ಬೆಂಗಳೂರು: ಮೇಕೆದಾಟು ಯೋಜನೆಗಾಗಿ ನಾವೇನೂ ಲಾಠಿ, ಬಂದೂಕು ಹಿಡಿದು ಯುದ್ಧ ಮಾಡಲು ಹೋಗಿರಲಿಲ್ಲ. ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ಅಹಿಂಸೆ ಮಾರ್ಗದಲ್ಲಿ ಹೊರಟಿದ್ದೆವು. ಆದರೆ, ಇದನ್ನು ಕೆಲವರು ಒಪ್ಪಲು ತಯಾರಿಲ್ಲ. ಅಂತಹವರಿಗೆ ಏನು ಹೇಳಬೇಕು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಇತ್ತೀಚೆಗೆ ಕಾಂಗ್ರೆಸ್ ವತಿಯಿಂದ ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆ ನಡೆಸಲಾಯಿತು. ನಮಗೆ ಈ ಪಾದಯಾತ್ರೆ, ಹೋರಾಟವನ್ನು ಹೇಳಿಕೊಟ್ಟವರು ಯಾರು? ಅದೇ ಮಹಾತ್ಮ ಗಾಂಧೀಜಿ. ಕಾಂಗ್ರೆಸಿಗರು ಮಾತ್ರ ಈ ನಿಟ್ಟಿನಲ್ಲಿ ಯೋಚಿಸಲು ಸಾಧ್ಯ. ಗಾಂಧೀಜಿ ಹಾಕಿಕೊಟ್ಟ ನಡಿಗೆ, ಮಾರ್ಗದರ್ಶನವನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ದೇಶದ ರೈತರು 400 ಸಂಸತ್ ಸದಸ್ಯರಿರುವ ಬಲಿಷ್ಠ ಸರಕಾರದ ವಿರುದ್ಧ ಬೀದಿಗಿಳಿದು ಒಂದು ವರ್ಷ ನಿರಂತರ ಹೋರಾಟ ನಡೆಸಿದರು. ರೈತರು ಗಾಂಧೀಜಿ ತತ್ವದಂತೆ ಅಹಿಂಸೆ ಮಾರ್ಗದ ಮೂಲಕ ಸತ್ಯಾಗ್ರಹ ಮಾಡಿ ಪ್ರಧಾನಿಗಳು ಕರಾಳ ಕಾಯ್ದೆಗಳನ್ನು ಹಿಂಪಡೆದು ಕೈಮುಗಿದು ಕ್ಷಮೆ ಕೇಳುವಂತೆ ಮಾಡಿದ್ದಾರೆ. ಈ ಮೂಲಕ ರೈತರು ಅಧಿಕಾರ, ಮತ, ದರ್ಪ ಇದ್ಯಾವುದೂ ಹೋರಾಟದ ಮುಂದೆ ಶಾಶ್ವತವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಕಡಿಮೆಯಾಗುತ್ತಲೇ ಇವೆ ಕೋವಿಡ್ ಕೇಸ್ : ಇಂದು 68 ಸಾವು
ಪ್ರತಿ ಹಳ್ಳಿಯಲ್ಲಿ ಪಂಚಾಯತ್, ಸಹಕಾರ ಸಂಘ ಇರಬೇಕು ಎಂಬ ಅವರ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿವೆ. ಬ್ಯಾಂಕ್‌ಗಳು ರಾಷ್ಟ್ರೀಕರಣವಾದರೂ ಸಹಕಾರ ತತ್ವದ ಮೇಲೆ ಉಳಿದುಕೊಂಡ ಸಂಸ್ಥೆಗಳು ಸಮಾಜವನ್ನು ಸಮತೋಲನದಲ್ಲಿಡಲು ನೆರವಾಗಿವೆ. “ಸತ್ಯ ಹಾಗೂ ಅಹಿಂಸೆ ಆಧಾರದ ಮೇಲೆ ನನ್ನ ಧರ್ಮ ನಿಂತಿದೆ’ ಎಂದು ಗಾಂಧೀಜಿ ಹೇಳಿದ್ದರು. ಅವರ ಸತ್ಯ ಹಾಗೂ ಅಹಿಂಸೆಯನ್ನು ನಾವು (ಕಾಂಗ್ರೆಸ್) ಅಳವಡಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಗಾಂಧೀಜಿ ವಿಚಾರಧಾರೆ ಇಂದು ಹೆಚ್ಚು ಪ್ರಸ್ತುತ
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹುತಾತ್ಮ ಮಹಾತ್ಮ ಗಾಂಧೀಜಿ ನಮ್ಮ ಜತೆಗೆ ಇಲ್ಲದಿರಬಹುದು. ಆದರೆ, ಅವರ ವಿಚಾರಗಳು ಮತ್ತು ಅವರ ಬದುಕಿನ ಸಂದೇಶಗಳು ನಮ್ಮ ಜತೆಗಿವೆ. ಅವರು ಗಾಂಧಿಯನ್ನು ಕೊಂದರೆ ಹೊರತು, ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಾಗಿಲ್ಲ. ಗಾಂಧೀಜಿ ವಿಚಾರಧಾರೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಹೇಳಿದರು.