ಹೊಸದಿಲ್ಲಿ: ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅಂಕಗಳಲ್ಲಿ ವ್ಯತ್ಯಾಸ ಕಂಡುಬರುವುದು ಈಗೀಗ ಸಾಮಾನ್ಯ ಎಂಬಂತಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳ ಫಲಿತಾಂಶ ಅನುತ್ತೀರ್ಣ ಎಂದು ಪ್ರಕಟವಾದ ಉದಾಹರಣೆಗಳು ಇದೆ. ಇಂತಹ ಪ್ರಕರಣಗಳಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ.
ಇತ್ತೀಚೆಗೆ ಪ್ರಕಟವಾದ ನೀಟ್ ಪರೀಕ್ಷೆ ಫಲಿತಾಂಶದಲ್ಲಿ ಇಂತಹದ್ದೊಂದು ಪ್ರಮಾದವಾಗಿದೆ. ಮೃದುಲ್ ರಾವತ್ ಎಂಬ ವಿದ್ಯಾರ್ಥಿಯ ಫಲಿತಾಂಶ ಅನುತ್ತೀರ್ಣ ಎಂದು ಪ್ರಕಟವಾಗಿದ್ದು, ಮರುಪರಿಶೀಲನೆ ಮಾಡಿದಾಗ ಆತ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾನೆ.
ರಾಜಸ್ಥಾನದ ಸವಾಯ್ ಪಟ್ಟಣದ 17 ವರ್ಷದ ಮೃದುಲ್ ರಾವತ್ ನೀಟ್ ಪರೀಕ್ಷೆ ಬರೆದಿದ್ದರು. ಫಲಿತಾಂಶ ಪ್ರಕಟವಾಗಿ ಮೊದಲ ಅಂಕಪಟ್ಟಿ ಕಂಡಾಗ ಆತನಿಗೆ ಆಶ್ಚರ್ಯವಾಗಿತ್ತು. ಯಾಕೆಂದರೆ ಆತ ಫೇಲ್ ಆಗಿದ್ದ. 720ರಲ್ಲಿ ಮೃದುಲ್ ಗೆ 329 ಅಂಕ ದೊರೆತಿದೆ ಎಂದು ಫಲಿತಾಂಶ ಪ್ರಕಟವಾಗಿತ್ತು.
ಆದರೆ ಮರುಪರಿಶೀಲನೆ ಮಾಡಿದಾಗ ಆತನಿಗೆ 650 ಅಂಕ ಲಭಿಸಿದೆ. ಹೀಗಾಗಿ ಎಸ್.ಟಿ ಕೆಟಗರಿಯಲ್ಲಿ ಆತ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾನೆ. ಮರುಪರಿಶೀಲನೆಗೆಂದು ಅಂಕ ಪಟ್ಟಿ ನೋಡಿದಾಗ ಅದರಲ್ಲಿ 650 ಅಂಕ ಎಂದು ಸಂಖ್ಯೆಗಳಲ್ಲಿ ಬರೆದಿದ್ದರೂ, ಮುನ್ನೂರ ಇಪ್ಪತ್ತೊಂಬತ್ತು ಎಂದು ಅಕ್ಷರಗಳಲ್ಲಿ ತಪ್ಪಾಗಿ ನಮೂದಿಸಲಾಗಿತ್ತು.
ನೀಟ್ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಅಭ್ಯರ್ಥಿಗಳು 720ರಲ್ಲಿ 720 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಒಡಿಶಾದ ಸೊಯೆಬ್ ಅಫ್ತಾಬ್ ಮತ್ತು ದಿಲ್ಲಿಯ ಆಕಾಂಕ್ಷಾ ಸಿಂಗ್ 720 ಅಂಕ ಗಳಿಸಿದ್ದಾರೆ.