Advertisement

“ಮಹಾತ್ಮ’ನಡೆದಾಡಿದ ಮಂಗಳೂರು!

04:07 PM Oct 02, 2019 | mahesh |

ಮಹಾನಗರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರದ ಉದ್ದಗಲಕ್ಕೂ ಸಂಭ್ರಮ ಮನೆಮಾಡಿದೆ. ಅದರಲ್ಲಿಯೂ, ಗಾಂಧೀಜಿಯವರು ಮಂಗಳೂರಿನ ನೆಲದಲ್ಲಿ ನಡೆದಾಡಿದ್ದಾರೆ ಎಂಬುದು ಕರಾವಳಿ ಜನರಿಗೆ ಹೆಮ್ಮೆಯ ನೆನಪು.

Advertisement

1920ರಲ್ಲಿ ಮಹಾತ್ಮಾ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಪ್ರಾರಂಭಿಸಿ ರಾಷ್ಟ್ರವ್ಯಾಪಿ ಪ್ರವಾಸ ಕೈಗೊಂಡರು. ಮದ್ರಾಸ್‌ ಪ್ರಸಿಡೆನ್ಸಿಯ ಮೂಲಕ ನಡೆದ ಈ ಪ್ರವಾಸದ ಭಾಗವಾಗಿ ಗಾಂಧೀಜಿಯವರು ಆ. 19ರಂದು ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ಕೇಂದ್ರ ಮೈದಾನದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಇವರ ಜತೆಗೆ ಬಂದ ಶೌಕತ್‌ ಅಲಿ ಅವರೂ ಭಾಷಣ ಮಾಡಿದ್ದರು.

ಮಂಗಳೂರಿಗೆ ಬಂದಿದ್ದ ಈ ಸಂದರ್ಭ ಗಾಂಧೀಜಿಯವರು ಕೊಡಿಯಾಲಬೈಲ್‌ನ ಸಮೀಪದ ಮನೆಯಲ್ಲಿ ತಂಗಿದ್ದರು. ಅವರ ಮೊದಲ ಭೇಟಿಯ ಸಂದರ್ಭ ಅವರನ್ನು ರೈಲ್ವೇ ನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆ ತರಲಾಗಿತ್ತು. ಹಂಪನಕಟ್ಟೆ, ಕಾರ್‌ಸ್ಟ್ರೀಟ್‌, ಮಾರ್ಕೆಟ್‌, ಬಂದರ್‌ ಮೂಲಕ ಸಾಗಿತ್ತು ಎಂದು ಮಂಗಳೂರು ದರ್ಶನ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.

1934ರಲ್ಲಿ ಮೂರನೇ ಭೇಟಿ
ಅಸ್ಪೃಶ್ಯರ ಏಳಿಗೆಯ ಕಾರಣಕ್ಕಾಗಿ 1933-34ರಲ್ಲಿ ಗಾಂಧೀಜಿಯವರು 9 ತಿಂಗಳ ಪ್ರವಾಸ ಕೈಗೊಂಡರು. ಗಾಂಧೀಜಿಯವರು 1934 ಫೆ. 24ರಂದು ಮಡಿಕೇರಿಯಿಂದ ಹೊರಟು ಸಂಪಾಜೆ, ಸುಳ್ಯದ ಮೂಲಕ ಪುತ್ತೂರು ಆಗಮಿಸಿದರು.

ಪುತ್ತೂರಿನಲ್ಲಿ ಸಾರ್ವಜನಿಕ ಸಭೆ ಯನ್ನು ಉದ್ದೇಶಿಸಿ ಮಾತನಾಡಿ, ಹರಿಜನ ಕೇರಿಗೆ ಭೇಟಿ ನೀಡಿದ ರು. ಸಂಜೆ 5 ಗಂಟೆಗೆ ಮಂಗಳೂರಿಗೆ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿದ್ದರು. ಮೊದಲನೇ ಸಮಾರಂಭ ನಡೆದದ್ದು ಹೊಗೆಬಜಾರ್‌ನ ಜ್ಞಾನೋದಯ ಸಮಾಜದ ವತಿ ಯಿಂದ. ಅದು ಮೀನುಗಾರರ ಸಮು ದಾಯವಾದ ಮೊಗವೀರರ ಒಂದು ಸಂಘಟನೆ. ಇದು ಮದ್ಯ ವಿರೋಧ ಕಾರ್ಯದಲ್ಲಿ ನಿರತವಾಗಿತ್ತು. ಅವರು ಗಾಂಧೀಜಿಯವರಿಗೆ ಹಣದ ನಿಧಿಯನ್ನು ಮತ್ತು ಶುಭ ಹಾರೈಕೆಯ ಒಕ್ಕಣೆ ನೀಡಿದ್ದರು. 24ರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದು, 25ರ ಬೆಳಗ್ಗೆ ಹರಿಜನ ಕೇರಿ ಮತ್ತು ಸಾರ್ವಜನಿಕ ಕೃಷ್ಣಮಂದಿರಕ್ಕೆ ಶಿಲಾನ್ಯಾಸ ಮಾಡಲು ಕೆನರಾ ಶಾಲೆಗೆ ಭೇಟಿ ನೀಡಿದರು. ಶಾಲಾ ಕಾಂಪೌಂಡಿನಲ್ಲಿ ಸಭೆ ನಡೆಯಿತು. ಶಾಲೆಗೆ ಇದು ಗಾಂಧೀಜಿಯವರ ಎರಡನೇ ಭೇಟಿ (1927-ಮೊದಲ ಭೇಟಿ). ವಿಟ್ಟಲ್‌ಬಾಯಿ ಜಿ. ಪಟೇಲ್‌ ಅವರ ಮೂರ್ತಿ ಶಿಲ್ಪವನ್ನು ಅನಾವರಣ ಮಾಡಿದ ಅನಂತರ ಗಾಂಧೀಜಿ ಭಾಷಣ ಮಾಡಿದರು. ಕುದ್ಮಲ್‌ ರಂಗರಾವ್‌ ಸ್ಥಾಪಿಸಿದ ದುರ್ಬಲ ವರ್ಗದವರ ಸಂಸ್ಥೆಗೆ ಭೇಟಿ ನೀಡಿದ ಗಾಂಧೀಜಿ ಮಕ್ಕಳಿಗೆ ಖಾದಿಯ ಬಹುಮಾನ ವಿತರಿಸಿದರು. ಅನಂತರ ಮಂಗಳೂರಿನ ನ್ಯಾಶನಲ್‌ ಗರ್ಲ್ಸ್ ಸ್ಕೂಲ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1,500ಕ್ಕೂ ಅಧಿಕ ಮಹಿಳೆಯರಿದ್ದರು. ಗಾಂಧೀಜಿಯವರಿಗೆ ನಿಧಿ- ಪತ್ರವನ್ನೂ ಸಮರ್ಪಿಸಲಾಯಿತು. ಮುಂದೆ ಗಾಂಧೀ ಜಿಯವರು ಮಂಗಳೂರಿನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಲ್ಲಿ 1,001ರೂ. ಕಾಣಿಕೆ ನೀಡಲಾಯಿತು. ಅಲ್ಲಿಂದ ಮೂಲ್ಕಿಗೆ ಹೋದರು. ಸಾರ್ವಜನಿಕ ಸಭೆ ಮತ್ತು ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕುಂದಾಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಅಂದು ತಂಗಿದ್ದರು.

Advertisement

1927ರಲ್ಲಿ ಎರಡನೇ ಭೇಟಿ
ಗಾಂಧೀಜಿಯವರು ಖಾದಿ ಪ್ರಚಾರ ಪ್ರವಾಸದ ಭಾಗವಾಗಿ ಎರಡನೇ ಬಾರಿ 1927ರ ಅ. 26ರಂದು ಮಂಗ ಳೂ ರಿಗೆ ಭೇಟಿ ನೀಡಿದ್ದರು. ನಗರದ ಕೆನರಾ ಶಾಲೆಯ ಭುವನೇಂದ್ರ ಹಾಲ್‌ನಲ್ಲಿ ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಬಡವರ ಸಹಾಯಕ್ಕಾಗಿ ಜನರಿಂದ ದೇಣಿಗೆ, ಕಾಣಿಕೆಯನ್ನು ಸ್ವೀಕರಿಸಿದ್ದರು.

ಗಾಂಧೀಜಿ ಪ್ರತಿಮೆಗೆ ಪೂಜೆ!
ಗಾಂಧೀಜಿಯವರ ಮಂಗಳೂರು ಭೇಟಿಯ ಐತಿಹಾಸಿಕ ತಾಣ ಲೈಟ್‌ಹೌಸ್‌ ಹಿಲ್‌ ಅಥವಾ ಬಾವುಟಗುಡ್ಡೆ. ಇಲ್ಲಿ ಗಾಂಧೀಜಿ ಅವರಿಗೆ ಅರ್ಪಿತವಾದ ಗ್ರಂಥಾಲಯ,ಅವರ ಪ್ರತಿಮೆ ಇದೆ. “ಗಾಂಧೀನಗರ’ ಎಂಬ ಸ್ಥಳದಲ್ಲಿ ಗಾಂಧೀಜಿಯವರ ಉದ್ಯಾನವಿದೆ. ಈ ಸ್ಥಳದಲ್ಲಿ “ಸರಸ್ವತಿ ನಿವಾಸ’ ಎಂಬ ಹೆಸರಿನ ಮನೆಯಲ್ಲಿ ಗಾಂಧೀಜಿಯವರು ತಂಗಿದ್ದರು ಎನ್ನುವ ಮಾಹಿತಿಯಿದೆ. ಈ ಸಂಬಂಧ ಈ ಉದ್ಯಾನವನಕ್ಕೆ ಮತ್ತು ಈ ಬಡಾವಣೆಗೆ ಈ ಹೆಸರು ಬಂದಿದೆ. ಕೆನರಾ ಶಾಲೆಗೆ ಭೇಟಿ ನೀಡಿದ ನೆನಪಿನಲ್ಲಿ ವಸ್ತು ಸಂಗ್ರಹಾಲಯಕ್ಕೆ ಗಾಂಧೀ ಜಿಯವರ ಹೆಸರನ್ನಿಡ ಲಾಗಿದೆ. ಪುರಭವನದಲ್ಲಿಗಾಂಧೀಜಿಪ್ರತಿಮೆಯಿದೆಸ್ವಾತಂತ್ರ್ಯದ ನೆನಪಿನಲ್ಲಿ 1948ರಲ್ಲಿ ಕಂಕನಾಡಿಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗಾಂಧೀಜಿ ಅವರ ಪ್ರತಿಮೆ ಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದಕ್ಕೆ ಈಗಲೂ ನಿತ್ಯ ಪೂಜೆ ನಡೆಯುತ್ತಿರುವುದು ದೇಶದಲ್ಲಿಯೇ ಅಪೂರ್ವ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next