Advertisement
ಹೌದು, ಇದೇ ಶಿವಯೋಗ ಮಂದಿರದಲ್ಲಿ ವಟುಗಳಾಗಿ ಅಧ್ಯಯನ ಮಾಡಿದ್ದ ಡಾ|ಸಂಗನಬಸವ ಶ್ರೀ, ಮುಂದೊಂದು ದಿನ ಅದೇ ಶಿವಯೋಗ ಮಂದಿರದ ಅಧ್ಯಕ್ಷರಾಗಿದ್ದರು. ತಮ್ಮ ಸುದೀರ್ಘ 26 ವರ್ಷಗಳ ಸೇವೆಯಲ್ಲಿ ಹಾನಗಲ್ ಕುಮಾರೇಶ್ವರ ಶ್ರೀಗಳ ಇಚ್ಛೆ-ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಅತ್ಯಂತ ಶ್ರದ್ಧೆ-ಭಕ್ತಿಯಿಂದ ಕೆಲಸ ಮಾಡಿದ ಖ್ಯಾತಿ ಅವರಿಗಿದೆ.
ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಮಹದಾಸೆಯ ಫಲವಾಗಿ 1909ರಲ್ಲಿ ಹುಟ್ಟಿಕೊಂಡ ಶಿವಯೋಗ ಮಂದಿರ, ದೇಶದ ಮಠ-ಮಾನ್ಯಗಳಿಗೆ ಮಠಾಧೀಶರನ್ನು ಸಿದ್ಧಪಡಿಸಿಕೊಡುವ ಶ್ರದ್ಧಾ ಕೇಂದ್ರ. ಹಾನಗಲ್ ಕುಮಾರೇಶ್ವರ ಶಿವಯೋಗಿಗಳು 1930ರಲ್ಲಿ ಲಿಂಗೈಕ್ಯರಾದ ಬಳಿಕ ಹಾವೇರಿಯ ಶ್ರೀ ಶಿವಬಸವ ಶ್ರೀಗಳು ಅಧ್ಯಕ್ಷರಾಗಿದ್ದರು. ಬಳಿಕ ಬೆಳಗಾವಿಯ ಶ್ರೀ ನಾಗನೂರ ಮಹಾಸ್ವಾಮೀಜಿ ಕೂಡ ಅಧ್ಯಕ್ಷರಾಗಿ ತಮ್ಮ ಸೇವೆ ಸಲ್ಲಿಸಿದ್ದರು. ನಂತರ ಸುಮಾರು 50 ವರ್ಷಗಳ ಕಾಲ ಶ್ರೀ ಸದಾಶಿವ ಸ್ವಾಮೀಜಿ ಸಂಚಾಲಕರಾಗಿ ಸೇವೆಗೈದಿದ್ದಾರೆ. ಬಳಿಕ 1983ರಲ್ಲಿ ಡಾ|ಸಂಗನಬಸವ ಸ್ವಾಮೀಜಿ, ಶಿವಯೋಗ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ಮೊದಲ ಬಾರಿಗೆ ನೇಮಕಗೊಂಡರು. ಸುಮಾರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ನಡುವೆ ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀಗಳು 1988ರಲ್ಲಿ ಅಧ್ಯಕ್ಷರಾದರೆ, ನಾಗನೂರ ಶ್ರೀ ಶಿವಬಸವ ಸ್ವಾಮೀಜಿ ಸೇವೆ ಸಲ್ಲಿಸಿದರು. ಪುನಃ 1999ರಲ್ಲಿ ಮತ್ತೆ ಶಿವಯೋಗ ಮಂದಿರದ ಅಧ್ಯಕ್ಷರಾದ ಡಾ|ಸಂಗನಬಸವ ಸ್ವಾಮೀಜಿ, ಇಲ್ಲಿಯ ವರೆಗೆ ನಿರಂತರವಾಗಿ ಹಲವಾರು ಸಾಮಾಜಿಕ, ಧಾರ್ಮಿಕವಾಗಿ ಶಿವಯೋಗ ಮಂದಿರವನ್ನು ಎತ್ತರಕ್ಕೆ ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಾವು ಅಧ್ಯಕ್ಷರಾಗಿದ್ದ ವೇಳೆ ನಾಡಿನ ವಿವಿಧ ಮಠಗಳ ಸುಮಾರು 14 ಜನ ಹಿರಿಯ ಸ್ವಾಮೀಜಿಗಳು, ರಾಜ್ಯದ ವಿವಿಧೆಡೆಯ 7 ಜನ ಸಾಂಸಾರಿಕ ಹಿರಿಯ ಮುಖಂಡರನ್ನು ಒಳಗೊಂಡ ಶಿವಯೋಗ ಮಂದಿರ
ಟ್ರಸ್ಟ್ ಸದಸ್ಯರನ್ನಾಗಿ ಮಾಡಿ, ಅವರೊಂದಿಗೆ ಈ ಕೇಂದ್ರದ ಹೆಸರನ್ನು ನಾಡಿನಾದ್ಯಂತ ಪರಸರಿಸಲು ಕಾರಣರಾಗಿದ್ದರು.
Related Articles
Advertisement
ಮುಖ್ಯವಾಗಿ ಮೊದಲ ದಿನದ ಕಾರ್ಯಕ್ರಮಕ್ಕೆ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿದ್ದರು. ಶಿವಯೋಗ ಮಂದಿರ ಧಾರ್ಮಿಕ ಶ್ರದ್ಧಾ ಕೇಂದ್ರವಾಗುವ ಜತೆಗೆ, ಸಾಮಾಜಿಕವಾಗಿಯೂ ಬಲಗೊಳ್ಳಲು ಅವರ ಸೇವೆ ಅನನ್ಯ. ಹಾನಗಲ್ ಕುಮಾರೇಶ್ವರ ಶಿವಯೋಗಿಗಳು ಸ್ಥಾಪಿಸಿದ ಗೋ ಶಾಲೆಯನ್ನು ಇಂದಿಗೂ ಅತ್ಯಂತ ಪ್ರೀತಿಯಿಂದ ಮುನ್ನಡೆಸುತ್ತಿದ್ದ ಅವರು, 527 ಗೋವುಗಳ ಆರೈಕೆ ಮಾಡುತ್ತಿದ್ದರು.
ಸಂಪರ್ಕ ಕೊಂಡಿ: ಗುರು-ವಿರಕ್ಷತರು ಒಂದಾಗಬೇಕೆಂಬ ಸದುದ್ದೇಶದಿಂದ ಶಿವಯೋಗ ಮಂದಿರದಲ್ಲಿ 2200 ಜನ ದೇಶದ ವಿವಿಧೆಡೆಯ ಸ್ವಾಮೀಜಿಗಳು, ಪಂಚಪೀಠದ ಜಗದ್ಗುರುಗಳನ್ನು ಒಂದೇ ವೇದಿಕೆಯಡಿ ಕರೆಸಿ, ಗುರು-ವಿರಕ್ತರ ಬೃಹತ್ ಸಮಾವೇಶ ನಡೆಸಿದ್ದರು. ವೀರಶೈವ-ಲಿಂಗಾಯತ ಎಂಬ ಬೇಧ ಬಂದಾಗ, ನಾವೆಲ್ಲ ಒಂದೇ ಎಂಬ ತತ್ವ ಎತ್ತಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುರು-ವಿರಕ್ತರ ಮಧ್ಯೆ ಸಂಪರ್ಕ ಕೊಂಡಿಯಾಗಿ ಈ ಶಿವಯೋಗ ಮಂದಿರ ಹಾಗೂ ಡಾ|ಸಂಗನಬಸವ ಶ್ರೀಗಳು ನಿರಂತರವಾಗಿ ಕೆಲಸ ಮಾಡಿದ ಕೀರ್ತಿ ಅವರದು.
ಡಾ|ಸಂಗನಬಸವ ಶ್ರೀಗಳು ಶಿವಯೋಗ ಮಂದಿರ ಟ್ರಸ್ಟ್‌ಗೆ ಸುಮಾರು 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರ ಅವಧಿಯಲ್ಲಿ ಈ ವಟುಗಳ ಶ್ರದ್ಧಾ ಕೇಂದ್ರದ ಹೆಸರನ್ನು ನಾಡಿನೆಲ್ಲೆಡೆ ಮತ್ತಷ್ಟು ಪಸರಿಸಲು ಕಾರಣರಾಗಿದ್ದರು. ಗುರು-ವಿರಕ್ತರ ಸಂಪರ್ಕ ಕೊಂಡಿಯಾಗಿ, ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಂತಹ ಶ್ರೀಗಳನ್ನು ಕಳೆದುಕೊಂಡ ನಾವು, ಬಹಳ ದುಃ ಖದಲ್ಲಿದ್ದೇವೆ. ಶ್ರೀಗಳಿಗೆ ಹಾನಗಲ್ ಶ್ರೀ ಕುಮಾರೇಶ್ವರ ಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ.ಎಂ.ಬಿ. ಹಂಗರಗಿ, ಧರ್ಮದರ್ಶಿ, ಶಿವಯೋಗ ಮಂದಿರ ಟ್ರಸ್ಟ್ ಏಷ್ಯಾದ ಅತಿದೊಡ್ಡ ರಥದ ಹೆಗ್ಗಳಿಕೆ
ಶಿವಯೋಗ ಮಂದಿರದ ಶತಮಾನೋತ್ಸವ ಕಾರ್ಯಕ್ರಮದ ವೇಳೆ ಇಡೀ ಏಷ್ಯಾದಲ್ಲಿ ಅತಿದೊಡ್ಡ 65 ಅಡಿ ಎತ್ತರದ ರಥವನ್ನು 1.25 ಕೋಟಿ ವೆಚ್ಚದಲ್ಲಿ ತಯಾರಿಸಿ, ಲೋಕಾರ್ಪಗೊಣೆಗೊಳಿಸಿದ್ದರು. ಅಲ್ಲದೇ 1.50 ಕೋಟಿ ಮೊತ್ತದ ದಾಸೋಹ ಭವನ, ಮುಖ್ಯವಾಗಿ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಆಶಯದಂತೆ 3 ಕೋಟಿ ವೆಚ್ಚದ ಆಯುರ್ವೇದ ಆಸ್ಪತ್ರೆ ಸಿದ್ಧಪಡಿಸಿದ್ದಾರೆ. ಈ ಆಸ್ಪತ್ರೆ ಇನ್ನೂ ಲೋಕಾರ್ಪಣೆಗೊಳ್ಳಬೇಕಿದೆ. ಧಾರ್ಮಿಕ, ಕೃಷಿ, ಸಾಮಾಜಿಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಡಾ|ಸಂಗನಬಸವ ಶ್ರೀಗಳು, ಬಸವ ಪುರಾಣ ನಡೆಸುವ ಮೂಲಕ ಬಸವಣ್ಣನವರ ಆಚಾರ-ವಿಚಾರಗಳನ್ನು ತಿಳಿಸುವ ಮಹತ್ವದ ಕೆಲಸ ಮಾಡಿದ್ದರು. ಪ್ರತಿವರ್ಷ ನಡೆಯುವ ಶಿವಯೋಗ ಮಂದಿರ ಜಾತ್ರೆಯ ವೇಳೆ ಕೃಷಿ ವಿಜ್ಞಾನಿಗಳನ್ನು ಕರೆಸಿ ಅವರಿಗೆ ಕೃಷಿ ಮಾಹಿತಿ ಕೊಡಿಸುತ್ತಿದ್ದರು. ಜವಾರಿ ಆಕಳು-ಎತ್ತು ಸಾಕಿ-ಬೆಳೆಸುವ ಕುರಿತು ಅತಿಹೆಚ್ಚು ತಿಳಿವಳಿಕೆ ನೀಡುತ್ತಿದ್ದರು.