Advertisement

Darshan ಮನೆಯಲ್ಲಿ ಮಹಜರು: 3 ಬೈಕ್‌ ವಶ:15 ಕೋಟಿ ರೂ. ದಾಖಲೆ ಪತ್ರ ಪತ್ತೆ?

12:24 AM Jun 19, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಧನರಾಜ್‌ ಹಾಗೂ ನಂದೀಶ್‌ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮಂಗಳವಾರ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.

Advertisement

ಮತ್ತೊಂದೆಡೆ ನಟ ದರ್ಶನ್‌ ಮನೆಗೆ ಕರೆದೊಯ್ದು 3 ಬೈಕ್‌ ವಶಪಡಿಸಿಕೊಳ್ಳಲಾಗಿದೆ.
ಧನರಾಜ್‌ ಹಾಗೂ ನಂದೀಶ್‌ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿ ಆತನ ಸಾವಿಗೆ ಕಾರಣವಾಗಿದ್ದರು.

ಹೀಗಾಗಿ ಇಬ್ಬರನ್ನು ಶೆಡ್‌ಗೆ ಕರೆದೊಯ್ದು ಯಾವ ಜಾಗದಲ್ಲಿ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಲಾಗಿತ್ತು. ಆಗ ಯಾರೆಲ್ಲ ಇದ್ದರು ಎಂಬೆಲ್ಲ ಮಾಹಿತಿಯನ್ನು ಪಡೆಯಲಾಗಿತ್ತು. ಈ ಎಲ್ಲ ಪ್ರಕ್ರಿಯೆಯನ್ನು ಕೆಮೆರಾದಲ್ಲಿ ಚಿತ್ರೀಕರಿಸಲಾಗಿದೆ. ಮಂಗಳವಾರ ಮತ್ತೊಮ್ಮೆ ಆರ್‌.ಆರ್‌.ನಗರದಲ್ಲಿರುವ ನಟ ದರ್ಶನ್‌ ಮನೆಗೆ ಕಾರು ಚಾಲಕ ಲಕ್ಷ್ಮಣ, ನಾಗರಾಜ್‌ ಹಾಗೂ ನಂದೀಶ್‌ನನ್ನು ಕರೆದೊಯ್ದು ಮಹಜರು ಮಾಡಲಾಗಿದೆ.

ಆರ್‌.ಆರ್‌.ನಗರದಲ್ಲಿರುವ ಪವಿತ್ರಾಗೌಡ ಮನೆ ಮಹಜರು ವೇಳೆ 15 ಕೋಟಿ ರೂ. ಮೌಲ್ಯದ ದಾಖಲೆ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಕಳೆದ 10 ವರ್ಷಗಳಿಂದ ಪವಿತ್ರಾಗೌಡ ಇಲ್ಲಿಯೇ ವಾಸವಾಗಿದ್ದಾರೆ.

ಪವಿತ್ರಾ ಗೌಡ ಅಸ್ವಸ್ಥ
ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾಗೌಡ ಠಾಣೆಯಲ್ಲೇ ಅಸ್ವಸ್ಥಗೊಂಡಿದ್ದಳು. ತಲೆಸುತ್ತುತ್ತಿರುವುದಾಗಿ ಆಕೆ ಹೇಳಿದ್ದಳು. ಹೀಗಾಗಿ ವೈದ್ಯರನ್ನು ಕರೆಸಿ ಠಾಣೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೆರದೊಯ್ದು ಗ್ಲೂಕೋಸ್‌ ನೀಡಿ, ಬಳಿಕ ಠಾಣೆಗೆ ಕರೆತರಲಾಗಿದೆ. ಅಲ್ಲದೆ, ಪ್ರತಿನಿತ್ಯ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಇತರ ಆರೋಪಿಗಳಿಗೂ ವೈದ್ಯಕೀಯ ತಪಾಸಣೆ ನಡೆಸಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಜೂ. 20ರಂದು ಆರೋಪಿಗಳ ಪೊಲೀಸ್‌ ಕಸ್ಟಡಿ ಅಂತ್ಯವಾಗಲಿದ್ದು, ಎಲ್ಲ ಆರೋಪಿಗಳನ್ನು ಬಹುತೇಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆಯಿದೆ.

Advertisement

ಸ್ಥಳ ಮಹಜರು
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಕಾರು ಚಾಲಕ ಲಕ್ಷ್ಮಣ್‌ (ಎ 12) ಮತ್ತು ಆಪ್ತ ಸಹಾಯಕ ನಾಗರಾಜ್‌ ಅಲಿಯಾಸ್‌ ನಾಗ (ಎ 11) ಅವರನ್ನು ಮಂಗಳವಾರ ಮೈಸೂರಿನ ಖಾಸಗಿ ಹೊಟೇಲ್‌ಗೆ ಕರೆ ತಂದ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸಿದರು. ಹೊಟೇಲ್‌ನ ಲ್ಲಿ ನಟ ದರ್ಶನ್‌ ತಂಗಿದ್ದ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ ಹೊಟೇಲ್‌ಗೆ ಭೇಟಿ ನೀಡಿದ ಪೊಲೀಸರು, ಸತತ ಎರಡು ಗಂಟೆಗಳ ಕಾಲ ಇಬ್ಬರು ಆರೋಪಿಗಳೊಂದಿಗೆ ತೆರಳಿ ಸ್ಥಳ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಿದರು. ಹೊಟೇಲ್‌ನ ಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕೆಮರಾ ಪರಿಶೀಲಿಸಿದರು.

2 ತಿಂಗಳ ಹಿಂದೆ ದರ್ಶನ್‌ನ ಫಾರಂ
ಹೌಸ್‌ ಮ್ಯಾನೇಜರ್‌ ಆತ್ಮಹತ್ಯೆ
ಆನೇಕಲ್‌: ನಟ ದರ್ಶನ್‌ ಮತ್ತು ಅವನ ತಂಡದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆನೇಕಲ್‌ನ ಬಗ್ಗನದೊಡ್ಡಿ ಬಳಿಯ ದರ್ಶನ್‌ಗೆ ಸೇರಿದ್ದೆನ್ನಲಾಗುತ್ತಿರುವ ಫಾರಂ ಹೌಸ್‌ನಲ್ಲಿ ಮ್ಯಾನೇಜರ್‌ 2 ತಿಂಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಶ್ರೀಧರ್‌ ಡೆತ್‌ನೋಟ್‌ನಲ್ಲಿ ಬರೆದಿಟ್ಟು, ಜುಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಬರೆದು ವಿಷ ಸೇವಿಸಿ ಮೃತಪಟ್ಟಿದ್ದ ಪ್ರಕರಣ ಈಗ ದರ್ಶನ್‌ ಹೆಸರಿಗೆ ಸುತ್ತಿಕೊಂಡಿದೆ. ಅಸಹಜ ಸಾವು ಎಂದು ಆನೇಕಲ್‌ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next