ಗಾಂಧಿನಗರ: ಪೊಲೀಸ್ ಠಾಣೆಯಿಂದ 1.97 ಲಕ್ಷ ರೂಪಾಯಿ ಮೌಲ್ಯದ 125 ವಶಪಡಿಸಿಕೊಂಡ ಮದ್ಯದ ಬಾಟಲಿಗಳು ಮತ್ತು 15 ಟೇಬಲ್ ಫ್ಯಾನ್ ಗಳನ್ನು ಕದ್ದ ಆರೋಪದಡಿ ಗುಜರಾತ್ ನ ಮಹಿಸಾಗರ್ ಜಿಲ್ಲೆಯಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಸೇರಿದಂತೆ ಐವರು ಪೊಲೀಸರನ್ನು ಬಂಧಿಸಲಾಗಿದೆ.
ಖಾನ್ ಪುರ ತಾಲೂಕಿನ ಬಾಕೋರ್ ಪೊಲೀಸ್ ಠಾಣೆಯ ಮಹಿಳಾ ಲಾಕಪ್ ನಲ್ಲಿ ಮದ್ಯದ ಬಾಟಲಿಗಳು ಮತ್ತು ಫ್ಯಾನ್ ಗಳನ್ನು ಸಂಗ್ರಹಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಪಿಎಸ್ ವಾಲ್ವಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
“ಬಾಕೋರ್ ಪೊಲೀಸರು 482 ಭಾರತೀಯ ನಿರ್ಮಿತ ವಿದೇಶಿ ಮದ್ಯದ ಬಾಟಲಿಗಳು (ಐಎಂಎಫ್‌ಎಲ್) ಮತ್ತು 75 ಟೇಬಲ್ ಫ್ಯಾನ್ ಗಳನ್ನು ಟೇಬಲ್ ಫ್ಯಾನ್ ಗಳ ಹಿಂದೆ ಬಚ್ಚಿಟ್ಟು ಗುಜರಾತ್ ಗೆ ಮದ್ಯವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯಿಂದ ವಶಪಡಿಸಿಕೊಂಡಿದ್ದರು. ಅಂತಹ ವಸ್ತುಗಳನ್ನು ಸಂಗ್ರಹಿಸಲು ಮೀಸಲಿಟ್ಟಿದ್ದ ಕೊಠಡಿಯು ತುಂಬಿತ್ತು, ಹಾಗಾಗಿ ಅವುಗಳನ್ನು ಮಹಿಳೆಯರ ಲಾಕಪ್ ನಲ್ಲಿ ಇರಿಸಲಾಗಿತ್ತು” ಎಂದು ಹೇಳಿದರು.
ಹಿರಿಯ ಅಧಿಕಾರಿಗಳ ಭೇಟಿಗೆ ಮುಂಚಿತವಾಗಿ, ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳ ದಾಖಲೆಯನ್ನು ನೀಡುವಂತೆ ಮತ್ತು ಪೊಲೀಸ್ ಠಾಣೆಯನ್ನು ಅಚ್ಚುಕಟ್ಟಾಗಿ ಮಾಡಲು ಕೇಳಲಾಯಿತು. ಆದರೆ ಲಾಕಪ್ ಸ್ವಚ್ಛಗೊಳಿಸುವಾಗ, ಖಾಲಿ ಬಾಟಲಿಗಳು ಮತ್ತು ಮುರಿದ ಫ್ಯಾನ್ ಗಳ ಬಾಕ್ಸ್ ಗಳು ಕಂಡುಬಂದಿವೆ ಎಂದು ಅಧಿಕಾರಿ ಹೇಳಿದರು.
ಪರಿಶೀಲನೆ ನಡೆಸಿದಾಗ, 1.57 ಲಕ್ಷ ಮೌಲ್ಯದ 125 ಐಎಂಎಫ್‌ಎಲ್ ಬಾಟಲಿಗಳು ಮತ್ತು 40,500 ರೂಪಾಯಿ ಮೌಲ್ಯದ 15 ಫ್ಯಾನ್‌ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ನ.13 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ವಾಲ್ವಿ ತಿಳಿಸಿದ್ದಾರೆ.