ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆರೋಗ್ಯದ ಮೇಲೆ ಮಾರಕವಾಗಿ ಪರಿಣಮಿಸುತ್ತಿರುವ ಡೆಂಘೀ ಹಾಗೂ ಚಿಕೂನ್‌ಗುನ್ಯ ಮತ್ತಿತರ ಸಾಂಕ್ರಮಿಕ ರೋಗಗಳನ್ನು ತಡೆಯಬೇಕಾದರೆ ಸಾರ್ವಜನಿಕರು ತಮ್ಮ ಸುತ್ತಮುತ್ತಲು ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾರಕ ರೋಗಗಳು ನಿಯಂತ್ರಣಕ್ಕೆ ಬರಲು ಸಾಧ್ಯ ಎಂದು ತಾಲೂಕು ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ ತಿಳಿಸಿದರು.
ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಗರದ ಅಂಬೇಡ್ಕರ್ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾಂಕ್ರಮಿಕ ರೋಗಗಳ ತಡೆಗೆ ಸ್ವಚ್ಛತೆ ಕುರಿತ ಜನ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚು ಡೆಂಘೀ ಹಾಗೂ ಚಿಕೂನ್‌ಗುನ್ಯಾ ಪ್ರಕರಣಗಳು ಕಾಣಿಸಿಕೊಂಡಿವೆ ಕಳವಳ ವ್ಯಕ್ತಪಡಿಸಿದರು.
ಸ್ವಚ್ಛತೆ ಕಾಪಾಡಿ: ಹಗಲಿನಲ್ಲಿ ಮನುಷ್ಯನ ರಕ್ತಹೀರುವ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಡೆಂಘೀ ಕಾಯಿಲೆ ಹರಡಲಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರು ನಿರ್ಲಕ್ಷಿಸಿದಂತೆ ಮನೆಯ ಸುತ್ತಮುತ್ತ ಚರಂಡಿ ನೀರು ಹಾಗೂ ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರಿನ ತೊಟ್ಟಿ, ತೆಂಗಿನ ಚಿಪ್ಪು, ಟೈರ್ ಮತ್ತಿತರ ಕಡೆಗಳಲ್ಲಿ ಸಂಗ್ರಹವಾದ ನೀರಿನಲ್ಲ್ಲಿ ಲಾರ್ವ ಸಂತಾನ ಉತ್ಪತ್ತಿಯಾಗಿ ಕ್ರಮೇಣ ಸೊಳ್ಳೆಗಳ ಉತ್ಪತ್ತಿ ಆಗಲಿದೆ.
ನಗರಸಭೆಗೆ ಕಾಯದೇ ತಮ್ಮ ತಮ್ಮ ಮನೆಗಳ ಮುಂದೆ ಹಾಗೂ ಅಕ್ಕಪಕ್ಕ ಜಾಗಗಳಲ್ಲಿ ಸ್ವಯಂ ಪ್ರೇರಣೆಯಿಂದ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಮುಂಜಾಗ್ರತೆ ಇರಲಿ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಲಹೆ ಪಡೆಯಬಹುದು. ಈಗಾಗಲೇ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜೊತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ಮುಂಜಾಗ್ರತ ಕ್ರಮದ ಬಗ್ಗೆ ಅರಿವು ಮೂಡಿಸಿದ್ದಾರೆ.
ಸಾಂಕ್ರಮಿಕ ರೋಗಗಳ ಸಂಪೂರ್ಣ ನಿಯಂತ್ರಣಕ್ಕೆ ಸಮುದಾಯ ಇಲಾಖೆಯ ಜೊತೆ ಸಹಕರಿಸುವಂತೆ ಆರೋಗ್ಯಾಧಿಕಾರಿ ಸುಧಾ ಮನವಿ ಮಾಡಿದರು.
ಕರಪತ್ರ ಹಂಚಿಕೆ: ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ರೋಗಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಯಿತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆರು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಫಾತಿಮಾ, ತಾಲೂಕು ಆಹಾರ ಸುರಕ್ಷತ ಅಧಿಕಾರಿ ಜಿ.ಹರೀಶ್, ಆರೋಗ್ಯ ಸಹಾಯಕಿಯರಾದ ಶೈಲಾ, ವೇದಶ್ರೀ, ದೇವರಾಜು, ಮುರಳಿ, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಾದ ನಾಗರತ್ನ, ಹುಸೇನ್ ಬೀ, ಅಂಬೇಡ್ಕರ್ ನಗರದ ಸಾರ್ವಜನಿಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.