ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದೀಗ ಮಳೆಯಿಂದಾಗಿ ಮತ್ತಷ್ಟು ರಸ್ತೆ ಹಾಳಾಗಿದೆ. ಧನ್ವಂತರಿ ರಸ್ತೆ ಹಾಗೂ ಗುಬ್ಬಿ ತೋಟದಪ್ಪ ರಸ್ತೆ ಮೂಲಕ ಬಿಎಂಟಿಸಿ ಬಸ್ ನಿಲ್ದಾಣದ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿಗಳಿಂದಲೇ ತುಂಬಿಕೊಂಡಿದೆ. ಭಾರೀ ಪ್ರಮಾಣದಲ್ಲಿ ಹದಗೆಟ್ಟಿರುವ ಇದೇ ರಸ್ತೆ ಮೂಲಕವೇ ಬಿಎಂಟಿಸಿ ಬಸ್‌ಗಳೆಲ್ಲಾ ಬಿಎಂಟಿಸಿ ಬಸ್ ನಿಲ್ದಾಣವನ್ನು ಪ್ರವೇಶಿಸಬೇಕು. ಗುಂಡಿಗಳನ್ನು ತಪ್ಪಿಸಲು ಬಿಎಂಟಿಸಿ ಬಸ್ ಚಾಲಕರು ಹೈರಾಣಾಗುತ್ತಿದ್ದಾರೆ.
ಇತ್ತೀಚೆಗೆ ನಿರಂತರವಾಗಿ ಸುರಿದ ಭಾರಿಯಿಂದ ದೊಡ್ಡ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಮಳೆ ಸುರಿದರೆ ಗುಂಡಿಗಳು ನೀರಿನಿಂದ ಆವೃತವಾಗಿವೆ. ಬಸ್ ಚಾಲಕರಿಗೆ ಹಾಗೂ ವಾಹನ ಸವಾರರಿಗೂ ಗುಂಡಿಯ ಆಳ ತಿಳಿಯದೇ ತೊಂದರೆಗೀಡಾಗು ತ್ತಿದ್ದಾರೆ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಬಿಎಂ ಟಿಸಿ ಬಸ್‌ಗಳು ಹಾಗೂ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಆದರೂ ಗುಂಡಿಗಳನ್ನು ಮುಚ್ಚುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪ್ರವೇಶಿಸುವ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗಿದ್ದು, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಗುಂಡಿಮಯವಾಗಿದೆ. ಚಾಲಕರು 1 ಗುಂಡಿಯನ್ನು ತಪ್ಪಿಸಲು ಹೋಗಿ ಮತ್ತೂಂದು ಗುಂಡಿಗೆ ಚಕ್ರಗಳನ್ನು ಇಳಿಸುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೂ ತೊಂದರೆಯುಂಟಾಗುತ್ತದೆ.
ಮಳೆ ಬಂದರೆ ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಯಲ್ಲಿ ಕೊಚ್ಚೆ ನೀರು ಸಹ ನಿಂತಿರುತ್ತದೆ. ಈ ರಸ್ತೆಯಲ್ಲಿ ಓಡಾಡಬೇಕಾದರೆ, ಮೂಗು ಮುಚ್ಚಿಕೊಂಡು ಹೋಗಬೇಕು. ಜತೆಗೆ ಯಾವುದಾದರೂ ವಾಹನ ಬಂದರೆ ಮಳೆ, ಕೊಚ್ಚೆ ನೀರು ಸಿಡಿಯದಂತೆ ಎಚ್ಚರವಹಿಸಬೇಕು ಎಂದು ಕಾರ್ತಿಕ್ ಎಂಬ ಪ್ರಯಾಣಿಕರೊಬ್ಬರು ದೂರಿದರು.
ಸೆಂಟ್ರಲ್‌ನಿಂದ ಧನ್ವಂತರಿ ರಸ್ತೆವರೆಗೆ ಬರಲು 20 ನಿಮಿಷ ತೆಗೆದುಕೊಂಡರೆ, ಧನ್ವಂತರಿ ರಸ್ತೆಯಿಂದ ಬಿಎಂಟಿಸಿ ಬಸ್ ನಿಲ್ದಾಣದೊಳಗೆ ತಲುಪಲು 10 ನಿಮಿಷಕ್ಕೂ ಹೆಚ್ಚು ಸಮಯ ಆಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಿಎಂಟಿಸಿ ಚಾಲಕರೊಬ್ಬರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಸದ್ಯ ನಿರಂತರವಾಗಿ ಮಳೆ ಬರುತ್ತಿರುವ ಕಾರಣ ಕೆಲಸ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ತಕ್ಷಣ ಬಿಎಂಟಿಸಿ ಬಸ್ ನಿಲ್ದಾಣದ ಕಡೆಗೆ ಹೋಗುವ ರಸ್ತೆಯನ್ನೂ ವೈಟ್ ಟಾಪಿಂಗ್ ಮಾಡುವ ಕಾರ್ಯವನ್ನು ಆರಂಭಿಸಲಾಗುತ್ತದೆ.
-ಲೋಕೇಶ್, ಬಿಬಿಎಂಪಿ ಮುಖ್ಯ ಎಂಜಿನಿಯರ್