ಹೊನ್ನಾಳಿ: ಇಂದು ಗಾಂಧೀಜಿಯವರ 150ನೇ ಜನ್ಮದಿನಾಚರಣೆ. ಮಹಾತ್ಮ ಗಾಂಧೀಜಿ ಅವರು ಖಾದಿ ಪ್ರಚಾರಕ್ಕಾಗಿ ಹೊನ್ನಾಳಿಗೂ ಬಂದಿದ್ದರು ಎಂಬುದು ಪಟ್ಟಣದ ವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ. 1927ರಲ್ಲಿ ಅಂದಿನ ಮೈಸೂರು ಸಂಸ್ಥಾನದಲ್ಲಿ ಖಾದಿ ಪ್ರಚಾರ ಸಭೆಗಳನ್ನು ಹಮ್ಮಿಕೊಂಡಿದ್ದ ಮಹಾತ್ಮ ಗಾಂ ಧೀಜಿ 1927 ಆ.13ರಂದು ಹೊನ್ನಾಳಿ ಪಟ್ಟಣಕ್ಕೆ ಬಂದು ಪ್ರಚಾರ ಸಭೆ ನಡೆಸಿದ್ದರು.
ಗಾಂಧೀಜಿ ಅವರು ಮೈಸೂರು ನಗರದಿಂದ ಪ್ರವಾಸ ಕೈಗೊಂಡು 1927 ಆ.12 ರಂದು ದಾವಣಗೆರೆಗೆ ರೈಲಿನಲ್ಲಿ ಆಗಮಿಸಿದ್ದರು. ಅಂದು ದಾವಣಗೆರೆ ನಗರದಲ್ಲಿ ಖಾದಿ ಪ್ರಚಾರ ಆಂದೋಲನ ನಡೆಸಿ ರಾತ್ರಿ ಅಲ್ಲಿಯೇ ತಂಗಿದ್ದರು. ಮರುದಿನ ಆ.13ರಂದು ಬೆಳಿಗ್ಗೆ ಹರಿಹರಕ್ಕೆ ತೆರಳಿ ಅಲ್ಲಿ ಸಭೆ ನಡೆಸಿ ಮಧ್ಯಾಹ್ನ ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ್ದರು.
ತುಂಗಭದ್ರಾ ನದಿ ತಟದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಅವರ ಜತೆಗಿದ್ದ ಪತ್ನಿ ಕಸ್ತೂರಬಾ, ಮಹಾದೇವ ದೇಸಾಯಿ, ರಾಜಾಜಿ, ಗಾಂಧಿ ಅವರ ಕಿರಿಯ ಮಗ ದೇವದಾಸ್ ಗಾಂಧಿ , ರಾಜಾಜಿ ಅವರ ಮಗಳು ಲಕ್ಷ್ಮಿ, ಮೃದುಲಾಬೆನ್, ಮಣಿಬೆನ್, ಬೆಗಾವಿಯ ಗಂಗಾಧರರಾವ್ ದೇಶಪಾಂಡೆ ಅವರನ್ನು ಹೊನ್ನಾಳಿನಾಗರಿಕರು ಸ್ವಾಗತಿಸಿ ಪ್ರವಾಸಿ ಮಂದಿರಕ್ಕೆ ಕರೆ ತಂದಿದ್ದರು. ಆ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿ ಆಗಿದ್ದ ಶ್ರೀನಿವಾಸಮೂರ್ತಿ ನೂಲಿನ ಲಡಿ ನೀಡುವ ಮೂಲಕ ಸರ್ಕಾರದ ಪರವಾಗಿ ಸ್ವಾಗತಿಸಿದ್ದರು.
ಖಾದಿಧಾರಿಗಳಾಗಿದ್ದ ನವಾಬ್ ಷೇರ್‌ಖಾನ್ ಅವರು ಪರ್ಶಿಯನ್ ಭಾಷೆಯಲ್ಲಿದ್ದ ಭಿನ್ನವತ್ತಳೆ ಅರ್ಪಿಸಿದ್ದರು. ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ ಗಾಂಧೀಜಿ, ಮಾಂಸಾಹಾರ, ಮದ್ಯಪಾನ ತೊರೆಯುವುದರ ಅಗತ್ಯ ಮತ್ತು ಖಾದಿ ಬಳಕೆಯ ಅನಿವಾರ್ಯತೆ ಬಗ್ಗೆ ವಿವರಿಸಿದ್ದರು.
ಎಂ.ಪಿ.ಎಂ. ವಿಜಯಾನಂದಸ್ವಾಮಿ.