Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಉತ್ಸವ;ಪಾದಯಾತ್ರಿಗಳ ಆಗಮನಕ್ಕೆ ಸಿದ್ಧತೆಪೂರ್ಣ

09:23 AM Mar 06, 2024 | Team Udayavani |

ಬೆಳ್ತಂಗಡಿ: ಮಹಾಶಿವರಾತ್ರಿ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಜ್ಜಾಗಿದೆ. ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಪಾದಯಾತ್ರೆಲ್ಲೇ 30 ಸಾವಿರಕ್ಕೂ ಅಧಿಕ ಮಂದಿ ಬರಲಿದ್ದಾರೆ. ರಾಜ್ಯದ ನಾನಾ ಕಡೆಯಿಂದ ಬರುವ ಪಾದಯಾತ್ರಿಗಳ ಸ್ವಾಗತಕ್ಕೆ ಚಾರ್ಮಾಡಿ ಪ್ರದೇಶದಲ್ಲಿ ಸಿದ್ಧತೆ ಪೂರ್ಣಗೊಂಡಿದೆ.

Advertisement

ಪಾದಯಾತ್ರಿಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಪ್ರಥಮ ಆದ್ಯತೆ ನೀಡಲಾಗಿದ್ದು, ದಾರಿಯುದ್ದಕ್ಕೂ ಕಸದ ಬುಟ್ಟಿ, ಗೋಣಿ ಚೀಲಗಳನ್ನು ಇರಿಸಿ ಕಸ ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ. ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಸೇರಿದಂತೆ ಅಲ್ಲಲ್ಲಿ ಪಾದಯಾತ್ರಿಗಳ ತಂಡಗಳಿಗೆ ಅಡುಗೆ ತಯಾರಿ, ವಿಶ್ರಾಂತಿ ಪಡೆಯಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅರಣ್ಯ ಇಲಾಖೆಯು ಘಾಟಿ ಪರಿಸರದ ರಸ್ತೆ ಬದಿಯ ಗಿಡಗಂಟಿ, ತ್ಯಾಜ್ಯ ತೆರವುಗೊಳಿಸಿ ಸುಗಮವಾಗಿ ಸಾಗಲು ವ್ಯವಸ್ಥೆ ಕಲ್ಪಿಸಿದೆ. ಅಲ್ಲಲ್ಲಿ ಸಿಬಂದಿಯನ್ನು ನಿಯೋಜಿಸಿ ಪಾದಯಾತ್ರಿಗಳ ಸೇವೆಗೆ ಕ್ರಮ ಕೈಗೊಳ್ಳಲಾಗಿದೆ. ಪಾದಯಾತ್ರಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಈಗಾಗಲೇ ಕೆಲವು ತಂಡಗಳ ಪಾದಯಾತ್ರಿಗಳು ಚಾರ್ಮಾಡಿ, ಮುಂಡಾಜೆ ತಲುಪಿದ್ದರೆ ಕೆಲವೊಂದು ತಂಡಗಳು ಧರ್ಮಸ್ಥಳ ತಲುಪಿವೆ. ಶುಕ್ರವಾರ ಶಿವರಾತ್ರಿ ಆಚರಣೆ ಇರುವುದರಿಂದ ಅಂದು ಶ್ರೀ ಕ್ಷೇತ್ರದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಕಸ ಹಾಕಲು ಅಲ್ಲಲ್ಲಿ ವ್ಯವಸ್ಥೆ

Advertisement

ದಾರಿಯುದ್ದಕ್ಕೂ ಅಲ್ಲಲ್ಲಿ ಕಸ ಹಾಕಲು ಗೋಣಿ ಚೀಲಗಳನ್ನು ಸ್ಥಳೀಯರು, ಸಂಘ-ಸಂಸ್ಥೆಯವರು ವ್ಯವಸ್ಥೆ ಮಾಡಿದ್ದಾರೆ. ಹಾಗೂ ಕಸವನ್ನು ಕಸದ ಬುಟ್ಟಿಗೆ ಹಾಕಿ ಸಹಕರಿಸುವಂತೆ ಸೂಚನೆಗಳನ್ನು ಅಳವಡಿಸಲಾಗಿದೆ. ಚಾರ್ಮಾಡಿಯಿಂದ ಮುಂಡಾಜೆ, ಉಜಿರೆ ಅಥವಾ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ತೆರಳುವ ರಸ್ತೆಯ ಬದಿ ಅಲ್ಲಲ್ಲಿ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿವೆ. ಇವು ಜ್ಯೂಸ್‌, ನೀರು, ಕಲ್ಲಂಗಡಿ ಉಪಹಾರ ವ್ಯವಸ್ಥೆಗಳನ್ನು ಹೊಂದಿವೆ. ಅರಣ್ಯ ಇಲಾಖೆಯಿಂದ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ಪಂಜ, ಸುಬ್ರಹ್ಮಣ್ಯ, ಬೆಳ್ತಂಗಡಿ, ಉಪ್ಪಿನಂಗಡಿ ಅರಣ್ಯ ಇಲಾಖೆ ವಲಯಗಳ ಮೂಲಕ ಕುಡಿಯುವ ನೀರು, ತಂಗಲು ತಾತ್ಕಾಲಿಕ ಶೆಡ್‌ ವ್ಯವಸ್ಥೆ, ಕಸವಿಲೇವಾರಿಗೆ ಕಸದ ಬುಟ್ಟಿಗಳನ್ನು ಹಾಕಲಾಗುವುದು ಎಂದು ಜಿಲ್ಲಾ ಡಿ.ಎಫ್‌.ಒ. ಆಂಟನಿ ಮರಿಯಪ್ಪ ತಿಳಿಸಿದ್ದಾರೆ.

ಉಜಿರೆ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಎಸ್‌ಡಿಎಂ ಕಾಲೇಜು ಬಳಿ, ಧರ್ಮಸ್ಥಳ ಹಾಗೂ ಬೂಡುಜಾಲು ಪ್ರದೇಶಗಳಲ್ಲಿ ಉಚಿತ ಆರೋಗ್ಯ ಸೇವೆಯ ಕೌಂಟರ್‌ಗಳನ್ನು ತೆರೆಯಲಾಗಿದೆ. 3 ಆ್ಯಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next