ನಟ ಗೋಲ್ಡನ್ ಸ್ಟಾರ್ ಗಣೇಶ್ ಸೋದರ ಕೃಷ್ಣ ಮಹೇಶ್ ನಾಯಕ ನಟನಾಗಿ ಅಭಿನಯಿಸಿರುವ “ಮಹಾರೌದ್ರಂ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಲವ್ ಕಥಾಹಂದರ ಹೊಂದಿರುವ “ಮಹಾರೌದ್ರಂ’ ಚಿತ್ರವನ್ನು “ಶ್ರೀನಿಮಿಷ ಮೂವೀಸ್’ ಮತ್ತು “ಮೌಲ್ಯ ಸಂದೇಶ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ವಂಶಿ ಸುನೀಲ್ ನಿರ್ಮಿಸಿದ್ದಾರೆ.
ಸುಮಾರು 2 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಲವು ಸಿನಿಮಾಗಳಿಗೆ ಫೈನಾಯ್ಸಿಯರ್ ಆಗಿದ್ದ, ಬಳಿಕ ತಾನೇ ನಿರ್ಮಾಪಕ, ನಿರ್ದೇಶಕ, ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಡಾ. ಆರ್. ಎಂ ಸುನೀಲ ಕುಮಾರ್ “ಮಹಾರೌದ್ರಂ’ಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಹಿಂದಿಯಲ್ಲಿ ಸಂಜಯ್ ದತ್ ಅಭಿನಯದ “ಆಲ್ ದ ಬೆಸ್ಟ್’ ಸಿನಿಮಾವನ್ನು 2015ರಲ್ಲಿ ಕನ್ನಡಕ್ಕೆ “ಒಂದ್ ಚಾನ್ಸ್ ಕೊಡಿ’ ಎಂಬ ಹೆಸರಿನಲ್ಲಿ ತೆರೆಗೆ ತಂದಿದ್ದ ಡಾ. ಆರ್. ಎಂ ಸುನೀಲ ಕುಮಾರ್, ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ. ಕಳೆದ ಹಲವು ದಶಕಗಳಿಂದ ಸಮಾಜದಲ್ಲಿ ಆಗಾಗ್ಗೆ ಸುದ್ದಿಯಾಗುವ ಹತ್ತಾರು ನೈಜ ಘಟನೆಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಡಾ. ಆರ್. ಎಂ ಸುನೀಲ ಕುಮಾರ್, “ಮಹಾರೌದ್ರಂ’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
ಇದನ್ನೂ ಓದಿ:ವಿದೇಶಿ ಕನ್ನಡಿಗರಿಂದ ‘ತೋತಾಪುರಿ’ಗೆ ಬಹುಪರಾಕ್
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ಡಾ. ಆರ್. ಎಂ ಸುನೀಲ್ ಕುಮಾರ್, “ಇದೊಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಸಬ್ಜೆಕ್ಟ್ ಸಿನಿಮಾ. ಭ್ರಷ್ಟ ರಾಜಕಾರಣಿಗಳು ಹೇಗೆ ಅಮಾಯಕ ಹುಡುಗರನ್ನು ದುರುಪಯೋಗಪಡಿಸಿಕೊಂಡು ಅವರ ಜೀವನ ಹಾಳು ಮಾಡುತ್ತಾರೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಪತ್ರಕರ್ತನಾಗಿ ನನ್ನ ಅನುಭವಗಳು ಮತ್ತು ಕೆಲ ವರ್ಷಗಳಿಂದ ನಾವು ಕಂಡಿರುವ, ಕೇಳಿರುವ ಅನೇಕ ನೈಜ ಘಟನೆಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ.
“ಇದೊಂದು ಆ್ಯಕ್ಷನ್ ಸಿನಿಮಾವಾದ್ರೂ, ಇದರಲ್ಲಿ ಲವ್, ಫ್ರೆಂಡ್ ಶಿಪ್, ಸೆಂಟಿಮೆಂಟ್ ಎಲ್ಲವೂ ಇದೆ. ಜೊತೆಗೆ ಇಂದಿನ ಯುವಕರಿ ಗೊಂದು ಮೆಸೇಜ್ ಕೂಡ ಸಿನಿಮಾದಲ್ಲಿದೆ. ಲಾಭ-ನಷ್ಟದ ಲೆಕ್ಕಚಾರವನ್ನು ಬದಿಗಿಟ್ಟು ಒಂದು ಸದಭಿರುಚಿ ಸಿನಿಮಾವನ್ನು ಪ್ರೇಕ್ಷಕರಿಗೆ ಕೊಡಬೇಕೆಂಬ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ. ಈಗಾ ಗಲೇ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಈ ವಾರ ಸಿನಿಮಾ ರಿಲೀಸ್ ಮಾಡಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.