ಮುಂಬಯಿ/ಕೋಲ್ಕತಾ: ದೇಶದಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದೆ. ಅದಕ್ಕೆ ಪೂರಕವಾಗಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಸೋಂಕು ಪ್ರತಿಬಂಧಕ ನಿಯಮಗಳನ್ನು ತೆಗೆದು ಹಾಕಲು ತೀರ್ಮಾನಿಸಲಾಗಿದೆ.
ಬರೋಬ್ಬರಿ 2 ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಎ. 2ರಿಂದ ಅನ್ವಯವಾಗುವಂತೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ಸೋಂಕು ನಿಯಮಗಳನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ. ಆ ರಾಜ್ಯದಲ್ಲಿ ಗುಡಿ ಪಡ್ವ (ಕರ್ನಾಟಕದಲ್ಲಿ ಯುಗಾದಿ), ಮರಾಠಿ ಹೊಸ ವರ್ಷದ ಕೊಡುಗೆಯಾಗಿ ತೀರ್ಮಾನ ಜಾರಿಗೊಳಿಸಲಾಗುತ್ತದೆ. ಹೀಗಾಗಿ, ಜನರು ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸಬಹುದು ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಗುರುವಾರ 183 ಹೊಸ ಕೇಸುಗಳು ಮತ್ತು 1 ಸಾವಿನ ಪ್ರಕರಣ ದೃಢಪಟ್ಟಿದೆ. 2 ವರ್ಷಗಳಲ್ಲಿ 78,73,619 ಸೋಂಕು ಪ್ರಕರಣ, 1,47,780 ಮಂದಿ ಅಸುನೀಗಿದ್ದರು.
ನಿಯಮ ವಾಪಸ್: ಪಶ್ಚಿಮ ಬಂಗಾಲದಲ್ಲಿಯೂ ಕೂಡ ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸೋಂಕು ನಿಯಮಗಳನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಕೋಲ್ಕತಾದಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮತ್ತೂಂದೆಡೆ, ದೆಹಲಿ ವ್ಯಾಪ್ತಿಯಲ್ಲಿಯೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇದ್ದರೆ ದಂಡ ವಿಧಿಸದೇ ಇರಲು ವಿಪತ್ತು ನಿರ್ವಹಣಾ ಪ್ರಾಧಿಕಾರ ತೀರ್ಮಾನಿಸಿದೆ. ಸದ್ಯ ದಿಲ್ಲಿಯಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ.
ಬುಧವಾರದಿಂದ ಗುರುವಾರದ ಅವಧಿಯಲ್ಲಿ ದೇಶದಲ್ಲಿ 1,225 ಹೊಸ ಸೋಂಕು ಪ್ರಕರಣ ಮತ್ತು 28 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಮಾರ್ಚ್ 2020ರ ಬಳಿಕ 4.30 ಕೋಟಿ ಸೋಂಕು ಪ್ರಕರಣ, 5.21 ಲಕ್ಷ ಮಂದಿ ಕೊರೊನಾದಿಂದ ಅಸುನೀಗಿದ್ದಾರೆ.