ನವದೆಹಲಿ: ಪ್ರಸಿದ್ಧ ವಿಜ್ಞಾನಿ, ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಮಹಾವೀರ್ ನರ್ವಾಲ್ ಕೋವಿಡ್ ಸೋಂಕಿನಿಂದ ಭಾನುವಾರ(ಮೇ 09) ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಮಹಾವೀರ್ ಅವರ ಪುತ್ರಿ, ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ನರ್ವಾಲ್ ತಿಹಾರ್ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ:ಲಾಕ್ ಡೌನ್ ಗೆ ಕಾಫಿನಾಡು ಸ್ತಬ್ಧ, ಜನಜೀವನ ಸ್ಥಗಿತ: ರಸ್ತೆಗಿಳಿದರೆ ಲಾಠಿ ಏಟು
ಕಳೆದ ವರ್ಷ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆ(ಸಿಎಎ ಪ್ರತಿಭಟನೆ) ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಡಿ ನತಾಶಾಳನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಯಾದ ನತಾಶಾ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವುದಾಗಿ ವರದಿ ತಿಳಿಸಿದೆ.
ತಿಹಾರ್ ಜೈಲಿನಲ್ಲಿದ್ದ ಪುತ್ರಿ ನತಾಶಾಳ ಜತೆ ಮಹಾವೀರ್ ನರ್ವಾಲ್ ಅವರಿಗೆ ಕೊನೆಯ ದಿನಗಳಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ. ನರ್ವಾಲ್ ಅವರ ಪುತ್ರ ಆಕಾಶ್ ಕೂಡಾ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಕೈದಿಗಳನ್ನು ಕೂಡಲೇ ಜೈಲಿನಿಂದ ಬಿಡುಗಡೆಗೊಳಿಸುವಂತೆ ಎಡಪಕ್ಷದ ಕಾರ್ಯಕರ್ತರು ಹಾಗೂ ಮಾನವಹಕ್ಕು ಕಾರ್ಯಕರ್ತರು ಇತ್ತೀಚೆಗೆ ಆಗ್ರಹಿಸಿದ್ದರು.