Advertisement

ಕೋಸ್ಟಲ್‌ವುಡ್‌ಗೆ ಸಿಕ್ಕಿತು ಮಾಜಿ ಮುಖ್ಯಮಂತ್ರಿ ಪವರ್‌!

07:20 AM Feb 28, 2019 | |

ಕೋಸ್ಟಲ್‌ವುಡ್‌ನ‌ಲ್ಲಿ ರಾಜಕೀಯ ಇದೆ ಎಂಬ ಮಾತು ಸಹಜವಾಗಿಯೇ ಕೇಳಿಬರುತ್ತಿತ್ತು. ಇಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ ಎಂಬ ವಾತಾವರಣವೂ ಇದೆಯಂತೆ. ಇಂತಿಪ್ಪ ಕಾಲದಲ್ಲಿ ರಾಜಕೀಯದ ವಿಷಯವನ್ನೇ ಮುಖ್ಯವಾಗಿರಿಸಿಕೊಂಡು ತುಳು ಸಿನೆಮಾ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಆದರೆ, ಕೋಸ್ಟಲ್‌ವುಡ್‌ನ‌ ಒಳಗಿನ ರಾಜಕೀಯವಾ ಅಥವಾ ಕೋಸ್ಟಲ್‌ ವುಡ್‌ನ‌ ಹೊರಗಿನ ರಾಜಕೀಯ ಇದರಲ್ಲಿದೆಯಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

Advertisement

ಅಂದಹಾಗೆ, ಸೆಟ್ಟೇರಲಿರುವ ಹೊಸ ಸಿನೆಮಾದ ಹೆಸರು ‘ಮಾಜಿ ಮುಖ್ಯಮಂತ್ರಿ’. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ನಿರ್ಮಾಣದಲ್ಲಿ ಈ ಸಿನೆಮಾ ಸಿದ್ಧವಾಗಲಿದೆ. ರಾಜೇಶ್‌ ಅವರು ಈಗಾಗಲೇ ‘ದೊಂಬರಾಟ’ ಸಿನೆಮಾ ಮಾಡಿದ್ದು, ಕೆಲವೇ ದಿನದಲ್ಲಿ ರಿಲೀಸ್‌ ಆಗಲಿರುವ ‘ಕಟಪಾಡಿ ಕಟ್ಟಪ್ಪ’ ಸಿನೆಮಾದ ನಿರ್ಮಾಪಕರೂ ಹೌದು. ಇದರ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಂಬ ಟೈಟಲ್‌ನಲ್ಲಿ ಸಿನೆಮಾ ಮಾಡಲು ಹೊರಟಿರುವ ಅವರು ಮುಂದೆ ರಾಜೇಶ್‌ ಬಂದ್ಯೋಡು ನಿರ್ದೇಶನದಲ್ಲಿ ‘ಜ್ಯೋತಿ ಸರ್ಕಲ್‌’ ಎಂಬ ಸಿನೆಮಾ ಮಾಡಲು ನಿಶ್ಚಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿನೆಮಾಕ್ಕೆ ಫೆ.28ರಂದೇ ಮುಹೂರ್ತ ನಡೆಯಲಿದೆ. ಮಂಗಳೂರು ಸುತ್ತಮುತ್ತ ಸಿನೆಮಾಕ್ಕೆ ಶೂಟಿಂಗ್‌ ನಡೆಯಲಿದ್ದು, ಮುಂದಿನ 1 ತಿಂಗಳವರೆಗೆ ಮಾಜಿಮುಖ್ಯಮಂತ್ರಿ ಸಿನೆಮಾ ಶೂಟಿಂಗ್‌ ಕಾಣಲಿದೆ. ಹಲವು ಸಿನೆಮಾಗಳಲ್ಲಿ
ಸಹನಿರ್ದೇಶನ ಮಾಡಿರುವ ತ್ರಿಶೂಲ್‌ ಶೆಟ್ಟಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಸಿನೆಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಕೆಲವೇ ದಿನದಲ್ಲಿ ಲೋಕಸಭಾ ಚುನಾವಣೆ ಎದುರಾಗುವ ಕಾರಣದಿಂದ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳಲಿದೆ. ಜನರೆಲ್ಲ ರಾಜಕೀಯದತ್ತ ಕಣ್ಣರಳಿಸಿ ನೋಡಲು ಶುರು ಮಾಡುತ್ತಾರೆ. ಅಂತಹ ಕಾಲದಲ್ಲಿ ತುಳು ಸಿನೆಮಾದಲ್ಲಿ ರಾಜಕೀಯದ ಚರ್ಚೆ ಆರಂಭವಾಗುತ್ತಿರುವುದು ಕುತೂಹಲದ ಸಂಗತಿ. ವಿಶೇಷವೆಂದರೆ ಈ ಸಿನೆಮಾ ತುಳುವಿನಲ್ಲಿ ಮಾತ್ರವಲ್ಲದೆ, ಕನ್ನಡದಲ್ಲಿಯೂ ಶೂಟಿಂಗ್‌ ಆಗಲಿದೆ.

‘ಕೃಷ್ಣ ತುಳಸಿ’ ಧಾರವಾಹಿಯಲ್ಲಿ ನಟಿಸಿದ್ದ ಸ್ವರಾಜ್‌ ಶೆಟ್ಟಿ ಈ ಸಿನೆಮಾದಲ್ಲಿ ಮುಖ್ಯರೋಲ್‌ನಲ್ಲಿದ್ದಾರೆ. ಹೀರೋಯಿನ್‌ ಯಾರು ಎಂಬುದು ಇನ್ನೂ ಫಿಕ್ಸ್‌ ಆಗಿಲ್ಲ. ಭೋಜರಾಜ್‌ ವಾಮಂಜೂರು ಸಹಿತ ಕರಾವಳಿಯ ಕಾಮಿಡಿ ಶ್ರೇಷ್ಠರು ಈ ಸಿನೆಮಾದಲ್ಲಿದ್ದಾರೆ ಎಂಬುದರ ಜತೆಗೆ ಹೊಸ ನಟರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂಬುದು ಚಿತ್ರ ತಂಡದ ಅಭಿಪ್ರಾಯ. ಈ ಮಧ್ಯೆ ಸಿನೆಮಾದ ಟೈಟಲ್‌ ‘ಮಾಜಿ ಮುಖ್ಯಮಂತ್ರಿ’ ಎಂದು ಫಿಕ್ಸ್‌ ಮಾಡಿದ ನಂತರ ಸ್ವಲ್ಪವಾದರೂ ರಾಜಕೀಯ ನಾಯಕರು ಸಿನೆಮಾದಲ್ಲಿ ಅಭಿನಯ ಮಾಡದಿದ್ದರೆ ಅಷ್ಟೇನು ಲುಕ್‌ ಇರಲ್ಲ.

Advertisement

ಹೀಗಾಗಿ ಕರಾವಳಿಯ ರಾಜಕೀಯದವರು ಕೂಡ ಸಿನೆಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಯಾರೆಲ್ಲ ಎಂಬುದು ಇನ್ನೂ ಫಿಕ್ಸ್‌ ಆಗಿಲ್ಲ. ಹೀಗಾಗಿ ಸಿನೆಮಾದಲ್ಲಿ ಸರ್‌ಪ್ರೈಸ್‌ ಇದೆ ಎಂಬುದಂತು ಗ್ಯಾರಂಟಿ. ಸಿನೆಮಾಕ್ಕೆ ಕೆಮರಾ ಉದಯ್‌ ಬಳ್ಳಾಲ್‌ ನಡೆಸಲಿದ್ದು, ಸಂಗೀತ ಪ್ರಕಾಶ್‌, ಸಾಹಿತ್ಯ ಸುರೇಶ್‌ ಬಲ್ಮಠ ಅವರದ್ದು. ಮಯೂರ್‌ ಶೆಟ್ಟಿ ಸಹ ನಿರ್ದೇಶಕರಾಗಿದ್ದಾರೆ. ಈ ಸಿನೆಮಾದ ಶೂಟಿಂಗ್‌ ಮುಗಿದ ಬಳಿಕ ಜ್ಯೋತಿ ಸರ್ಕಲ್‌ ಶೂಟಿಂಗ್‌ ರೆಡಿಯಾಗಲಿದೆ. ಇದರಲ್ಲಿ ಯಾರೆಲ್ಲ ಇದ್ದಾರೆ? ಕಥೆ ಏನು? ಎಂಬ ಬಗ್ಗೆ ಚಿತ್ರತಂಡ ಸದ್ಯಕ್ಕೆ ಮಾಹಿತಿ ನೀಡಿಲ್ಲ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next