ಧಾರವಾಡ: ಪ್ರಧಾನ ಮಂತ್ರಿ ಗರೀಬ್‌ಕಲ್ಯಾಣ ಯೋಜನೆಯಡಿ ಮಹಿಳೆಯರ ಜನ್‌ಧನ್ ಖಾತೆಗಳಿಗೆ ತಲಾ 500 ರೂ. ಗಳನ್ನು ಪಾವತಿಸಲಾಗುತ್ತಿದೆ. ಹೀಗಾಗಿ ಫಲಾನುಭವಿಗಳು ಶಿಸ್ತಿನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಹಣ ಪಡೆಯಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಿಮ್ಸ್ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೀಡಾಗುವ ಜನರಿಗೆ ನೆರವು ನೀಡಲು ಅನೇಕ ಸ್ವಯಂಸೇವಾ ಸಂಸ್ಥೆಗಳು ಮುಂದೆ ಬರುತ್ತಿವೆ. ಆಹಾರ ಧಾನ್ಯ, ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳನ್ನು ಸ್ವೀಕರಿಸಿ, ಅವರು ಹೇಳಿದ ಸ್ಥಳಗಳಿಗೆ ವಿತರಿಸಲು ಅಗತ್ಯ ಏರ್ಪಾಡು ಮಾಡಬೇಕು ಎಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ರಾಜ್ಯ ಸರ್ಕಾರದ ಸೂಚನೆಯಂತೆ ಪ್ರತಿನಿತ್ಯ 25 ಸಾವಿರ ಲೀಟರ್ ಹಾಲು ಉಚಿತವಾಗಿ ಪೂರೈಸಲು ಕೊಳಗೇರಿ ಜನತೆ, ನಿರಾಶ್ರಿತರು ಹಾಗೂ ವಲಸಿಗ ಕಾರ್ಮಿಕರನ್ನು ಗುರುತಿಸಲಾಗಿದೆ. ಸರ್ಕಾರದ ವಿವಿಧ ಹಾಸ್ಟೆಲ್ ಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿರುವ ಜನರಿಗೆ ಧಾರ್ಮಿಕ ಮುಖಂಡರು ಹಾಗೂ ಮನೋವೈದ್ಯರಿಂದ ಆಪ್ತ ಸಮಾಲೋಚನೆ ಏರ್ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಿಮ್ಸ್ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರಠಾಣಿ ಮಾತನಾಡಿ, ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿರುವವರಲ್ಲಿ ರೋಗ ಲಕ್ಷಣ ಇಲ್ಲದಿದ್ದರೂ ತಮ್ಮ ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹಿಸಲು ಕಿಮ್ಸ್‌ಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರ ಒತ್ತಡ ಕಡಿಮೆ ಮಾಡಲು ಎಸ್‌ಡಿಎಂ ಆಸ್ಪತ್ರೆಯಲ್ಲಿಯೂ ಫೀವರ್ ಕ್ಲಿನಿಕ್ ಹಾಗೂ ಗಂಟಲು ದ್ರವ ಸಂಗ್ರಹ ಕಾರ್ಯ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ನಗರ ಪೊಲೀಸ್ ಆಯುಕ್ತ ಆರ್.ದಿಲೀಪ್, ಎಸ್.ಪಿ. ವರ್ತಿಕಾ ಕಟಿಯಾರ್, ಜಿ.ಪಂ. ಸಿಇಒ ಡಾ|ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮ್ಮದ ಜುಬೇರ್, ಆಹಾರ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ|ಅರುಣಕುಮಾರ ಚವ್ಹಾಣ, ಡಾ|ಲಕ್ಷ್ಮೀಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ|ಯಶವಂತ ಮದಿನಕರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಶಿವಕುಮಾರ ಮಾನಕರ್, ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ|ಸುಜಾತಾ ಹಸವಿಮಠ ಇದ್ದರು.
ಬಡತನ ರೇಖೆಗಿಂತ ಕೆಳಗಿರುವ ಅರ್ಹ ಪಡಿತರ ಚೀಟಿದಾರರರಿಗೆ ಯಾವುದೇ ತೊಂದರೆಯಾಗದಂತೆ ಆಹಾರ ಧಾನ್ಯ ವಿತರಿಸಬೇಕು. ಒಟಿಪಿ ಆಧಾರಿತ ಸೇವೆ ಸಾಧ್ಯವಾಗದಿದ್ದರೆ ಸರಳ ರೀತಿಯಲ್ಲಿ ಸಾಂದರ್ಭಿಕವಾಗಿ ಪರಿಹಾರ ಕಂಡುಕೊಂಡು ಧಾನ್ಯಗಳನ್ನು ಪೂರೈಸಬೇಕು.
-ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ