ಚಿಕ್ಕಮಗಳೂರು: ಕೋವಿಡ್ 19 ಸೋಂಕನ್ನು ನಿಯಂತ್ರಿಸುವುದರ ಜೊತೆಗೆ ತಡೆಗಟ್ಟಲು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರ ವಹಿಸುವುದು ಅಗತ್ಯ ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಮಂಗಳವಾರ ಕೊಪ್ಪ ತಾಪಂ ಸಭಾಂಗಣದಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವಿಕೆ ಸಂಬಂಧ ತಾಲೂಕಿನಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಶಾಂತಿ ಸುವ್ಯವಸ್ಥೆ ಕುರಿತು ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿಗೆ ಹೊರ ದೇಶದಿಂದ 31 ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ 1778 ಜನರು ಬಂದಿದ್ದು ಅವರ ಮೇಲೆ ಎಚ್ಚರ ವಹಿಸಿ ನಿತ್ಯ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದ ಅವರು, ತಾಲೂಕಿನಲ್ಲಿ ನಿರ್ಗತಿಕರು, ಅಲೆಮಾರಿಗಳು, ಅಸಹಾಯಕರು ಇದ್ದಲ್ಲಿ ಅವರನ್ನು ಗುರುತಿಸಿ ಪಟ್ಟಿ ಮಾಡಿ ಅವರಿಗೆ ಸೂಕ್ತ ಆಹಾರ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ಯಾವುದೇ ಅಡ್ಡಿಯಿಲ್ಲ. ಆದರೆ, ಬೇರೆ ಹಳ್ಳಿಗಳು ಅಥವಾ ನಗರಗಳಿಗೆ ಬಾರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ ದಿನಕ್ಕೆ ನಿಗದಿತವಾಗಿ ಎಷ್ಟು ಪಡಿತರದಾರರಿಗೆ ವಿತರಿಸಬಹುದು ಎಂಬುದನ್ನು ಅಂದಾಜು ಮಾಡಿ ಸಮಯ ನಿಗದಿಗೊಳಿಸಿ ಟೋಕನ್ ವಿತರಿಸುವುದರೊಂದಿಗೆ ಪಡಿತರ ವಿತರಿಸಬೇಕು. ಒಟಿಪಿ ಮೂಲಕ ಪಡಿತರ ವಿತರಣೆಗೆ ಆದೇಶದ ಹಿನ್ನೆಲೆ ಬಯೋಮೆಟ್ರಿಕ್ ತೆಗೆದುಕೊಳ್ಳುವಾಗ ಸ್ವತ್ಛತೆ ಕಾಪಾಡಲು ಸ್ಯಾನಿಟೈಸರ್ ಅನ್ನು ತಪ್ಪದೇ ಬಳಸಬೇಕು ಎಂದರು.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಮಾತನಾಡಿ, ಕೊರೋನಾ ಸೋಂಕಿನ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸೂಕ್ತ ಔಷಧಗಳನ್ನು ಇಟ್ಟುಕೊಂಡಿರಬೇಕು. ಗೃಹ ನಿರ್ಬಂಧದಲ್ಲಿರುವವರನ್ನು ನಿತ್ಯ ಆರೋಗ್ಯ ತಪಾಸಣೆ ಮಾಡಬೇಕು ಎಂದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಜಿಪಂ ಮುಖ್ಯ ಕಾರ್ಯನಿರ್ವಣಾಧಿ ಕಾರಿ ಎಸ್. ಪೂವಿತಾ, ಎಸ್ಪಿ ಹರೀಶ್ ಪಾಂಡೆ ಮತ್ತಿತರರಿದ್ದರು.