ಹೊಸದಿಲ್ಲಿ,: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೊದಲ ದಿನವನ್ನು (1947 ಆ. 15) ಮಹಾತ್ಮಾ ಗಾಂಧಿ ಈಗಿನ ಪಾಕಿಸ್ಥಾನದಲ್ಲಿ ಕಳೆಯಲು ನಿರ್ಧರಿಸಿದ್ದರು. ಕೇಂದ್ರದ ಮಾಜಿ ಸಚಿವ, ಲೇಖಕ ಎಂ.ಜೆ. ಅಕ್ಬರ್ ಬರೆದಿರುವ ‘ಗಾಂಧೀಸ್ ಹಿಂದೂಯಿಸಮ್: ದ ಸ್ಟ್ರಗಲ್ ಎಗೆನೆಸ್ಟ್ ಜಿನ್ನಾಸ್ ಇಸ್ಲಾಂ’ (Gandhi’s Hinduism: The Struggle Against Jinnah’s Islam) ಪುಸ್ತಕದಲ್ಲಿ ಈ ಕುತೂಹಲಕಾರಿ ಅಂಶವನ್ನು ಪ್ರಸ್ತುತಪಡಿಸಲಾಗಿದೆ.
ಅಕºರ್ ಬರೆದಿರುವ ಪ್ರಕಾರ ‘ಗಾಂಧಿಯವರು ಪೂರ್ವ ಪಾಕಿ ಸ್ಥಾನದ ನೋಖಾಲಿಯಲ್ಲಿ ಇರಲು ಬಯಸಿದ್ದರು. 1946ರಲ್ಲಿ ಆ ಪ್ರದೇಶದಲ್ಲಿ ಉಂಟಾಗಿದ್ದ ದಂಗೆಯಲ್ಲಿ ಹಿಂದೂಗಳು ತೀವ್ರ ರೀತಿಯಲ್ಲಿ ನೋವು ಅನುಭವಿಸಿದ್ದರು. ಅಲ್ಲಿ ಇರುವ ಮೂಲಕ ಅಂಥ ಘಟನೆಗಳು ಮರುಕಳಿಸದಂತೆ ಮಾಡುವುದು ಗಾಂಧೀಜಿಯ ಇಚ್ಛೆಯಾಗಿತ್ತು.’
‘ದೇಶವನ್ನು ಎರಡು ಭಾಗವಾಗಿ ವಿಭಜಿಸುವ ಬಗ್ಗೆ ಗಾಂಧಿಯವರು ನಂಬಿಕೆ ಇಟ್ಟುಕೊಂಡಿರಲಿಲ್ಲ. ಆದರೂ, ನಿರಂಕುಶ ಕತ್ತಿಯೊಂದರ ಮೂಲಕ ಅನೈಸರ್ಗಿಕ ಗಡಿಯನ್ನು ಸೃಷ್ಟಿಸಿದ್ದನ್ನು, ಗಾಂಧೀಜಿಯು ‘ಆ ಕ್ಷಣದ ಹುಚ್ಚುತನ’ ಎಂಬು ಬಣ್ಣಿಸಿದ್ದರು ಎಂಬುದಾಗಿ ಅಕ್ಬರ್ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.
1940 ಮತ್ತು 1947ರ ನಡುವಿನ ಏಳು ವರ್ಷಗಳ ಕಾಲದ ಅತ್ಯಂತ ಸ್ಫೋಟಕ ನಿರ್ಧಾರಗಳು, ಹಲವು ಎಡವಟ್ಟುಗಳು, ಹಿನ್ನಡೆಗಳ ಅಂಶಗಳು, ಸೈದ್ಧಾಂತಿಕ ಮತ್ತು ಈ ಪ್ರದೇಶದ ಭವಿಷ್ಯವನ್ನು ನಿರ್ಧರಿಸಿದ್ದ ನಾಯಕರ ವ್ಯಕ್ತಿತ್ವಗಳನ್ನು ಈ ಪುಸ್ತಕದಲ್ಲಿ ಅಕ್ಬರ್ ದಾಖಲಿಸಿದ್ದಾರೆ.