಾನದ ಬೆಳಕು ಜನರಿಗೆ ವಸ್ತುಗಳ ಮರು ಬಳಕೆಯ ಮಹತ್ವವನ್ನು ತಿಳಿಸಿತು. ಉತ್ಪತ್ತಿಯ ಮೂಲದಲ್ಲೇ ಕಸಕ್ಕೆ ಕೊಡಲಿ ಪೆಟ್ಟು ಬಿದ್ದಿತು.

ಊರಿನಲ್ಲಿ ಹೊಸ ಅಂಗಡಿಯನ್ನು ತೆರೆಯ ಲಾಯಿತು. ಅದು ಮರು ಬಳಕೆಯ ತಾಣ. ತಮಗೆ ಬೇಡವಾದ, ಬಳಸದ ವಸ್ತುಗಳನ್ನು ತಂದು ಆ ಅಂಗಡಿಗೆ ಕೊಡಬಹುದು. ಅಗತ್ಯವಿದ್ದವರು ತಾವು ತೆಗೆದುಕೊಳ್ಳುವ ವಸ್ತು ಹಾಗೂ ಅದರ ತೂಕವನ್ನು ದಾಖಲಿಸಿ ಉಚಿತವಾಗಿ ಕೊಂಡೊಯ್ಯಬಹುದು. ಅದರಿಂದ ಎಷ್ಟು ವಸ್ತುಗಳು ಮರು ಬಳಕೆಯಾಗು ತ್ತವೆ ಎಂಬುದನ್ನು ದಾಖಲಿಸಿಕೊಂಡು, ನಿತ್ಯವೂ ಪ್ರಕಟಿಸತೊಡಗಿತು. ಇದು ತ್ಯಾಜ್ಯವಾಗುವ ಹಂತ ವನ್ನು ತಡೆಯುವ ಪ್ರಯತ್ನ. ಇಲ್ಲದಿದ್ದರೆ ಇವೆಲ್ಲವೂ ತ್ಯಾಜ್ಯಗಳಾಗಿ ಸುಡಲ್ಪಡುತ್ತಿತ್ತು ಇಲ್ಲವೇ ಸ್ಥಳೀಯ ಆಡಳಿತದ ಕಸದ ರಾಶಿಯಲ್ಲಿ ಬೀಳುತ್ತಿದ್ದವು.

Advertisement

ಇದರ ತರುವಾಯ ಒಂದು ಅತ್ಯಂತ ಸೃಜನಶೀಲ ವಾದ, ನಾವೀನ್ಯದಿಂದ ಕೂಡಿದ ಅಂಗಡಿಯನ್ನು ಸಂಪೂರ್ಣ ಮರು ಬಳಕೆಯಾದ ವಸ್ತುಗಳ ಮೂಲಕವೇ ಕಲಾತ್ಮಕವಾಗಿ ರೂಪಿಸಿತು. ಇದರ ಮುಖೇನ ಹೇಗೆ ವಸ್ತುಗಳ ಮರು ಬಳಕೆ ಸಾಧ್ಯ ಎಂಬುದನ್ನು ಉದಾಹರಣೆ ಸಮೇತ ವಿವರಿಸಿತು. ಇದು ಹಲವರಿಗೆ ಸ್ಫೂರ್ತಿಯಾಯಿತು. ಯಾವು ದನ್ನೂ ವ್ಯರ್ಥ, ತ್ಯಾಜ್ಯ ಎಂದುಕೊಂಡಿದ್ದರೂ ಅವು ಗಳನ್ನು ಆಸಕ್ತಿದಾಯಕ ರೀತಿಯಲ್ಲಿ ಬಳಸಲು ಆರಂಭಿಸಿದರು.

ಆಹಾರ ತ್ಯಾಜ್ಯ, ಕೃಷಿ ಉತ್ಪನ್ನಗಳ ಮರುಬಳಕೆಗೂ ನಾನಾ ಪರಿಹಾರಗಳನ್ನು ಹುಡುಕಿತು. ಕೆಲವು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಈ ಮರು ಬಳಕೆಯ ಉತ್ಪನ್ನಗಳ ಉತ್ಪಾದನೆಯಿಂದ ಹಿಡಿದು ಮಾರಾಟದವರೆಗೂ ಕಾರ್ಯ ನಿರತವಾಯಿತು. ಸ್ಥಳೀಯ ಉದ್ಯಮ ಗಳೂ ದನಿಗೂಡಿಸಿದವು.ಇಲ್ಲಿ ತೆರೆದ ಒಂದು ಹೊಟೇಲ್‌ನ ಕತೆಯೂ ಆಸಕ್ತಿದಾಯಕವೇ. ಅದನ್ನು ರೂಪಿಸಿರುವುದು ಎಲ್ಲ (ಒಳಾಂಗಣ,ಹೊರಾಂಗಣ ವಿನ್ಯಾಸದಿಂದ ಹಿಡಿದು ಎಲ್ಲವೂ) ಮರು ಬಳಕೆಯ ವಸ್ತುಗಳಿಂದ ಅಂದರೆ ತ್ಯಾಜ್ಯವೆಂದು ಪರಿಗಣಿತವಾದ ವಸ್ತುಗಳಿಂದ. ಅಲ್ಲಿ ಬರುವ ಪ್ರತಿ ಅತಿಥಿಗೂ ತಮ್ಮ ವಾಸ್ತವ್ಯದ ಅವಧಿಯ ಕಸ ವಿಂಗಡಣೆಗೆ ಬುಟ್ಟಿಗಳನ್ನು ಕೊಡಲಾಗುತ್ತದೆ. ಅದರಂತೆ ವಿಂಗಡನೆ ಮಾಡ ಬೇಕು. ಅವೆಲ್ಲವೂ ಶೂನ್ಯ ತ್ಯಾಜ್ಯದ ಕೇಂದ್ರವನ್ನು ತಲುಪಿ ಸಂಸ್ಕರಿಸಲ್ಪಡುತ್ತವೆ.

ಇದರಿಂದ ಮೂರು ಲಾಭ ಸಾಧನೆಯಾಯಿತು. ಒಂದೆಡೆ ಶೂನ್ಯ ತ್ಯಾಜ್ಯ, ಮತ್ತೂಂದೆಡೆ ಜನರಲ್ಲಿ ಹಣದ ಉಳಿತಾಯ, ಮೂರನೆಯದಾಗಿ ಸ್ಥಳೀಯ ಆಡಳಿತ ಕಸದ ವಿಲೇವಾರಿ ಮತ್ತು ನಿರ್ವಹಣೆಗೆ ವೆಚ್ಚ ಮಾಡಬೇಕಾದ ಅಪಾರ ಪ್ರಮಾಣದ ಹಣ ಅಭಿವೃದ್ಧಿಗೆ ಬಳಸಬಹುದಾದ ಸಾಧ್ಯತೆ ಸೃಷ್ಟಿಯಾ ಯಿತು. ಹಣವೆಂಬುದು ಹೊರ ಹೋಗದೇ ಊರಲ್ಲೇ ಸುತ್ತತೊಡಗಿತು. ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಅದೇ ಊರುಗೋಲಾಯಿತು.

ತಮ್ಮ ಊರಿಗೆ ಬೇಕಾದ ಪ್ರತಿಯೊಂದನ್ನೂ ಊರಲ್ಲೇ ಬೆಳೆಯಲು, ಉತ್ಪತ್ತಿ ಮಾಡಲು ಆರಂಭಿ ಸಿದ್ದು ತ್ಯಾಜ್ಯ ಉತ್ಪತ್ತಿಗಷ್ಟೇ ರಾಮಬಾಣವಾಗಲಿಲ್ಲ. ಬದಲಿಗೆ ಸ್ಥಳೀಯ ಆರ್ಥಿಕತೆಗೆ ಭೀಮ ಬಲ ಬಂದಿತು. ಅಗ್ಗ (ಹೊರಗಿನಿಂದ ತರುವ ಪ್ರಮಾಣಕ್ಕೆ ಹೋಲಿಸಿದಾಗ) ಮತ್ತು ಗುಣಮಟ್ಟದ ಉತ್ಪನ್ನಗಳು ನಾಗರಿಕರಿಗೆ ಲಭಿಸತೊಡಗಿದವು. ಹಣದ ಹರಿವಿಗೂ ಯಾವುದೇ ಧಕ್ಕೆಯಾಗಲಿಲ್ಲ. ಇದೇ ಸುಸ್ಥಿರತೆ ಎನ್ನುವುದು.

ನಮ್ಮ ಮನೆಯಲ್ಲೂ, ಊರಿನಲ್ಲೂ ಇಂಥ ದೊಂದು ಸಾಧನೆ ಸಾಧ್ಯವಿದೆ. ನಾವೆಲ್ಲ ಮನಸ್ಸು ಮಾಡಬೇಕಷ್ಟೇ. ಅಂದಹಾಗೆ ಪ್ರಸ್ತುತ ನಮ್ಮ ದೇಶದಲ್ಲಿ ದಿನಕ್ಕೆ 62 ಮಿಲಿಯನ್‌ ಮೆ. ಟನ್‌ ತ್ಯಾಜ್ಯ (ಘನ) ವಾರ್ಷಿಕವಾಗಿ ಉತ್ಪತ್ತಿಯಾಗುತ್ತಿದೆ. ರಾಜ್ಯದಲ್ಲಿ ನಿತ್ಯವೂ ಉತ್ಪತ್ತಿಯಾಗುತ್ತಿರುವ ಕಸದ ಪ್ರಮಾಣ ಸುಮಾರು 13 ಸಾವಿರ ಮೆ. ಟನ್‌ಗಳು. ಅದರ ಅರ್ಧದಷ್ಟು ಪ್ರಮಾಣ ವನ್ನು ಸಂಸ್ಕರಿಸಲು ಹೆಣಗಾಡುತ್ತಿದ್ದೇವೆ.

ನಾವೂ ಕಸದ ಉತ್ಪತ್ತಿಯ ಮೂಲದಲ್ಲೇ ಕೊಲ್ಲುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವುದೇ ಉಳಿದಿರುವ ಉಪಾಯ.

-ಅರವಿಂದ ನಾವಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next