Advertisement

ಮೈದುಂಬಿಕೊಂಡ ಕಾರಂಜಾ ಜಲಾಶಯ

04:41 PM Aug 07, 2022 | Team Udayavani |

ಬೀದರ: ಜಲಾನಯನ ಪ್ರದೇಶದಲ್ಲಿ ವರ್ಷಧಾರೆಯಿಂದಾಗಿ ಮುಂಗಾರು ಋತುವಿನಲ್ಲೇ ಗಡಿ ನಾಡು ಬೀದರ ರೈತರ ಜೀವನಾಡಿ ಆಗಿರುವ ಕಾರಂಜಾ ಜಲಾಶಯದ ಒಡಲು ಮತ್ತೆ ಮೈದುಂಬಿಕೊಂಡಿದ್ದು, ಜೀವ ಕಳೆ ಬಂದಿದೆ.

Advertisement

ಜಲಾಶಯ ಭರ್ತಿಗೆ ಒಂದು ಟಿಎಂಸಿಗಿಂತ ಕಡಿಮೆ ಬಾಕಿ ಉಳಿದಿದ್ದು, ಯಾವ ಸಮಯದಲ್ಲಾದರೂ ನದಿಗೆ ನೀರು ಹರಿಬಿಡುವ ಸಾಧ್ಯತೆಯಿದೆ. ಜಿಲ್ಲೆಯ ಜೀವಜಲವಾಗಿರುವ ಕಾರಂಜಾ ಜಲಾಶಯ 7.69 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಶನಿವಾರದವರೆಗೆ 6.294 ಟಿಎಂಸಿ ನೀರು ಸಂಗ್ರಹವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದ ನಿತ್ಯ 500ಕ್ಕೂ ಅಧಿಕ ಕ್ಯೂಸೆಕ್‌ ನೀರಿನ ಒಳ ಹರಿವು ದಾಖಲಾಗಿದ್ದು, ಸದ್ಯ45 ಕ್ಯೂಸೆಕ್ಸ್‌ಗೆ ಇಳಿಕೆಯಾಗಿದೆ. ಕಳೆದ 2020 ಮತ್ತು 2021ರಲ್ಲಿ ಉತ್ತಮ ಮಳೆಯಿಂದ ಜಲಾಶಯ ಭರ್ತಿಯಾಗಿ ಭೋರ್ಗರೆದಿದ್ದು, ಡ್ಯಾಮ್‌ನ ಮೂರೂ ಗೇಟ್‌ಗಳ ಮೂಲಕ ಸಾವಿರಾರು ಕ್ಯೂಸೆಕ್‌ ನೀರನ್ನು ಮಾಂಜ್ರಾ ನದಿಗೆ ಹರಿಬಿಡಲಾಗಿತ್ತು. ಅದಕ್ಕೂ ಮೊದಲು 2016ರಲ್ಲಿ ಡ್ಯಾಮ್‌ ಗರಿಷ್ಠ ಮಟ್ಟ ತಲುಪಿತ್ತು.

10 ದಿನದಲ್ಲಿ ಅರ್ಧ ಟಿಎಂಸಿ ನೀರು

ಪೂರ್ವ ಮುಂಗಾರು ಮುನ್ನ ಜಲಾಶಯದಲ್ಲಿ 4.8 ಟಿಎಂಸಿ ನೀರು ಸಂಗ್ರಹ ಇತ್ತು. ಮುಂಗಾರು ಋತುವಿನಲ್ಲಿ ಸುರಿದ ಉತ್ತಮ ಮಳೆಯಿಂದ ಡ್ಯಾಮ್‌ಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕಳೆದ ಎರಡು ತಿಂಗಳಲ್ಲಿ 1.42 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಕೆಲವೆಡೆ ಮಳೆ ಅವಾಂತರದಿಂದ ರೈತ ಸಮುದಾಯಕ್ಕೆ ಘಾಸಿಯಾಗಿದ್ದರೆ, ಕಾರಂಜಾ ಒಡಲು ತುಂಬಿರುವುದು ಮುಂದಿನ ಒಂದೆರೆಡು ಬೇಸಿಗೆಯ ಜಲ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂಬ ಸಮಾಧಾನ ತಂದಿದೆ. ಯೋಜನೆಗಳ ನನೆಗುದಿಯಿಂದ ಸದಾ ಚರ್ಚೆಗೆ ಒಳಪಡುವ ಕಾರಂಜಾ ಕಳೆದ 50 ವರ್ಷಗಳಲ್ಲಿ ಆರೇಳು ಬಾರಿ ಮಾತ್ರ ತುಂಬಿದೆ. ಮಹತ್ವಕಾಂಕ್ಷಿ ಯೋಜನೆ ಆರಂಭವಾಗಿ ದಶಕಗಳು ಉರುಳಿದರೂ ಅಪೂರ್ಣ ಸ್ಥಿತಿಯಲ್ಲೇ ಇದೆ. ಹಣ ನೀರಿನಂತೆ ಹರಿಯಿತೇ ಹೊರತು ಕೊನೆಯಂಚಿನ ರೈತರಿಗೆ ನೀರು ಉಣಿಸಲು ಈವರೆಗೂ ಸಾಧ್ಯವಾಗಲೇ ಇಲ್ಲ. ಜಲಾಶಯವು ಹೆಚ್ಚಿನ ಪ್ರಮಾಣದಲ್ಲಿ ಬೀದರ ಜಿಲ್ಲೆಯ ನಗರ, ಪಟ್ಟಣಗಳ ಕುಡಿಯುವ ನೀರಿನ ದಾಹ ಇಂಗಿಸುವುದಕ್ಕೆ ಸೀಮಿತವಾದಂತಾಗಿದೆ.

Advertisement

ಮಾಂಜ್ರಾದ ಉಪನದಿಯಾದ ಕಾರಂಜಾ ಅಥವಾ ನಾರಂಜಾ ನದಿ ತೆಲಂಗಾಣದಲ್ಲಿ ಹುಟ್ಟಿ ಕರ್ನಾಟಕ ಪ್ರವೇಶಿಸುತ್ತದೆ. ಬೀದರ-ಹುಮನಾಬಾದ ತಾಲೂಕುಗಳ ನಡುವೆ ಹರಿಯುತ್ತ ಭಾಲ್ಕಿ ತಾಲೂಕು ಪ್ರವೇಶಿಸುವ ಮಾರ್ಗವಾದ ಹಾಲಹಳ್ಳಿಯ ಬಳಿ ಈ ಜಲಾಶಯ ನಿರ್ಮಿಸಲಾಗಿದೆ. 1960ರಲ್ಲಿ ಕೇವಲ 9 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರಂಭವಾದ ಜಲಾಶಯ ಕಾಮಗಾರಿಗೆ ಈವರೆಗೆ 564 ಕೋಟಿ ರೂ. ವೆಚ್ಚವಾಗಿದೆ.

50 ವರ್ಷದಲ್ಲಿ ಆರೇಳು ಬಾರಿ ಭರ್ತಿ

ಕಾರಂಜಾ ಜಲಾನಯನದ ಒಟ್ಟು 782 ಚ.ಕಿ.ಮೀ. ಪ್ರದೇಶ ಪೈಕಿ ತೆಲಂಗಾಣ 565 ಚ.ಕಿ.ಮೀ. ಬೀದರ ಜಿಲ್ಲೆ 217 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಒಟ್ಟಾರೆ 7.69 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 7 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಒಳ ಹರಿವು ಹೆಚ್ಚಾದರೆ ಬೀದರ-ಹುಮನಾಬಾದ ತಾಲೂಕಿನ ಹತ್ತಾರು ಗ್ರಾಮಗಳಿಗೆ ಹಿನ್ನೀರು ನುಗ್ಗುವ ಆತಂಕ ಇದೆ. ಜಲಾಶಯದಲ್ಲಿ ಕಳೆದ 1997-98, 2008-09, 2010-11ನೇ ಸಾಲಿನಲ್ಲಿ 6 ಟಿಎಂಸಿ ನೀರು ಸಂಗ್ರಹವಾಗಿತ್ತು. ನಂತರ 2016, 2020 ಮತ್ತು 2021ರಲ್ಲಿ ಗರಿಷ್ಠ ಮಟ್ಟ ತಲುಪಿದ್ದರಿಂದ ನದಿಗೆ ನೀರು ಬಿಡಲಾಗಿತ್ತು. ಈಗ ಮತ್ತೆ ಮಳೆ ಅಬ್ಬರದಿಂದ ಜಲಾಶಯಕ್ಕೆ ಕಳೆ ತಂದುಕೊಟ್ಟಿದೆ.

ಜಿಲ್ಲೆಯ ಕಾರಂಜಾ ಜಲಾಶಯ 7.69 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಆ.6ರವರೆಗೆ 6.294 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು ಸದ್ಯ ಕಡಿಮೆಯಾಗಿದ್ದು, 45 ಕ್ಯೂಸೆಕ್‌ ದಾಖಲಾಗಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮುಂಗಾರು ಆರಂಭದಿಂದ 1.42 ಟಿಎಂಸಿ ನೀರು ಕಾರಂಜಾ ಒಡಲು ಸೇರಿದೆ. 6.5 ಟಿಎಂಸಿಗೆ ಹೆಚ್ಚಿದಲ್ಲಿ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗುವುದು. ಭರತಕುಮಾರ, ಸಹಾಯಕ ಇಂಜಿನಿಯರ್‌, ಕಾರಂಜಾ ಜಲಾಶಯ.

ಶಶಿಕಾಂತ ಬಂಬುಳಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next