ಮುಂಬಯಿ: ಇಲ್ಲಿನ ಬೈಕುಲಾದಲ್ಲಿರುವ ಮುಸ್ತಫಾ ಬಝಾರ್ ನಲ್ಲಿರುವ ಮರದ ಡಿಪೋ ಒಂದರಲ್ಲಿ ಬುಧವಾರ ಬೆಳಗ್ಗಿನ ಜಾವ ಭಾರೀ ಬೆಂಕಿ ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಇದೀಗ ಎಂಟಕ್ಕೂ ಅಧಿಕ ಅಗ್ನಿ ಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ನಿರತವಾಗಿವೆ.
ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳುಂಟಾಗಿರುವ ಮತ್ತು ಗಾಯಗೊಂಡಿರುವ ಕುರಿತಾಗಿ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕಳೆದ ತಿಂಗಳು ಅಂಧೇರಿಯಲ್ಲಿರುವ ಮಹಾನಗರ ದೂರವಾಣಿ ನಿಗಮ ಲಿಮಿಟೆಡ್ (ಎಂ.ಟಿ.ಎನ್.ಎಲ್.) ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು ಮತ್ತು ಈ ಸಂದರ್ಭದಲ್ಲಿ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ಮೂಲಕ ಸುಮಾರು 84 ಜನರನ್ನು ಕಟ್ಟಡದ ಒಳಗಿನಿಂದ ರಕ್ಷಿಸಲಾಗಿತ್ತು.
ಮುಂಬಯಿ ಮಹಾನಗರದಲ್ಲಿ ಅಗ್ನಿ ಸಂಬಂಧಿ ಅನಾಹುತ ಘಟನೆಗಳು ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಡಿಸೆಂಬರ್ 2017ರಲ್ಲಿ ಇಲ್ಲಿನ ರೂಫ್ ಟಾಪ್ ಪಬ್ ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ 14 ಜನರ ಪ್ರಾಣಕ್ಕೆ ಎರವಾಗಿತ್ತು.
ಮತ್ತು ಸರೀಯಾಗಿ ಒಂದು ವರ್ಷದ ಬಳಿಕ ಅಂದರೆ ಡಿಸೆಂಬರ್ 2018ರಂದು ಮುಂಬಯಿನ ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ 10 ಜನರನ್ನು ಬಲಿ ಪಡೆದುಕೊಂಡಿತ್ತು. ಮಾತ್ರವಲ್ಲದೇ ಈ ಘಟನೆಯಲ್ಲಿ ಮಕ್ಕಳು ಹಾಗೂ ರೋಗಿಗಳೂ ಸೇರಿದಂತೆ ಸುಮಾರು 175 ಜನರು ಗಾಯಗೊಂಡಿದ್ದರು.