ಸುರಪುರ: ಮಹರ್ಷಿ ವಾಲ್ಮೀಕಿ ಜ್ಞಾನ ಸಂಪತ್ತಿನ ಮೇರು ಪರ್ವತ ಇದ್ದಂತೆ. ಬದುಕಿಗೆ ಹತ್ತಿರದ ನೈತಿಕ ಮೌಲ್ಯಗಳುಳ್ಳ ರಾಮಾಯಣ ಮಹಾಕಾವ್ಯವನ್ನು ರಚಿಸುವ ಮೂಲಕ ಸಮಾಜಕ್ಕೆ ಉತ್ಕೃಷ್ಟ ಗ್ರಂಥ ನೀಡಿದ ಮಹಾನ್ ದಾರ್ಶನಿಕ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಬುಧವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಿತ ಕೆಳ ಸಮುದಾಯದಲ್ಲಿ ಜನಿಸಿದ್ದರು ಕೂಡಾ ಅವರು ತಮ್ಮ ವಿದ್ವತ್ ಮತ್ತು ಪ್ರಖರ ಪಾಂಡಿತ್ಯದಿಂದ ಮೇಲೆ ಬಂದರು. ರಾಮಾಯಣ ಮಹಾ ಕಾವ್ಯದ ಮೂಲಕ ಮಾನವ ಜನಾಂಗಕ್ಕೆ ಸತ್ಯ, ಧರ್ಮ, ನ್ಯಾಯ, ನೀತಿಗಳ ಬಗ್ಗೆ ತಿಳಿಸಿಕೊಡುವ ಮೂಲಕ ವಿಶ್ವದ ಸಂತರಾಗಿದ್ದಾರೆ ಎಂದರು.
ಉಪನ್ಯಾಸಕ ಡಾ| ಉಪೇಂದ್ರ ನಾಯಕ ಸುಬೇದಾರ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದಿಂದ ಇಲ್ಲಿಯವರೆಗೆ ಸುರಪುರವನ್ನು ನಾಯಕ ಸಮುದಾಯದವರೆ ಆಳುತ್ತಿದ್ದಾರೆ. ಆದರೆ ಪರಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಕೆಲ ಸಮುದಾಯಗಳು ಕನಿಷ್ಠ ಸೂರಿಲ್ಲದೆ ನರಳುತ್ತಿವೆ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಗೋವಾ: ಫಲಾನುಭವಿಗಳೊಂದಿಗೆ ಮೋದಿ ಸಂವಾದ
ಪಿಎಸ್‌ಐ ಕೃಷ್ಣಾ ಸುಬೇದಾರ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ ಮಾತನಾಡಿದರು. ನಗರಸಭೆ ಅಧ್ಯಕ್ಷ ಸುಜಾತಾ ಜೇವರ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಇಒ ಅಮರೇಶ, ಸತ್ಯನಾರಾಯಣ ದಬರಾರಿ ಇದ್ದರು. ಇದೇ ವೇಳೆ ಸಮಾಜದ ಹಿರಿಯರನ್ನು, ಸಾಧಕರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು.
ನಗರದ ಡೊಣ್ಣಿಗೇರಿ ವಾಲ್ಮೀಕಿ ದೇವಸ್ಥಾನದಿಂದ ವಾಲ್ಮೀಕಿ ಭವನದವರೆಗೆ ಬೈಕ್ ರ್ಯಾಲಿ ಮೂಲಕ ಮೆರವಣಿಗೆ ಮಾಡಲಾಯಿತು. ಸಮಾಜದ ಗಣ್ಯರು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.