ಬೆಳ್ತಂಗಡಿ: ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ದಸಂಸ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ತರುವ ರೀತಿ ಹಾಗೂ ಧಾರ್ಮಿಕ ಭಾವನೆಗಳಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ನಿಂದಿಸುವ ಜತೆಗೆ ಕೇಸರಿ ಬಣ್ಣದ ಬಟ್ಟೆಯನ್ನು ಸುಟ್ಟಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಹಿಂಜಾವೇ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಹಾಗೂ ಡಾ| ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರ ವಿರುದ್ಧ ಅವರು ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ಹಿಂದೂ ಧರ್ಮಕ್ಕೆ ಅವಮಾನ ಮಾಡಲು ಮುಂದಾದರೆ ತಕ್ಕ ಉತ್ತರ ನೀಡಲು ಸಂಘಟನೆ ಶಕ್ತವಾಗಿದೆ ಎಂದರು.
ಪ್ರತಿಭಟನೆ ಮಾಡುವಾಗ ಧರ್ಮನಿಂದನೆ ಸರಿಯಾದ ಕ್ರಮವಲ್ಲ. ಹೀಗಾಗಿ ನಾವು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ, ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡುತ್ತೇವೆ. ಕಾನೂನು ಕ್ರಮ ಜರಗಿಸದೇ ಇದ್ದಲ್ಲಿ ಮುಂದೆ ಇದರ ವಿರುದ್ಧ ಹೋರಾಟ ರೂಪಿಸಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂಜಾವೇ ಪ್ರಮುಖರಾದ ರವಿಕುಮಾರ್ ಬರಮೇಲು, ಅನಿಲ್‌ಕುಮಾರ್, ಮನೋಜ್ ಕುಂಜರ್ಪ, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಸಾಂಕೇತಿಕ ಪ್ರತಿಭಟನೆ
ಪತ್ರಿಕಾಗೋಷ್ಠಿ ಬಳಿಕ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ರಾಷ್ಟ್ರೀಯ ಹಿಂಜಾವೇ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ನಿಂದನೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ, ತಹಶೀಲ್ದಾರ್ ಹಾಗೂ ಪೊಲೀಸರಿಗೆ ದೂರು ನೀಡಲಾಯಿತು. ಈ ಸಂದರ್ಭ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ತಾ.ಪಂ.ಸದಸ್ಯ ವಿಜಯ ಗೌಡ, ರವಿಕುಮಾರ್ ಬರಮೇಲು ಮತ್ತಿತರರಿದ್ದರು.