ನವದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಜಿ ಬೆಂಬಲ ಸೂಚಿಸಿದ್ದಾರೆ.
ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನ ಸ್ಥಳಕ್ಕೆ ಇಂದು ( ಫೆ.13 ಶನಿವಾರ) ಆಗಮಿಸಿದ 84 ವರ್ಷ ವಯಸ್ಸಿನ ತಾರಾ ಗಾಂಧಿ, ಅನ್ನದಾತರ ಪ್ರತಿಭಟನೆಗೆ ನೈತಿಕ ಸ್ಥೈರ್ಯ ತುಂಬಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದಾರೆ. ಜತೆಗೆ ರೈತ ಸಮುದಾಯ ನಿರ್ಲಕ್ಷಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾತಾಡಿರುವ ತಾರಾ, ನಾನು ಇಲ್ಲಿ ಯಾವುದೆ ರಾಜಕೀಯ ಪಕ್ಷದ ಪರವಾಗಿ ಬಂದಿಲ್ಲ. ಬದಲಾಗಿ ನಮ್ಮ ಹೊಟ್ಟೆ ತುಂಬಿಸುವ ಅನ್ನದಾತರ ಪರವಾಗಿ ಬಂದಿದ್ದೇನೆ. ಇಂದು ನಾವು ಬದುಕಿದ್ದೇವೆ ಎನ್ನುವುದಕ್ಕೆ ಮುಖ್ಯ ಕಾರಣ ರೈತರು. ರೈತರಿಗೆ ಆಗುವ ಅನುಕೂಲದಲ್ಲಿ ನಮ್ಮ ದೇಶದ ಲಾಭವಿದೆ ಎಂದಿದ್ದಾರೆ.
ಈ ವೇಳೆ 1857 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನೆನಪಿಸಿಕೊಂಡ ತಾರಾ ಗಾಂಧಿ, ಅಂದು ಉತ್ತರ ಪ್ರದೇಶದ ಮೀರತ್ ನಿಂದ ಪ್ರತಿಭಟನೆ ಶುರುವಾಗಿತ್ತು ಎಂದಿದ್ದಾರೆ.
ಅದೇನಾದರೂ ಆಗಲಿ ರೈತರಿಗೆ ಇದರ ಲಾಭವಾಗಬೇಕು ಎಂದು ನಾನು ಬಯಸುತ್ತೇನೆ. ರೈತರು ಮಾಡುವ ಕಠಿಣ ಪರಿಶ್ರಮದ ಬಗ್ಗೆ ಯಾರಿಗೂ ತಿಳಿದಿಲ್ಲ ಮತ್ತು ರೈತರ ಅನುಕೂಲದಲ್ಲಿ ನಮ್ಮ ದೇಶದ ಲಾಭವಿದೆ ಎಂದು ಮತ್ತೆ ಹೇಳಬೇಕಾಗಿಲ್ಲ ಎಂದು ರೈತರ ಪರ ಮಾತಾಡಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ.
ಇನ್ನು ಕಳೆದ ನವೆಂಬರ್ ತಿಂಗಳಿಂದ ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಪ್ರತಿಭಟನೆ ನಿರತ ಅನ್ನದಾತರ ಆಗ್ರಹವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಜತೆ ಹಲವು ಸುತ್ತಿನ ಮಾತುಕತೆ ನಡೆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.