Advertisement

ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

04:27 PM Sep 29, 2022 | Team Udayavani |

ಬೆಂಗಳೂರು: ಸುಪ್ರಸಿದ್ಧ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರಿಗೆ 2022 ನೇ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

Advertisement

ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ನಗರದ ಗಾಂಧೀ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರಿಗೆ ಐದು ಲಕ್ಷ ರೂಪಾಯಿ ನಗದು ಒಳಗೊಂಡ ರಾಜ್ಯ ಸರ್ಕಾರದ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ರಾಷ್ಟ್ರೀಯ ಮಾನಸಿಕ ಮತ್ತು ನರರೋಗಗಳ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ 45 ಕ್ಕೂ ಹೆಚ್ಚು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ಡಾ.ಸಿ.ಆರ್. ಚಂದ್ರಶೇಖರ್ ಅವರು 50,000 ಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ.

ಅಲ್ಲದೇ, ಡಾ. ಸಿ. ಆರ್. ಚಂದ್ರಶೇಖರ್ ಅವರು 40,000 ಕ್ಕೂ ಹೆಚ್ಚು ಜನರಿಗೆ ಪತ್ರ ಮುಖೇನ ವೈದ್ಯಕೀಯ ಸಲಹೆ ಕೊಟ್ಟಿದ್ದಾರೆ. ಅಂತೆಯೇ, 30,000 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ ಹಾಗೂ 20,000 ಕ್ಕೂ ಹೆಚ್ಚು ಜನರಿಗೆ ಆಪ್ತ ಸಮಾಲೋಚಕರ ತರಬೇತಿ ನೀಡಿದ್ದಾರೆ.

Advertisement

ಇದನ್ನೂ ಓದಿ:ಹಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ಯಶ್; ಏನಿದು ಕಲಾಶ್ನಿಕೋವ್ ಗನ್ ಕಥೆ?

ತಾವು ಸೇವೆ ಸಲ್ಲಿಸಿದ ನಿಮ್ಹಾನ್ಸ್ ಸಂಸ್ಥೆಗೆ ಒಂದು ಕೋಟಿ ಒಂಬತ್ತು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿರುವ ಡಾ. ಸಿ.ಆರ್. ಚಂದ್ರಶೇಖರ್ ಅವರು ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಭಾಷೆಯಲ್ಲಿ 280 ಮತ್ತು ಆಂಗ್ಲ ಭಾಷೆಯಲ್ಲಿ 40 ಪುಸ್ತಕಗಳನ್ನು ಬರೆದಿದ್ದಾರೆ. ಈ ಎಲ್ಲಾ ಗಮನಾರ್ಹ ಸಾಧನೆಗಳನ್ನು ಪರಿಗಣಿಸಿ ಡಾ. ಸಿ. ಆರ್. ಚಂದ್ರಶೇಖರ್ ಅವರಿಗೆ ಅತ್ಯಂತ ಅಭಿಮಾನ ಹಾಗೂ ಗೌರವಪೂರ್ವಕವಾಗಿ 2022 ನೇ ದಿನದರ್ಶೀ ವರ್ಷದ ರಾಜ್ಯ ಸರ್ಕಾರದ ಪ್ರತಿಷ್ಠಿತ “ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ ಎಸ್ ಹರ್ಷ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next