Advertisement

ಕುಂದುಕೊರತೆ ಸಭೆ ಶೀಘ್ರವಾಗಿ ಮಾಡಿ

12:07 PM Nov 28, 2018 | Team Udayavani |

ಬೆಂಗಳೂರು: ನಗರ ಕೊಳೆಗೇರಿಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಕುಂದುಕೊರತೆ ಸಭೆಯನ್ನು ಶೀಘ್ರವಾಗಿ ಕರೆಯಬೇಕು ಎಂದು ಆಗ್ರಹಿಸಿ ಸಾವಿತ್ರಿ ಬಾಯಿ ಫ‌ುಲೆ ಮಹಿಳಾ ಸಂಘಟನೆ ನಗರದ ಪುರಭವನ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿತು.

Advertisement

ಸಂಘಟನೆ ಸಂಚಾಲಕಿ ಚಂದ್ರಮ್ಮ ಮಾತನಾಡಿ, ಸಾಮಾಜಿಕ ಅಸಮಾನತೆಯಿಂದ ಕೊಳೆಗೇರಿಗಳು ಅಭಿವೃದ್ಧಿ ಹೊಂದದೆ ಹಿಂದುಳಿವೆ. ನಗರದ ಜನಸಂಖ್ಯೆಯಲ್ಲಿ ಶೇ.40ರಷ್ಟು ಜನ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದು, ಈ ಪ್ರದೇಶಗಳಲ್ಲಿ ನೀರು, ವಸತಿ, ಶೌಚಾಲಯದಂತಹ ಮೂಲಸೌಕರ್ಯಗಳ ಕೊರತೆ ಹೆಚ್ಚಿದೆ. ಆದರೆ, ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಯಾವ ಇಲಾಖೆಗಳು ಕೊಳೆಗೇರಿಯತ್ತ ಸುಳಿಯುತ್ತಿಲ್ಲ ಎಂದು ದೂರಿದರು.

ಹೀಗಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಕೋಶ, ಕೊಳೆಗೇರಿ ಮಂಡಳಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿರ್ದೇಶನಾಲಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಕುಂದುಕೊರತೆ ಸಭೆಯನ್ನು ಡಿಸೆಂಬರ್‌ನೊಳಗೆ ಕರೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅಘೋಷಿತ ಕೊಳಚೆ ಪ್ರದೇಶಗಳು ಹೆಚ್ಚಿದ್ದು, ಅವುಗಳನ್ನು ಘೋಷಿತ ಕೊಳಚೆ ಪ್ರದೇಶದ ವ್ಯಾಪ್ತಿಗೆ ತರಬೇಕು. ಪ್ರಮುಖವಾಗಿ ಬೆಂಗಳೂರು ದಕ್ಷಿಣ ತಾಲ್ಲೂಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿ ಮುಖ್ಯರಸ್ತೆ ಕೆರೆ ಬಳಿ ಇರುವ ಕೋಡಿಹಳ್ಳಿ ಕೊಳಚೆ ಪ್ರದೇಶ, ಅರೆಹಳ್ಳಿ, ಅರೆಹಳ್ಳಿ ಅಂಬೇಡ್ಕರ್‌ ಕಾಲೋನಿ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಬಳಿಯ ಗೌತಮ ಕಾಲೋನಿಗಳನ್ನು ಕೊಳಚೆ ಪ್ರದೇಶಗಳಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next