Advertisement

Mahindra: ಅದ್ಭುತ ವಿನ್ಯಾಸದೊಂದಿಗೆ ಪರಿಚಯಿಸಲ್ಪಟ್ಟ ನೂತನ ಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌

06:38 PM Aug 16, 2023 | Team Udayavani |

ಮುಂಬೈ: ಭಾರತದಲ್ಲಿ ಈಗಾಗಲೇ ರಗಡ್‌ ಪಿಕ್‌ಅಪ್‌ ಟ್ರಕ್‌ಗಳನ್ನು  ಪರಿಚಯಿಸಿರುವ ಟಯೋಟಾ ಮತ್ತು ಇಸುಝು ಕಂಪೆನಿಗಳಿಗೆ ಠಕ್ಕರ್‌ ಕೊಡಲೆಂದೇ ದೇಶದ ಪ್ರತಿಷ್ಠಿತ ಆಟೋಮೊಬೈಲ್‌ ಕಂಪನಿ ಮಹೀಂದ್ರಾ ಆಂಡ್‌ ಮಹೀಂದ್ರಾ ಸಜ್ಜಾದಂತಿದೆ. ಟಯೋಟಾ ಹಿಲ್ಲಕ್ಸ್‌ ಮತ್ತು ಇಸುಝು ವಿ-ಕ್ರಾಸ್‌ ಪಿಕ್‌ಅಪ್‌ಗಳಿಗೆ ಸ್ಪರ್ಧೆಯೊಡ್ಡಲೆಂದು ಮಹೀಂದ್ರಾ ತನ್ನ ಹೊಚ್ಚಹೊಸ  ಅತ್ಯಾಧುನಿಕ ʻಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌ʼ ಅನ್ನು ಪರಿಚಯಿಸಿದೆ.

Advertisement

ದೇಶದಲ್ಲಿ ಜೀಪ್‌, ಪಿಕ್‌ಅಪ್‌ನಂತಹಾ ವಾಹನಗಳ ತಯಾರಿಕೆಯಿಂದಲೇ ಪ್ರಸಿದ್ಧವಾಗಿರುವ ಮಹೀಂದ್ರಾ ಸ್ವಾತಂತ್ರ್ಯ ದಿನದ ಸಂಭ್ರಮದ ನಡುವೆಯೇ ತನ್ನ ಹೊಸ  ʻಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌ʼ ಅನ್ನು ಪರಿಚಯಿಸಿದೆ. ತನ್ನ ಈ ಹೊಸ ವಾಹನದೊಂದಿಗೆ ಜಾಗತಿಕ ಮಾರುಕಟ್ಟೆಗೆ ಮಹತ್ತರವಾಗಿ ಲಗ್ಗೆಯಿಡಲು ಮಹೀಂದ್ರಾ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯ ಪಿಕ್‌ಅಪ್‌ಗಳ ಎಲೆಕ್ಟ್ರಿಕ್‌ ಮಾದರಿಗಳನ್ನು ಯುರೋಪ್‌ ರಾಷ್ಟ್ರಗಳಲ್ಲಿ ಪರಿಚಯಿಸಲಾಗುವುದು ಎಂದು ಕಂಪೆನಿ ತಿಳಿಸಿದೆ.

ಅತ್ಯಾಕರ್ಷಕ ಲುಕ್‌ನೊಂದಿಗೆ ಪರಿಚಯಿಸಲ್ಪಟ್ಟಿರುವ  ʻಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌ʼ ಸ್ಕಾರ್ಪಿಯೋ N ವಾಹನದ ಲುಕ್‌ನ ಜೊತೆ ಹೊಂದಾಣಿಕೆಯಾಗುವಂತಿದೆ. GNCAP (Global New Car Assessment Programs) ಮತ್ತು ಲ್ಯಾಟಿನ್‌ NCAP ಮಾದರಿಯ ಜೊತೆ ಫೈವ್‌ಸ್ಟಾರ್‌ ಸುರಕ್ಷತಾ ರೇಟಿಂಗ್‌ ಅನ್ನು ಸಾಧಿಸುವ ಗುರಿಯೊಂದಿಗೆ ಮಹೀಂದ್ರಾ ಹೆಜ್ಜೆಯಿಟ್ಟಿದೆ. ಈ ವಾಹನದಲ್ಲಿ ADAS (Advanced driver assistance systems) ವ್ಯವಸ್ಥೆಯೂ ಇರಲಿದೆ.

Advertisement

ಜಿಪ್‌, ಝಾಪ್‌, ಜೂಮ್‌ ಮತ್ತು ಕಸ್ಟಮ್‌ ಎಂಬ ನಾಲ್ಕು ಡ್ರೈವ್‌ ಮೋಡ್‌ಗಳನ್ನು ಈ ವಾಹನ ಹೊಂದಿರಲಿದ್ದು, ತನ್ನ ಸ್ಟೈಲಿಷ್‌ ಲುಕ್‌ನಿಂದಲೇ ʻಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌ʼ ವಾಹನ ಪ್ರಿಯರ ಮನಗೆಲ್ಲಲಿದೆ.

ದೂರ ಪ್ರಯಾಣಕ್ಕೂ ಈ ವಾಹನವನ್ನು ಬಳಸಬಹುದಾಗಿದ್ದು ಡ್ರೋಸಿ ಡ್ರೈವರ್‌ ಆಪ್ಷನ್‌ ವಾಹನಕ್ಕೆ ಸುರಕ್ಷತೆಯನ್ನು ಒದಗಿಸಲಿದೆ. 8 ಇಂಚ್‌ ಟಚ್‌ಸ್ರೀನ್‌ ಡಿಸ್ಪ್ಲೇ, ಕ್ಯಾಬಿನ್‌ನಲ್ಲಿನ ಪ್ರೀಮಿಯಂ ಆಡಿಯೋ ಸಿಸ್ಟಮ್‌, 5 G ಕನೆಕ್ಟಿವಿಟಿ, ಸನ್‌ರೂಫ್‌ ಮತ್ತು ಸೆಮಿ ಆಟೋಮ್ಯಾಟಿಕ್‌ ಪಾರ್ಕಿಂಗ್‌ ಆಪ್ಷನ್‌ಗಳು ಪ್ರಯಾಣವನ್ನು ಸುಖಕರವಾಗಿಸಲಿದೆ.

ಸ್ಕಾರ್ಪಿಯೋ N ನಂತೆ 2.2 ಲೀಟರ್‌ ಎಂಜಿನ್‌ ಸಾಮರ್ಥ್ಯದ ʻಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌ʼ mHawk ಟರ್ಬೋಡೀಸೆಲ್‌ ಇಂಜಿನ್‌ನ ಜೊತೆ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. 178 ಹಾರ್ಸ್‌ ಪವರ್‌ ಮತ್ತು 400 Nm ಟಾರ್ಕ್‌ ಅನ್ನು ಈ ಎಂಜಿನ್‌ ಉತ್ಪಾದಿಸಲಿದೆ. 6 ಸ್ಪೀಡ್‌ ಮ್ಯಾನ್ವಲ್‌ ಮತ್ತು6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಆಟ್ಯೋಮ್ಯಾಟಿಕ್‌ ಗೇರ್‌ ಬಾಕ್ಸ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ವಾಹನದಲ್ಲಿ 4 ವೀಲ್‌ ಡ್ರೈವ್‌ ಆಪ್ಷನ್‌ ಕೂಡಾ ಇರಲಿದೆ.

ಸ್ಕಾರ್ಪಿಯೋ N ಮಾದರಿಗಿಂತ ಸ್ವಲ್ಪ ವಿಭಿನ್ನವಾಗಿರುವ ಮುಂಭಾಗದಲ್ಲಿ ʻಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌ʼ ವಾಹನದಲ್ಲಿ ಕಾಣಬಹುದಾಗಿದೆ. ಮುಂಭಾಗದಲ್ಲಿ ಹೊಸ ಗ್ರಿಲ್‌, LED ಹೆಡ್‌ಲೈಟ್‌ಗಳು, ಫಾಗ್‌ಲ್ಯಾಂಪ್‌ಗಳನ್ನು ನೀಡಲಾಗಿದ್ದು ಎದುರುಗಡೆ ದೊಡ್ಡದಾದ ಸ್ಟೀಲ್‌ ಸ್ಕಿಡ್‌ ಪ್ಲೇಟ್‌, ಟಾಪ್‌ನಲ್ಲಿ ರೂಫ್‌ ರ‍್ಯಾಕ್‌ ಅನ್ನು ನೀಡಲಾಗಿದೆ. ವಾಹನದ ಮೇಲ್ಭಾಗದಲ್ಲಿ LED ಬಾರ್‌ನ್ನು ನೀಡಲಾಗಿದೆ. ವಾಹನದ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಟೋ ಹುಕ್‌ ಇರಲಿದ್ದು ಪಿಕಾಪ್‌ಗೆ ಟೆರರ್‌ ಲುಕ್‌ ಒದಗಿಸಲಿದೆ.

ಆಫ್‌ರೋಡ್‌ ಚಾಲನೆಗೆಂದು ಸಿದ್ಧಪಡಿಸಿದಂತಿರುವ ಈ ವಾಹನದಲ್ಲಿ ಸುರಕ್ಷತೆಗಾಗಿ 2 ಸ್ಪೇರ್‌ ಟಯರ್‌ಗಳನ್ನು ನೀಡಲಾಗಿದೆ. ಗ್ರೌಂಡ್‌ ಕ್ಲಿಯರೆನ್ಸ್‌ ಈ ವಾಹನದ ಮತ್ತೊಂದು ವಿಶೇಷತೆ.

ಈ ವಾಹನದ ಮೂಲಕ ಭಾರತ, ಯುಕೆ ಮಾತ್ರವಲ್ಲದೆ, ಆಸಿಯಾನ್‌, ಆಸ್ಟ್ರೇಲಿಯಾ, ದಕ್ಷಣ ಆಫ್ರಿಕಾ, ಅಮೆರಿಕದ ಕೆಲ ಭಾಗಗಳಲ್ಲಿ ಮಹೀಂದ್ರಾ ಕಂಪೆನಿಯ ಅಸ್ತಿತ್ವ ಸಾಧಿಸುವುದು ತಮ್ಮ ಗುರಿ ಎಂದು ಕಂಪೆನಿ ಹೇಳಿಕೊಂಡಿದೆ. ಈ ವಾಹನವು ಯಾವಾಗ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂಬ ಮಾಹಿತಿಯನ್ನು ಕಂಪೆನಿಯು ನಿರ್ದಿಷ್ಟವಾಗಿ ಹೇಳಿಲ್ಲವಾದರೂ 2026 ವೇಳೆಗೆ ಜಾಗತಿಕವಾಗಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ʻಮಹೀಂದ್ರಾ ಗ್ಲೋಬಲ್‌ ಪಿಕ್‌ಅಪ್‌ʼನ ಬೆಲೆ 20-22 ಲಕ್ಷ ಇರಬಹುದು ಎಂದೂ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next