Advertisement

ಇನ್ನು ಮುಂದೆ ಈ ಔಷಧಿಗಳು ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗೋದು ಡೌಟು!

11:38 AM Nov 14, 2019 | Hari Prasad |

ನವದೆಹಲಿ: ಮಲೇರಿಯಾ, ತೊನ್ನು ರೋಗ (ಕುಷ್ಠ) ಮತ್ತು ಕೆಲವೊಂದು ನಿರ್ಧಿಷ್ಟ ಹೃದಯ ಸಂಬಂಧಿ ತೊಂದರೆಗಳಿಗೆ ನಮ್ಮೂರಿನ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುತ್ತಿದ್ದ ಔಷಧಿಗಳು ಇನ್ನು ಮುಂದಿನ 12 ತಿಂಗಳುಗಳಲ್ಲಿ ರೋಗಿಗಳಿಗೆ ಸಿಗುವುದಿಲ್ಲ. ಈ ಔಷಧಿಗಳನ್ನು ಉತ್ಪಾದನೆ ಮಾಡುತ್ತಿದ್ದ ತಯಾರಿಕಾ ಕಂಪೆನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಇವುಗಳ ಪೂರೈಕೆ ಸ್ಥಗಿತಗೊಳಿಸಿರುವುದೇ ಇದಕ್ಕೆ ಕಾರಣವಾಗಿದೆ.

Advertisement

ಅಬ್ಬೋಟ್ ಹೆಲ್ತ್ ಕೇರ್ ಕಂಪೆನಿಯ ತೊನ್ನು ರೋಗಕ್ಕೆ ಸಿಗುವ ಔಷಧಿ ಹ್ಯಾನ್ಸೆಪ್ರಾನ್, ಅಸಹಜ ಹೃದಯಬಡಿತ ನಿಯಂತ್ರಣಕ್ಕಾಗಿರುವ ಸನೋಫಿ ಕಂಪೆನಿಯ ಅಡೆನೊಕೋರ್ ಮತ್ತು ಬೆಯೆರ್ ಝೈಡೂಸ್ ಫಾರ್ಮಾ ಕಂಪೆನಿಯ ಮಲೇರಿಯಾ ನಿರೋಧಕ ಔಷಧಿ ರೆಸೊಚಿನ್ ಔಷಧಿಗಳ ಪೂರೈಕೆ ಸ್ಥಗಿತಗೊಳ್ಳಲಿರುವುದರಿಂದ ಮುಂಬರುವ ದಿನಗಳಲ್ಲಿ ಭಾರತೀಯ ಔಷಧ ಮಳಿಗೆಗಳಲ್ಲಿ ಇವುಗಳ ಲಭ್ಯತೆ ಇರುವುದಿಲ್ಲ. ಆದರೆ ಈ ಮೂರೂ ಔಷಧಿಗಳಿಗೆ ಸಾಕಷ್ಟು ಬದಲಿ ಮದ್ದುಗಳು ಲಭ್ಯವಿರುವುದರಿಂದ ರೋಗಿಗಳು ಆತಂಕಪಡುವ ಅಗತ್ಯವಿಲ್ಲ.

ಇದರಲ್ಲಿ ನಾಲ್ಕನೆಯದ್ದು ಭಾರತೀಯ ಕಂಪೆನಿಯಾಗಿದ್ದು ನೋವು ನಿವಾರಕ ಮಾತ್ರೆ ಮೆಫ್ ಕೈಂಡ್ ಪಿ ಸಸ್ಪೆನ್ಷನ್ ಮತ್ತು ಆ್ಯಂಟಿಬಯೋಟಿಕ್ ಔಷಧಿಯಾಗಿರುವ ಕ್ಲಿಂಡಟೈಮ್ ಮಾತ್ರೆಗಳನ್ನು ಉತ್ಪಾದಿಸುವ ಮ್ಯಾನ್ ಕೈಂಡ್ ಔಷಧಿ ತಯಾರಿ ಸಂಸ್ಥೆ ಇದಾಗಿದೆ.

ಮೇಲ್ಕಾಣಿಸಿದ ನಾಲ್ಕು ಕಂಪೆನಿಗಳು ತಾವು ತಯಾರಿಸುತ್ತಿದ್ದ ಈ ಔಷಧಿಗಳ ಪೂರೈಕೆಯನ್ನು ಸ್ಥಗಿತಗೊಳಿಸಲು ಉದ್ದೇಶಿಸಿ ರಾಷ್ಟ್ರೀಯ ಔಷಧಿ ದರ ನಿಗದಿ ಪ್ರಾಧಿಕಾರಕ್ಕೆ (NPPA) ಅರ್ಜಿ ಸಲ್ಲಿಸಿದ್ದವು. ಈ ಔಷಧಿಗಳಿಗೆ ಬದಲಿಯಾಗಿ ಬೇರೆ ಕಂಪೆನಿಗಳ ಔಷಧಿಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಈ ಕಂಪೆನಿಗಳು ಸರಕಾರಕ್ಕೆ ಭರವಸೆಯನ್ನು ನೀಡಿವೆ.

ಆದರೆ ಏಕಾಏಕಿ ಈ ಎಲ್ಲಾ ಔಷಧಿಗಳ ಪೂರೈಕೆಯನ್ನು ನಿಲ್ಲಿಸಿಬಿಡುವುದರಿಂದ ಔಷಧಿ ಮಳಿಗೆಗಳಲ್ಲಿ ಇವುಗಳ ಕೊರತೆ ಕಾಣಿಸಿಕೊಳ್ಳಬಹುದೆಂಬ ಕಾರಣಕ್ಕೆ ಇನ್ನೂ ಸ್ವಲ್ಪ ಸಮಯ ಈ ಔಷಧಿಗಳ ಪೂರೈಕೆಯನ್ನು ನಿಲ್ಲಿಸದಿರುವಂತೆ NPPA ಈ ನಾಲ್ಕೂ ಕಂಪೆನಿಗಳಿಗೆ ನಿರ್ದೇಶನ ನೀಡಿದೆ. ಭಾರತದಲ್ಲಿ ಔಷಧಿಗಳ ಪೂರೈಕೆಯನ್ನು ನೋಡಿಕೊಳ್ಳುವ ಜವಾಬ್ದಾರಿ ರಾಷ್ಟ್ರೀಯ ಔಷಧಿ ದರ ನಿಗದಿ ಪ್ರಾಧಿಕಾರದ್ದಾಗಿದೆ (NPPA).

Advertisement
Advertisement

Udayavani is now on Telegram. Click here to join our channel and stay updated with the latest news.

Next