Advertisement

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆ: ಶಿವಸೇನೆ ನಾಯಕರು ರೇಸ್‌ನಲ್ಲಿ

11:28 AM Jun 14, 2019 | Vishnu Das |

ಮುಂಬಯಿ: ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯು ತನ್ನ ಮಿತ್ರಪಕ್ಷ ಶಿವಸೇನೆಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಲು ಇಂಗಿತ ವ್ಯಕ್ತಪಡಿಸಿರುವುದರೊಂದಿಗೆ ಶಿವಸೇನೆಯ ಹಲವು ಪ್ರಮುಖ ನಾಯಕರ ನಡುವೆ ಆ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ರೇಸ್‌ ಆರಂಭವಾಗಿದೆ. ಈ ವಿಷಯದಲ್ಲಿ ಇದೀಗ ಎಲ್ಲರ ಕಣ್ಣು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಮೇಲಿದ್ದು, ಪಕ್ಷದಲ್ಲಿ ಯಾರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂಬ ಬಗ್ಗೆ ಅಂತಿಮ ನಿರ್ಣಯವನ್ನು ಉದ್ಧವ್‌ ಠಾಕ್ರೆ ಅವರು ತೆಗೆದುಕೊಳ್ಳಲಿದ್ದಾರೆ.

Advertisement

ಉಪ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಪಕ್ಷದ ಹಿರಿಯ ಸಚಿವ ಸುಭಾಷ್‌ ದೇಸಾಯಿ ಅವರು ಮುಂಚೂಣಿಯಲ್ಲಿದ್ದಾರೆ. ಆದರೆ ಅವರ ಹೆಸರನ್ನು ಹಲವು ಶಾಸಕರು ಮತ್ತು ನಾಯಕರು ವಿರೋಧಿಸುತ್ತಿದ್ದಾರೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ದೇಸಾಯಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನವನ್ನು ನೀಡಿ ಕೈಗಾರಿಕೆಯಂತಹ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ. ದೇಸಾಯಿ ಅವರು ಠಾಕ್ರೆ ಕುಟುಂಬದ ನಿಕಟವರ್ತಿಯಾಗಿರುವ ಕಾರಣ ಚೆಂಡು ಅವರ ಮೈದಾನಕ್ಕೆ ಬೀಳುವ ಸಾಧ್ಯತೆ ಹೆಚ್ಚಿದೆ.

ಆದರೆ, ಈ ಲೆಕ್ಕಾಚಾರವನ್ನು ಪಕ್ಷದ ಇನ್ನೋರ್ವ ಹಿರಿಯ ಸಚಿವ ಏಕನಾಥ ಶಿಂಧೆ ಅವರು ಬಿಗಡಾಯಿಸಲೂಬಹುದು. ಶಿಂಧೆ ಕೂಡ ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ತಳಮಟ್ಟದಲ್ಲಿ ಉತ್ತಮ ಹಿಡಿತವನ್ನು ಹೊಂದಿರುವ ಶಿವಸೇನೆಯ ಓರ್ವ ಬಲಿಷ್ಠ ನಾಯಕರಾಗಿರುವ ಶಿಂಧೆ ಅವರು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಥಾಣೆ ಮತ್ತು ಪಾಲ^ರ್‌ ಜಿಲ್ಲೆಗಳ ಎಲ್ಲಾ ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಪಕ್ಷಕ್ಕೆ ಗೆಲುವು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2014ರಲ್ಲಿ ರಾಜ್ಯದಲ್ಲಿ ಬಿಜೆಪಿಯು ತನ್ನ ಸ್ವಂತ ಬಲದ ಮೇಲೆ ಸರಕಾರವನ್ನು ರಚಿಸಿದಾಗ, ಏಕನಾಥ್‌ ಶಿಂಧೆ ವಿಪಕ್ಷ ನಾಯಕರಾಗಿದ್ದರು. ಆದರೆ, ಅನಂತರ ಶಿವಸೇನೆಯು ಬಿಜೆಪಿಯೊಂದಿಗೆ ಸರಕಾರದಲ್ಲಿ ಸೇರ್ಪಡೆಗೊಂಡಿತು. ಫಡ್ನವೀಸ್‌ ಸರಕಾರದ ಮೇಲೆ ಬಲವಾದ ನಂಬಿಕೆಯನ್ನು ಹೊಂದಿರುವ ತಳಮಟ್ಟದ ಮತದಾರರನ್ನು ಮೆಚ್ಚಿಸಲು ಶಿವಸೇನೆಯು ಉಪಮುಖ್ಯಮಂತ್ರಿ ಹುದ್ದೆ ಯನ್ನು ಬಯಸುತ್ತಿದೆ ಎನ್ನಲಾಗಿದೆ. ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶವು ಶಿವಸೇನೆಯ ಮತದಾನ ಪ್ರಮಾಣದಲ್ಲಿ ಶೇ. 4 ರಷ್ಟು ವೃದ್ಧಿಯನ್ನು ತೋರಿಸಿದೆ.

1995ರಲ್ಲಿ ರಾಜ್ಯದಲ್ಲಿ ಶಿವಸೇನೆಯು ಏಕೈಕ ಅತಿದೊಡ್ಡ ಪಕ್ಷವಾಗಿದ್ದಾಗ ಅದು ಮುಖ್ಯಮಂತ್ರಿ ಹುದ್ದೆ ಯನ್ನು ಹೊಂದಿತ್ತು ಮತ್ತು ಕಿರಿಯ ಮಿತ್ರಪಕ್ಷವಾಗಿ ಬಿಜೆಪಿ ಉಪ ಮುಖ್ಯಮಂತ್ರಿ ಹುದ್ದೆ ಯನ್ನು ಹೊಂದಿತ್ತು. ಇದೀಗ ಶಿವಸೇನೆಯು 1995ರ ಈ ಮಾದರಿಯನ್ನು ಅನುಷ್ಠಾನಗೊಳಿಸಲು ಒತ್ತಾಯಿಸುತ್ತಿದೆ.

ಕ್ಯಾಬಿನೆಟ್‌ ಆಕಾಂಕ್ಷಿಗಳು
ಶಿವಸೇನೆಯೊಳಗೆ ಕ್ಯಾಬಿನೆಟ್‌ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳಿದ್ದಾರೆ. ಶಿವಸೇನೆಯ ಹಿರಿಯ ಶಾಸಕ ರಾಜೇಶ್‌ ಕ್ಷೀರ್‌ಸಾಗರ್‌ ಅವರು ಪ್ರಬಲ ಸ್ಪರ್ಧಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಇವರು ಕೊಲ್ಲಾಪುರ ಜಿಲ್ಲೆಯ ಇಬ್ಬರು ಶಿವಸೇನೆ ಅಭ್ಯರ್ಥಿಗಳ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಶಿವಸೇನೆಗೆ ಸೇರ್ಪಡೆಯಾದ ಎನ್‌ಸಿಪಿ ಶಾಸಕ ಜಯದತ್ತ ಕ್ಷೀರ್‌ಸಾಗರ್‌ ಕೂಡ ಶಿವಸೇನೆ ಕೋಟಾದಿಂದ ಕ್ಯಾಬಿನೆಟ್‌ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ಆದರೆ ಇವರ ಸೇರ್ಪಡೆಗೆ ಕೆಲವು ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next