Advertisement

MS Dhoni: ಕ್ಯಾಪ್ಟನ್ಸಿ ಕಿರೀಟ ಕಳಚಿಟ್ಟ ಥಲಾ..; ಟ್ರೋಫಿಯೊಂದಿಗೆ ಯಶೋಗಾಥೆಯೊಂದು ಅಂತ್ಯ

05:44 PM Mar 21, 2024 | Team Udayavani |

ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಮೊದಲು ನೆನಪಾಗುವುದು ಮಹೇಂದ್ರ ಸಿಂಗ್ ಧೋನಿ ಎಂಬ ಚಾಣಾಕ್ಷ ನಾಯಕ. ಎಂತಹ ಸಂದರ್ಭದಲ್ಲಿಯೂ ವಿಚಲಿತರಾಗದೆ, ಪರಿಸ್ಥಿತಿಗೆ ಅನುಗುಣವಾಗಿ ತಂಡವನ್ನು ಮುನ್ನಡೆಸುವ ಧೋನಿಯ ನಾಯಕತ್ವ ಇನ್ನು ಕಾಣಲು ಸಿಗದು. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ‘ಥಲಾ’ ತನ್ನ ಕ್ಯಾಪ್ಟನ್ಸಿ ಬ್ಯಾಟನ್ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಗೆ ಹಸ್ತಾಂತರಿಸಿದ್ದಾರೆ.

Advertisement

2007ರಲ್ಲಿ ಆರಂಭವಾದ ಧೋನಿ ಎಂಬ ಮಾಸ್ಟರ್ ಮೈಂಡ್ ನಾಯಕನ ಜರ್ನಿ ಇದೀಗ ಅಧಿಕೃತವಾಗಿ ಅಂತ್ಯವಾಗಿದೆ. 2007ರಲ್ಲಿ ಮೊದಲ ಬಾರಿಗೆ ನಾಯಕನಾಗಿ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದ ಎಂ.ಎಸ್ ಧೋನಿ ಇದೀಗ 2023ರ ಐಪಿಎಲ್ ನಲ್ಲಿ ಚೆನ್ನೈ ತಂಡವನ್ನು ಐದನೇ ಬಾರಿ ಕಪ್ ಗೆಲ್ಲಿಸಿ ನಾಯಕತ್ವವನ್ನು ನಾಜೂಕಾಗಿ ತೊರೆದಿದ್ದಾರೆ.

ಧೋನಿಯ ನಾಯಕತ್ವವು ಒತ್ತಡದಲ್ಲಿ ಶಾಂತತೆ, ಹೊಸ ಗೇಮ್ ಪ್ಲ್ಯಾನ್ ಗಳು ಮತ್ತು ತನ್ನ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ವಿಲಕ್ಷಣ ಸಾಮರ್ಥ್ಯದಿಂದ ನಿರೂಪಿತವಾಗಿದೆ. ಧೋನಿ ಕ್ಯಾಪ್ಟನ್ಸಿ ಕಿರೀಟ ಕೆಳಗಿಡುವ ನಿರ್ಧಾರವು ಐಪಿಎಲ್‌ ನ ವರ್ಣರಂಜಿತ ಅಧ್ಯಾಯವೊಂದರ ಅಂತ್ಯ ಎಂದೇ ಪರಿಗಣಿಸಲಾಗುತ್ತದೆ.

ಐಪಿಎಲ್‌ ನಲ್ಲಿ ಅತಿ ಹೆಚ್ಚು ಪಂದ್ಯಗಳ ನಾಯಕತ್ವದ ದಾಖಲೆಯನ್ನು ಧೋನಿ ಹೊಂದಿದ್ದಾರೆ. ಅವರು 226 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ 133 ಬಾರಿ ಗೆದ್ದಿದ್ದಾರೆ ಮತ್ತು 91 ಪಂದ್ಯಗಳಲ್ಲಿ ಸೋತಿದ್ದಾರೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. 50ಕ್ಕೂ ಹೆಚ್ಚು ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ನಾಯಕರ ಪೈಕಿ ಧೋನಿ 59.37 ಗೆಲುವಿನ ಪ್ರತಿಶತ ಹೊಂದಿದ್ದಾರೆ.

Advertisement

ಚೊಚ್ಚಲ ಐಪಿಎಲ್ ನಲ್ಲಿ ಅಂದರೆ 2008ರಲ್ಲಿ ಸಿಎಸ್ ಕೆ ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಧೋನಿ ಇದುವರೆಗೆ ಫ್ರಾಂಚೈಸಿಗಾಗಿ ಏಳು ಕಪ್ ಗೆದ್ದಿದ್ದಾರೆ. ಐದು ಬಾರಿ ಐಪಿಎಲ್ ಗೆದ್ದುಕೊಂಡಿರುವ ಧೋನಿ, ಎರಡು ಬಾರಿ ಚಾಂಪಿಯನ್ಸ್ ಲೀಗ್ ನಲ್ಲಿ ಚಾಂಪಿಯನ್ ಶಿಪ್ ಕಡೆಗೆ ಮುನ್ನಡೆಸಿದ್ದಾರೆ. (ಈ ಕೂಟ ಈಗ ರದ್ದಾಗಿದೆ) ಧೋನಿ ನಾಯಕತ್ವದಡಿಯಲ್ಲಿ ಚೆನ್ನೈ ತಂಡವು 11 ಬಾರಿ ಐಪಿಎಲ್ ಫೈನಲ್ ತಲುಪಿದೆ. ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ನಾಯಕ ಈ ದಾಖಲೆ ಹೊಂದಿಲ್ಲ.

ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಧೋನಿ 200ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ, ರೋಹಿತ್ ಮತ್ತು ಡೇವಿಡ್ ವಾರ್ನರ್ ಮಾತ್ರ 100ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

2016 ರಲ್ಲಿ ಈಗ ನಿಷ್ಕ್ರಿಯವಾಗಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ (ಆರ್ ಪಿಎಸ್) ತಂಡವನ್ನು ಸ್ವಲ್ಪ ಸಮಯ ಧೋನಿ ಮುನ್ನಡೆಸಿದ್ದರು. ಆದರೆ 14 ಪಂದ್ಯಗಳಲ್ಲಿ ಕೇವಲ ಐದು ಪಂದ್ಯಗಳಲ್ಲಿ ಗೆಲುವು ಕಂಡ ಕಾರಣ ಆಸ್ಟ್ರೇಲಿಯನ್ ಕ್ರಿಕೆಟಿಗ ಸ್ಟೀವ್ ಸ್ಮಿತ್‌ ಗೆ ಮುಂದಿನ ವರ್ಷ ನಾಯಕತ್ವವನ್ನು ಹಸ್ತಾಂತರಿಸಲಾಗಿತ್ತು.

2022ರಲ್ಲಿ ಧೋನಿ ಮೊದಲ ಬಾರಿಗೆ ನಾಯಕತ್ವ ತೊರೆಯುವ ನಿರ್ಧಾರ ಪ್ರಕಟಿಸಿದ್ದರು. ಆಗಲೂ ಐಪಿಎಲ್ ಗೆ ಕೆಲವೇ ದಿನಗಳ ಮೊದಲು ರವೀಂದ್ರ ಜಡೇಜಾಗೆ ನಾಯಕತ್ವ ಹಸ್ತಾಂತರಿಸುವ ಕೆಲಸ ಮಾಡಿದ್ದರು. ಆರಂಭದಲ್ಲಿ, ಜಡೇಜಾ ಅವರನ್ನು ಧೋನಿಗೆ ಉತ್ತಮ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿತ್ತು, ಬಹುಮುಖ ಕೌಶಲ್ಯಗಳು, ಉನ್ನತ ಮಟ್ಟದ ಅನುಭವ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸುವಲ್ಲಿ ನೈಪುಣ್ಯತೆಯನ್ನು ಹೊಂದಿದ್ದ ಜಡೇಜಾ ಅವರು ನಾಯಕತ್ವ ನಿಭಾಯಿಸುವಲ್ಲಿ ವಿಫಲರಾದರು. ಹೀಗಾಗಿ ಕೂಟದ ನಡುವೆ ಧೋನಿ ಮತ್ತೆ ನಾಯಕತ್ವ ವಹಿಸಿದರು.

2022ರಲ್ಲಿ 9ನೇ ಸ್ಥಾನದಲ್ಲಿ ಕೂಟವನ್ನು ಮುಗಿಸಿದರೂ ಮುಂದಿನ ವರ್ಷ ಮತ್ತೆ ಪುಟಿದೆದ್ದಿತು. 2023ರ ಕೂಟದಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿಎಸ್ ಕೆ ಐದನೇ ಬಾರಿ ಚಾಂಪಿಯನ್ ಆಗಿತ್ತು.

ಧೋನಿ ನಾಯಕತ್ವ ತೊರೆಯುವ ನಿರ್ಧಾರ ಪ್ರಕಟಿಸುವ ಮೂಲಕ ಐಪಿಎಲ್ ನ ಯಶೋಗಾಥೆಯೊಂದು ಅಂತ್ಯವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಇದೀಗ ಮಹೇಂದ್ರ ಸಿಂಗ್ ಧೋನಿ ಕೂಡಾ ಕೇವಲ ಆಟಗಾರನಾಗಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next